Advertisement

ಲಾಕ್‌ಡೌನ್‌ ಬಳಿಕ ಚೇತರಿಕೆಯ ಹಾದಿಯಲ್ಲಿ ವಾಹನ ನೋಂದಣಿ

08:09 AM May 25, 2020 | mahesh |

ಮಂಗಳೂರು: ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಎಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ವಾಹನ ಮಾರುಕಟ್ಟೆಗೂ ಬಹುದೊಡ್ಡ ಹೊಡೆತ ಬಿದ್ದಿದ್ದು, ಸದ್ಯ ಚೇತರಿಕೆಯ ಸೂಚನೆ ಕಾಣಿಸುತ್ತಿದೆ.

Advertisement

ಲಾಕ್‌ಡೌನ್‌ ಅವಧಿಯಲ್ಲಿ ಮಂಗಳೂರು, ಪುತ್ತೂರು, ಬಂಟ್ವಾಳದಲ್ಲಿ ವಾಹನಗಳ ನೋಂದಣಿ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಕಳೆದ ಕೆಲವು ದಿನಗಳಿಂದ ವಾಹನ ಮಾರಾಟಕ್ಕೆ ಮತ್ತೆ ವೇಗ ದೊರೆತಿದೆ. ಸಹಜ ಸ್ಥಿತಿಯತ್ತ ಬರುವ ಸೂಚನೆ ಇದೆ. ಆದರೂ ಪೂರ್ಣ ಪ್ರಮಾಣದಲ್ಲಿ ವಾಹನ ಮಾರಾಟ ನಡೆಯಲು ಇನ್ನೂ ಹಲವು ದಿನ ಬೇಕಾಗಬಹುದು ಎಂಬ ಅಭಿಪ್ರಾಯ ತಜ್ಞರದ್ದು. ಸದ್ಯ ಬಿಎಸ್‌6 ವಾಹನಗಳು ಮಾತ್ರ ಮಾರಾಟವಾಗುತ್ತಿವೆ. ಬಿಎಸ್‌4 ಮಾರಾಟಕ್ಕೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆಯಾದರೂ ನಿರ್ಧಾರ ಅಂತಿಮಗೊಂಡಿಲ್ಲ. ಬಿಎಸ್‌6 ವಾಹನಗಳ ತಾತ್ಕಾಲಿಕ ನೋಂದಣಿಯೂ ಅಧಿಕವಿದೆ ಎಂಬುದು ಸದ್ಯದ ಮಾರುಕಟ್ಟೆಯ ಮಾಹಿತಿ.

ಮಂಗಳೂರಿನಲ್ಲಿ ಸಾಮಾನ್ಯವಾಗಿ ಪ್ರತೀ ತಿಂಗಳು ಮೂರರಿಂದ ನಾಲ್ಕು ಸಾವಿರ ವಾಹನಗಳು ನೋಂದಣಿಯಾಗುತ್ತವೆ. ಆದರೆ ಎಪ್ರಿಲ್‌, ಮೇ ತಿಂಗಳಿನಲ್ಲಿ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಸದ್ಯ ಒಂದು ವಾರದಿಂದ ನೋಂದಣಿ ಪ್ರಕ್ರಿಯೆ ಮತ್ತೆ ಚೇತರಿಕೆ ಕಾಣುತ್ತಿದ್ದು, ಶೇ. 25ರಷ್ಟು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಆರ್‌ಟಿಒ ಮೂಲಗಳು ತಿಳಿಸಿವೆ.

ಪುತ್ತೂರು-ಬಂಟ್ವಾಳದಲ್ಲಿಯೂ ಕುಸಿತ
ಪುತ್ತೂರು ಆರ್‌ಟಿಒ ಕಚೇರಿ ಮೂಲಕ ಜನವರಿಯಲ್ಲಿ 1,310, ಫೆಬ್ರವರಿಯಲ್ಲಿ 1,050, ಮಾರ್ಚ್‌ನಲ್ಲಿ 1,003 ವಾಹನಗಳು ನೋಂದಣಿಯಾಗಿದ್ದರೆ, ಎಪ್ರಿಲ್‌ನಲ್ಲಿ 170 ಹಾಗೂ ಮೇಯಲ್ಲಿ 210 ವಾಹನಗಳು ಮಾತ್ರ ನೋಂದಣಿಯಾಗಿವೆ. ಬಂಟ್ವಾಳ ಆರ್‌ಟಿಒ ಮೂಲಕ ಜನವರಿಯಲ್ಲಿ 720, ಫೆಬ್ರವರಿಯಲ್ಲಿ 640, ಮಾರ್ಚ್‌ನಲ್ಲಿ 620 ವಾಹನಗಳ ನೋಂದಣಿಯಾಗಿದ್ದರೆ, ಎಪ್ರಿಲ್‌ನಲ್ಲಿ 80 ಹಾಗೂ ಮೇ ತಿಂಗಳಲ್ಲಿ 190 ವಾಹನಗಳು ಮಾತ್ರ ನೋಂದಣಿಯಾಗಿವೆ. ಇಲ್ಲಿಯೂ ಕಳೆದೊಂದು ವಾರದಲ್ಲಿ ನೋಂದಣಿ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರಕಿದೆ ಎಂದು ಮೂಲಗಳು ತಿಳಿಸಿವೆ.

ಚೇತರಿಕೆ
ಲಾಕ್‌ಡೌನ್‌ ಸಮಯದಲ್ಲಿ ಜನರಿಗೆ ನಗರಕ್ಕೆ ಆಗಮಿಸಲು ಸಾಧ್ಯವಾಗದ ಕಾರಣದಿಂದ ವಾಹನ ನೋಂದಣಿ ಬಹುತೇಕ ಸ್ತಬ್ಧವಾಗಿತ್ತು. ಹೀಗಾಗಿ ಎರಡು ತಿಂಗಳಲ್ಲಿ ನೋಂದಣಿ ಕಡಿಮೆಯಾಗಿತ್ತು. ಸದ್ಯ ನೋಂದಣಿ ಪ್ರಕ್ರಿಯೆ ಮತ್ತೆ ಚೇತರಿಕೆ ಕಾಣುತ್ತಿದೆ. ನಿಧಾನವಾಗಿ ವಾಹನಗಳ ಖರೀದಿಯೂ ಹೆಚ್ಚುತ್ತಿದೆ.
-ಆರ್‌.ಎಂ.ವರ್ಣೇಕರ್‌ ಮಂಗಳೂರು ಆರ್‌ಟಿಒ


Advertisement
Advertisement

Udayavani is now on Telegram. Click here to join our channel and stay updated with the latest news.

Next