Advertisement

ಜಾಗ ಇದ್ರಷ್ಟೇ ವಾಹನ ನೋಂದಣಿ

11:25 AM Dec 13, 2019 | Suhan S |

ಬೆಂಗಳೂರು: ನಗರದಲ್ಲಿ ಹೊಸ ವಾಹನ ಖರೀದಿಸುವವರು ಕಡ್ಡಾಯವಾಗಿ ಆ ವಾಹನ ನಿಲುಗಡೆಗೆ ಜಾಗ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಇನ್ನು ಈಗಾಗಲೇ ವಾಹನ ಇರುವವರಿಗೆ ಜಾಗದ ಲಭ್ಯತೆಗೆ ಸಂಬಂಧಿಸಿದಂತೆ ದೃಢೀಕರಿಸಲು ಎರಡು ವರ್ಷಗಳ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯಲ್ಲಿ ಸಲ್ಲಿಸದಿದ್ದರೆ, “ದಂಡ ಪ್ರಯೋಗ’ ಮಾಡಬೇಕು.

Advertisement

– ಹೀಗಂತ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಹಾಗೂ ನಗರ ಭೂಸಾರಿಗೆ ನಿರ್ದೇಶನಾಲಯ (ಡಿಯುಎಲ್ಟಿ) ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಂಯುಕ್ತವಾಗಿ ಸಿದ್ಧಪಡಿಸಿದ ಸಮಗ್ರ ಸಂಚಾರ ಯೋಜನೆ (ಸಿಎಂಪಿ)ಯ ಕರಡಿನಲ್ಲಿ ಶಿಫಾರಸು ಮಾಡಲಾಗಿದೆ. ವಸತಿ ಪ್ರದೇಶಗಳ ರಸ್ತೆಯುದ್ದಕ್ಕೂ ಕಾರು ಮತ್ತಿತರ ಪ್ರಕಾರದ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ರಸ್ತೆಯ ಶೇ. 25 ಭಾಗವು ಈ ಅನಧಿಕೃತ ವಾಹನ ನಿಲುಗಡೆ ಅತಿಕ್ರಮಿಸುತ್ತಿದೆ. ಪರಿಣಾಮ ನಗರದ ಭೂಬಳಕೆಯಲ್ಲಿ ವ್ಯತ್ಯಾಸ ಆಗುತ್ತಿದ್ದು, ವಾಹನಗಳ ಸರಾಸರಿ ವೇಗ ಕಡಿಮೆ ಆಗುವುದರ ಜತೆಗೆ ಸಂಚಾರ  ದಟ್ಟಣೆಗೂ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೊಸ ವಾಹನಗಳ ನೋಂದಣಿಗೂ ಮುನ್ನ ಆ ವಾಹನ ನಿಲುಗಡೆಗೆ ಜಾಗದ ಲಭ್ಯತೆ ಬಗ್ಗೆ ಮಾಲಿಕರು ದೃಢೀಕರಿಸಬೇಕು. ಪ್ರಸ್ತುತ ಇರುವ ವಾಹನಗಳಿಗೆ ಈ ದೃಢೀಕರಣಕ್ಕೆ ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಕಲ್ಯಾಣ ಮಂಟಪಗಳಿಗೂ ಕಡ್ಡಾಯ? ಕಲ್ಯಾಣ ಮಂಟಪಗಳು, ದೊಡ್ಡ ರೆಸ್ಟೋರೆಂಟ್‌ ಗಳು, ಚಿತ್ರಮಂದಿರಗಳು, ಶಾಪಿಂಗ್‌ ಕೇಂದ್ರಗಳು ಮತ್ತಿತರ ಕಡೆಗಳಲ್ಲಿ “ಪೀಕ್‌ ಲೋಡ್‌ ಪಾರ್ಕಿಂಗ್‌’ (ದಟ್ಟಣೆ ನಿಲುಗಡೆ ವ್ಯವಸ್ಥೆ) ಸೌಲಭ್ಯ ಹೊಂದಿರುವ ಬಗ್ಗೆಯೂ ದೃಢೀಕರಿಸಿಕೊಳ್ಳಬೇಕು ಎಂದೂ ಕರಡಿನಲ್ಲಿ ತಜ್ಞರು ಶಿಫಾರಸು ಮಾಡಿದ್ದಾರೆ.

ಮೋಟಾರು ವಾಹನ ಕಾಯ್ದೆ ಮತ್ತು ಮಹಾನಗರ ಪಾಲಿಕೆ ಬೈಲಾ ಮೂಲಕ ಈ ಸಂಬಂಧದ ನಿಯಮ ರೂಪಿಸಬೇಕು. ಕಟ್ಟಡ ನಿರ್ಮಾಣ ಯೋಜನೆಗೆ ಅನುಮೋದನೆ ನೀಡುವ ವ್ಯವಸ್ಥೆಯಲ್ಲೂ ಈ ವಾಹನ ನಿಲುಗಡೆ ಜಾಗದ ಲಭ್ಯತೆಗೆ ಸಂಬಂಧಿಸಿದ ನಿಯಮ ಇರಬೇಕು. ಇದಲ್ಲದೆ, ಆನ್‌-ಸ್ಟ್ರೀಟ್‌ ಪಾರ್ಕಿಂಗ್‌ (ರಸ್ತೆಗಳ ಬದಿ ನಿಲುಗಡೆ)   ಪ್ರೋತ್ಸಾಹಿಸದಿರಲು “ವಾಹನ ನಿಲುಗಡೆ ಶುಲ್ಕ’ ನೀತಿ ಪರಿಚಯಿಸಬೇಕು. ಈಗಾಗಲೇ ಇರುವ ಆನ್‌-ಸ್ಟ್ರೀಟ್‌ ಪಾರ್ಕಿಂಗ್‌ ಶುಲ್ಕಕ್ಕಿಂತ ಆಫ್-ಸ್ಟ್ರೀಟ್‌ ಪಾರ್ಕಿಂಗ್‌ (ವಾಹನ ನಿಲುಗಡೆಗಾಗಿಯೇ ನಿರ್ಮಿಸಿದ ತಾಣಗಳು) ಶುಲ್ಕ ಕಡಿಮೆ ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next