ಮಹಾನಗರ: ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗಿ ಬದಲಾಗು ತ್ತಿದ್ದರೂ, ಮೂಲಸೌಕರ್ಯ ಗಳಲ್ಲೊಂದಾದ ಫುಟ್‌ಪಾತ್ ವ್ಯವಸ್ಥೆ ಮಾತ್ರ ಕೆಲವು ಕಡೆ ಇನ್ನೂ ಸುಧಾರಿಸಿಲ್ಲ. ನಗರದ ಕೆಲವೆಡೆ ವಾಹನಗಳನ್ನು ಫುಟ್‌ಪಾತ್‌ನಲ್ಲೇ ನಿಲ್ಲಿಸಲಾಗುತ್ತಿದೆ. ಟ್ರಾಫಿಕ್ ಜಾಮ್ ಇದ್ದರೆ ಕೆಲವೆಡೆ ದ್ವಿಚಕ್ರ ವಾಹನಗಳಂತೂ ರಸ್ತೆ ಬದಲು ಫುಟ್‌ಪಾತ್‌ನಲ್ಲೇ ಸಾಗು ತ್ತಿದೆ. ಇದರ ವಿರುದ್ಧ ಕಠಿನ ಕ್ರಮ ಜಾರಿಗೆ ಪೊಲೀಸರು ಮುಂದಾಗಬೇಕಿದೆ.
ಅನಧಿಕೃತವಾಗಿ ಅಂಗಡಿ
ನಗರದ ಕೆಲವೆಡೆ ಸ್ಮಾರ್ಟ್‌ಸಿಟಿ, ಮನಪಾ ವತಿಯಿಂದ ವ್ಯವಸ್ಥಿತ ಫುಟ್‌ಪಾತ್ ವ್ಯವಸ್ಥೆ ನಿರ್ಮಿಸಲಾಗಿದೆ. ಆದರೆ ಬೆಂದೂರ್‌ವೆಲ್, ಕಂಕನಾಡಿ, ಬಲ್ಮಠ, ಸ್ಟೇಟ್ ಬ್ಯಾಂಕ್, ಉರ್ವಾಸ್ಟೋರ್, ಚಿಲಿಂಬಿ, ಕೆ.ಎಸ್. ರಾವ್ ರಸ್ತೆ, ಪಡೀಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಫುಟ್‌ಪಾತ್ ವ್ಯವಸ್ಥೆ ಅಸಮರ್ಪಕವಾಗಿದೆ. ನಗರದ ಫುಟ್‌ಪಾತ್ ಗಳಲ್ಲಿ ಅನಧಿಕೃತವಾಗಿ ಅಂಗಡಿ, ತಳ್ಳುಗಾಡಿ ಇಟ್ಟು ವ್ಯಾಪಾರ ಮಾಡುವವರ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಟೈಗರ್ ಕಾರ್ಯಾಚರಣೆ ನಡೆಸುತ್ತಿದೆ. ಈ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ಈ ವಿಚಾರ ಚರ್ಚೆ ನಡೆಸಿ ಟೈಗರ್ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ತೀರ್ಮಾನಿಸಲಾಗಿತ್ತು. ಆದರೆ, ನಗರದ ಕೆಲವು ಪ್ರದೇಶದ ರಸ್ತೆ ಬದಿಗಳಲ್ಲಿ ಮಾತ್ರ ಪಾಲಿಕೆಯು ಕಾರ್ಯಾಚರಣೆ ನಡೆಸಿದೆ ಎಂಬ ಆಕ್ಷೇಪ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಅನೇಕ ಕಡೆಗಳಲ್ಲಿ ಪಾಲಿಕೆ ಟೈಗರ್ ಕಾರ್ಯಾಚರಣೆ ನಡೆಸಿದರೂ, ಮರುದಿನ ಅದೇ ಜಾಗದಲ್ಲಿ ಅನಧಿಕೃತ ವ್ಯಾಪಾರ ಸಾಗುತ್ತಿದೆ.
ಮನೆ ಮನೆಗೆ ಗ್ಯಾಸ್ ಸಂಪರ್ಕ ಕಾಮಗಾರಿ ಉದ್ದೇಶಕ್ಕೆ ಗೈಲ್ ಸಂಸ್ಥೆಯು ನಗರದ ಕೆಲವೊಂದು ಕಡೆಗಳಲ್ಲಿ ಪೈಪ್ ಲೈನ್ ರಾಶಿ ಹಾಕಿದೆ. ಅದರಲ್ಲೂ ನಗರದ ಎಂ.ಜಿ. ರಸ್ತೆ, ಬಲ್ಲಾಳ್‌ಬಾಗ್ ಸಹಿತ ವಿವಿಧ ಕಡೆಗಳಲ್ಲಿ ಫುಟ್‌ಪಾತ್‌ನಲ್ಲೇ ಪೈಪ್ ಲೈನ್ ರಾಶಿ ಹಾಕಲಾಗಿದೆ. ಈ ರೀತಿ ಪೈಪ್ ರಾಶಿ ಹಾಕಿ ಸುಮಾರು ಒಂದು ವರ್ಷ ಸಮೀಪಿಸಿದರೂ ಇದನ್ನು ತೆರವು ಮಾಡಲು ಸಂಬಂಧಪಟ್ಟ ಇಲಾಖೆ ಮುಂದೆ ಬಂದಿಲ್ಲ. ಸದ್ಯ ಈ ಪೈಪ್‌ಗ್ಳು ತುಕ್ಕು ಹಿಡಿದಿದ್ದು, ಸುತ್ತಲೂ ಗಿಡ-ಗಂಟಿಯಿಂದ ಕೂಡಿದೆ. ಇದರಿಂದಾಗಿ ಫುಟ್‌ಪಾತ್‌ನಲ್ಲಿ ನಡೆಯಲು ಸಂಕಷ್ಟ ಎದುರಿಸುವಂತಾಗಿದೆ.