ಬೆಂಗಳೂರು: ಮಹಿಳೆಯೊಬ್ಬರ ಮನೆಗೆ ನುಗ್ಗಿ ದಾಂಧಲೆಗೆ ಮುಂದಾಗಿ, ಅವರ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂ ಮಾಡಿದ್ದ ಆರೋಪಿ ಶ್ರೀನಿವಾಸ ಅಲಿಯಾಸ್ ಸೀಗಡಿ ಸೀನ (24) ಎಂಬಾತನ ಕಾಲಿಗೆ ಗುಂಡು ಹಾರಿಸಿ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸೀನನ ಬಲಗಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಹಲ್ಲೆಯಿಂದ ಗಾಯಗೊಂಡಿದ್ದ ಕಾನ್‌ಸ್ಟೆಬಲ್ ವೀರಭದ್ರ ಅವರ ಬಲಗೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆರೋಪಿ ತನ್ನ ಸಹಚರರ ಜತೆ ಸೇರಿಕೊಂಡು ರಾಜಗೋಪಾಲನಗರದಲ್ಲಿ ಮಹಿಳೆಯೊಬ್ಬರ ಮನೆಗೆ ಹೋಗಿದ್ದ.
ಮನೆ ಗೆ ಬೀಗ ಹಾಕಿದ್ದರಿಂದ ಆಕ್ರೋಶ ಗೊಂಡು ಮನೆ ಮುಂದೆ ನಿಂತಿದ್ದ 4 ಕಾರು, 11 ಆಟೋಗಳನ್ನು ಜಖಂ ಮಾಡಿ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದರು. ಈ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇತ್ತೀಚೆಗೆ ಸೀನಾನ ಸಹಚರರಾದ ಕಿರಣ್ ಮತ್ತು ಮನೋಜ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇವರ ಮಾಹಿತಿ ಮೇರೆಗೆ ಸೀನನ ಕೃತ್ಯ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸೀನನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಈತನ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಬಲಗಾಲಿಗೆ ಗುಂಡು: ಆರೋಪಿ ಸೀನ ಜಾಲಹಳ್ಳಿಯ ಹಳೇ ಬಸ್ ನಿಲ್ದಾಣ ಬಳಿಯ ಅಪಾರ್ಟ್‌ಮೆಂಟ್ ಸಮೀಪದ ಖಾಲಿ ಜಾಗದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ರಾಜಗೋಪಾಲನಗರ ಠಾಣೆ ಇನ್‌ಸ್ಪೆಕ್ಟರ್ ದಿನೇಶ್ ಪಾಟೀಲ್ ತಮ್ಮ ತಂಡದ ಜತೆ ಆರೋಪಿಯ ಬಂಧನಕ್ಕೆ ತೆರಳಿದ್ದರು. ಪೊಲೀಸರನ್ನು ಕಂಡು ಪರಾರಿಯಾಗಲು ಮುಂದಾಗಿದ್ದಾನೆ. ಆಗ ಕಾನ್‌ಸ್ಟೆಬಲ್ ವೀರಭದ್ರ ಆತನನ್ನು ಹಿಡಿಯಲು ಹೋದಾಗ, ತನ್ನ ಬಳಿಯಿದ್ದ ಡ್ರ್ಯಾಗರ್‌ನಿಂದ ಅವರ ಬಲಗೈ ಗಾಯಗೊಳಿಸಿದ್ದಾನೆ. ಆಗ ಪಿಐ ದಿನೇಶ್ ಒಂದು ಸುತ್ತ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆತನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮಹಿಳೆಗಾಗಿ ದಾಂಧಲೆ: ರಾಜಗೋಪಾಲನಗರದಲ್ಲಿ ಆಟೋ ಚಾಲಕ ರಂಗನಾಥ್, ಪತ್ನಿ ಜತೆ ವಾಸವಾಗಿದ್ದರು. ಈ ಮಧ್ಯೆ ಪೋಷಕರನ್ನು ಕಳೆದುಕೊಂಡಿದ್ದ ಕಮಲಾನಗರ ನಿವಾಸಿ ಕಿರಣ್ ಎಂಬ ಯುವಕನನ್ನು ಒಂದೂವರೆ ವರ್ಷದಿಂದ ದಂಪತಿ ಸಾಕಿಕೊಂಡಿದ್ದರು. ರಂಗನಾಥ್ ಪತ್ನಿಯ ಮೊಬೈಲ್ ನಂಬರ್ ಅನ್ನು ಸಂಗ್ರಹಿಸಿದ್ದ ಹರೀಶ್ ಎಂಬಾತ ಸೀನನಿಗೆ ಕೊಟ್ಟಿದ್ದ. ನಂತರ ಸೀನ, ಮನೋಜ್, ಹರೀಶ್ ಹಾಗೂ ಇತರೆ ಎಂಟು ಮಂದಿ ಆರೋಪಿಗಳು ಮಹಿಳೆಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಕಿರಣ್ ಮತ್ತು ಆಕೆಯ ಬಗ್ಗೆ ಸಹ್ಯವಾಗಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿ ದ್ದರು.
ಇದೇ ವಿಚಾರಕ್ಕೆ ರಂಗನಾಥ್ ದಂಪತಿ ನಡುವೆ ವಾಗ್ವಾದ ನಡೆದಿದ್ದು, ರಂಗನಾಥ್ ಪತ್ನಿ ಮೇಲೆ ಹಲ್ಲೆ ನಡೆಸಿ ವಿಚ್ಛೇದನ ಕೊಡುವುದಾಗಿ ಹೇಳಿ ಮನೆ ಬಿಟ್ಟು ಹೋಗಿದ್ದರು. ಈ ವಿಚಾರ ತಿಳಿದ ಕಿರಣ್, ಆರೋಪಿಗಳಿಗೆ ಕರೆ ಮಾಡಿ ಮತ್ತೂಮ್ಮೆ ಈ ರೀತಿ ಮಾಡಿದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ. ಅಲ್ಲದೆ, ಮನೆ ಬಳಿ ಬಂದು ಮಾತನಾಡುವಂತೆ ತಾಕೀತು ಮಾಡಿದ್ದ. ಅದರಿಂದ ಆಕ್ರೋಶಗೊಂಡ ಆರೋಪಿಗಳು, ಫೆ.4ರಂದು ರಾತ್ರಿ ಮದ್ಯದ ಅಮಲಿನಲ್ಲಿ ಆಟೋ ಮತ್ತು ದ್ವಿಚಕ್ರ ವಾಹನ ಗಳಲ್ಲಿ ರಂಗನಾಥ್ ಮನೆ ಬಳಿ ಬಂದಿದ್ದರು. ಅಷ್ಟರಲ್ಲಿ ಮಹಿಳೆ ಮನೆ ಬೀಗ ಹಾಕಿಕೊಂಡು ಹೋಗಿದ್ದರು. ಆರೋಪಿಗಳು ಮನೆ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಸಾಧ್ಯವಾ ಗದಿದ್ದಾಗ ಕಾರು, ಆಟೋಗಳನ್ನು ಹಾನಿಗೊಳಿಸಿ ದ್ದರು ಎಂದು ಪೊಲೀಸರು ಹೇಳಿದರು.