ಬಂಟ್ವಾಳ: ಪೊಲೀಸರು ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಮಂಗಳವಾರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 800ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 1.25 ಲಕ್ಷ ರೂ. ದಂಡ ವಸೂಲು ಮಾಡಿದ್ದಾರೆ.
ಬಂಟ್ವಾಳ ಎಎಸ್‌ಪಿ ಸೈದುಲ್ ಅಡಾವತ್ ನೇತೃತ್ವದಲ್ಲಿ 22 ಮಂದಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ವಾಹನದ ದಾಖಲೆ ಇಲ್ಲದ, ವಿಮೆ ಇಲ್ಲದ 80 ವಾಹನ ಗಳನ್ನು ಜಪ್ತಿ ಮಾಡಲಾಗಿದ್ದು ದಂಡ ವಸೂಲಿ ಮಾಡಿ 40 ವಾಹನಗಳನ್ನು ಬಿಡಲಾಯಿತು. 40 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಫಿಟ್‌ನೆಸ್ ಮತ್ತು ವಿಮೆ ರಹಿತ ವಾಹನಗಳ ಚಾಲಕರ ಮೇಲೆ ಕಟ್ಟುನಿಟ್ಟಿನ ಕ್ರಮದ ಮೂಲಕ ಸಂಚಾರ ನಿಯಮ ಪಾಲಿಸದೆ ಓಡಾಡುವವರ ಮೇಲೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಬಂಟ್ವಾಳ, ಬೆಳ್ತಂಗಡಿ, ವಿಟ್ಲ ಠಾಣಾ ಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಟ್ವಾಳ ಸಾರಿಗೆ ಅಧಿಕಾರಿ ಚರಣ್, ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ, ಮೆಲ್ಕಾರ್ ಟ್ರಾಫಿಕ್ ಎಸ್.ಐ ಮಂಜುಳಾ ಕೆ.ಎಂ., ವಿಟ್ಲ ಠಾಣಾಧಿಕಾರಿ ಯಲ್ಲಪ್ಪ ಮತ್ತು ಸಿಬಂದಿ ಬಂಟ್ವಾಳ, ವಿಟ್ಲ ಆಸು ಪಾಸಿನಲ್ಲಿ ತಪಾಸಣೆ ನಡೆಸಿದ್ದರು.