ಗುಂಡ್ಲುಪೇಟೆ: ಕೇರಳದ ಆಟೋ ಸೇರಿದಂತೆ ಲಾರಿ ಚಾಲಕರು ಅನ್ಯ ವಸ್ತುಗಳ ಸೋಗಿನಲ್ಲಿ ಕೇರಳ ತ್ಯಾಜ್ಯವನ್ನು ಗುಂಡ್ಲುಪೇಟೆ ಗಡಿ ಪ್ರದೇಶದಲ್ಲಿ ತಂದು ಎಸೆಯುತ್ತಿದ್ದಾರೆ. ದಿನ ಕಳೆದಂತೆ ಇದರ ಪ್ರಮಾಣವೂ ಹೆಚ್ಚಾಗ ತೊಡಗಿದೆ. ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸಮರ್ಪಕವಾಗಿ ವಾಹನಗಳ ತಪಾಸಣೆ ಮಾಡದ ಕಾರಣ ಕೇರಳ ತ್ಯಾಜ್ಯ ವಸ್ತುಗಳು ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ಹೆದ್ದಾರಿಯ ರಸ್ತೆ ಬದಿಯಲ್ಲಿ ವ್ಯಾಪಕವಾಗಿ ಬಂದು ಬೀಳುತ್ತಿವೆ.
ಇದರ ಅರಿವಿದ್ದರೂ ಪಟ್ಟಣ ಪುರಸಭೆ, ತಾಲೂಕು ಆಡಳಿತ, ಶಾಸಕ ಸಿ.ಎಸ್.ನಿರಂಜನಕುಮಾರ್ ನಿರ್ಲಕ್ಷ್ಯವಹಿಸಿದ್ದಾರೆ. ಶುಕ್ರವಾರ ಕೇರಳದ ಅಶೋಕ ಲೈಲ್ಯಾಂಡ್ ಪಿಕ್ ಅಪ್ ವಾಹನದ ಚಾಲಕನೋರ್ವ ಸುಮಾರು 5-6 ಚೀಲದಲ್ಲಿ ತ್ಯಾಜ್ಯ ವಸ್ತುಗಳನ್ನು ತನ್ನ ವಾಹನದಲ್ಲಿ ಕೇರಳದಿಂದ ತಂದು ಗುಂಡ್ಲುಪೇಟೆ-ಬತ್ತೇರಿ ರಸ್ತೆ ಪಕ್ಕ ಸುರಿಯಲು ಯತ್ನಿಸಿದ್ದಾನೆ.
ಇದನ್ನೂ ಓದಿ:- ಬಿದ್ದು ಮೂರು ತಿಂಗಳಾದರೂ ಇನ್ನೂ ದುರಸ್ತಿ ಕಾಣದ ದಾಂಡೇಲಿ ನಗರಸಭೆಯ ಆವರಣ ಗೋಡೆ
ಈ ಸಂದರ್ಭದಲ್ಲಿ ಕಾವಲು ಸಂಘಟನೆ ಪದಾಧಿಕಾರಿಗಳು ಆತನನ್ನು ಹಿಡಿದು ತರಾಟೆಗೆ ತೆಗೆದುಕೊಂಡು, ಕೇರಳ ರಾಜ್ಯದ ತ್ಯಾಜ್ಯವನ್ನು ಇಲ್ಲಿ ಸುರಿಯಲು ಕಾರಣವೇನು, ನಿನಗೆ ಕುಮ್ಮಕ್ಕು ನೀಡಿದವರ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೇರಳ ವಾಹನ ಚಾಲಕ ಕಕ್ಕಾಬಿಕ್ಕಿಯಾಗಿದ್ದಾರೆ. ನಂತರ ಕಾವಲು ಪಡೆ ಸದಸ್ಯರು ತ್ಯಾಜ್ಯ ಸುರಿದರೆ ಠಾಣೆಗೆ ಕರೆದೊಯ್ಯುವ ಎಚ್ಚರಿಕೆ ನೀಡಿದ ಹಿನ್ನೆಲೆ ಆತ ತ್ಯಾಜ್ಯವನ್ನು ಮತ್ತೆ ಕೇರಳಕ್ಕೆ ಕೊಂಡೊಯ್ದಿದ್ದಾನೆ.
ಅಧಿಕಾರಿಗಳ ಬೇಜವಾಬ್ದಾರಿ: ಮೂಲೆ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಸರಿಯಾದ ರೀತಿಯಲ್ಲಿ ವಾಹನ ತಪಾಸಣೆ ಮಾಡದೆ ಕಾರಣ ಕೇರಳ ತ್ಯಾಜ್ಯ ವಸ್ತುಗಳು ಪ್ರತಿದಿನ ರಾಶಿಗಟ್ಟಲೆ ಬಂದು ಬೀಳುತ್ತಿವೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ತನವೇ ಕಾರಣ.
ಇತ್ತ ಗಮನ ಹರಿಸಿ ತ್ಯಾಜ್ಯ ವಸ್ತುಗಳಿಗೆ ಕಡಿವಾಣ ಹಾಕದಿದ್ದರೆ ಮೂಮದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಮಸ್ಯೆ ತಲೆ ದೋರಲಿದೆ ಎಂದು ಕಾವಲು ಪಡೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್ ತಿಳಿಸಿದ್ದಾರೆ.
ತನಿಖೆ ನಡೆಸಿ: ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಇದು ಹಲವು ವ್ಯಕ್ತಿಗಳ ಕುಮ್ಮಕ್ಕಿನ ಮೇರೆಗೆ ನಡೆಯುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕೇರಳ ತ್ಯಾಜ್ಯ ಗುಂಡ್ಲುಪೇಟೆ ಗಡಿಯೊಳಗೆ ನುಸುಳದಂತೆ ಕ್ರಮ ವಹಿಸಬೇಕೆಂದು ಪುರಸಭಾ ಸದಸ್ಯ ಎನ್.ಕುಮಾರ್ ಆಗ್ರಹಿಸಿದ್ದಾರೆ.