Advertisement

ಇನ್ನು ಹಗಲಲ್ಲೂ ಬೆಳಗಲಿದೆ ದ್ವಿಚಕ್ರ ವಾಹನಗಳ ಹೆಡ್‌ಲೈಟ್‌!

12:51 PM Mar 23, 2017 | Harsha Rao |

- ಫೋರ್‌ ವೀಲರ್‌ಗೂ ಎಎಚ್‌ಒ 
- ಬ್ಯಾಟರಿ ಬಗ್ಗೆ  ಆತಂಕ ಬೇಡ
- ಎಪ್ರಿಲ್‌ ಬಳಿಕ ದಂಡ

Advertisement

ಪುತ್ತೂರು: ಹೊಸ ದ್ವಿಚಕ್ರ ವಾಹನ ಖರೀದಿಸಿ ಚಲಾಯಿಸಿಕೊಂಡು ಹೋಗುತ್ತಿದ್ದೀರಿ; ಎದುರಿನಿಂದ ಬರುವವರೆಲ್ಲರೂ “ಹೆಡ್‌ಲೈಟ್‌ ಉರಿಯುತ್ತಿದೆ; ಆಫ್ ಮಾಡಿ’ ಎಂದು ಸೂಚನೆ ನೀಡುತ್ತಿದ್ದಾರೆ; ಯಾವ ಸ್ವಿಚ್‌ ಆನ್‌/ಆಫ್ ಮಾಡಿದರೂ ದೀಪ ಮಾತ್ರ ಆರುತ್ತಿಲ್ಲ…. ಛೆ! ಹೊಸ ವಾಹನವೇ ದುರಸ್ತಿಗೆ ಬಂತಾ? ಎಂಬ ಚಿಂತೆ ನಿಮ್ಮನ್ನು ಕಾಡಿತೇ? ಚಿಂತೆ ಬೇಡ ಇನ್ನು ದ್ವಿಚಕ್ರ ವಾಹನಗಳಲ್ಲಿ ಹೆಡ್‌ಲೈಟ್‌ ಆರಿಸುವಂತಿಲ್ಲ; ಕೆಲವು ಕಂಪೆನಿಗಳು ಈಗಾಗಲೇ ಈ ನಿಯಮವನ್ನು ಜಾರಿಗೆ ತಂದಿವೆ.

ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸಲಹೆ ನೀಡುವಂತೆ ನೇಮಿಸಿದ ಸಲಹಾ ಸಮಿತಿಯ ವರದಿಯಂತೆ ಕೇಂದ್ರ ಸರಕಾರ ಈ ನಿಯಮ ಜಾರಿ ಮಾಡಲು ಮುಂದಾಗಿದೆ. ಹಳೆ ಸಾರಿಗೆ ನಿಯಮಗಳಿಗೆ ತಿದ್ದುಪಡಿ ತಂದು ದ್ವಿಚಕ್ರ ವಾಹನಗಳಿಗೆ ಅಟೋಮೆಟಿಕ್‌ ಹೆಡ್‌ಲೈನ್‌ ಆನ್‌ (ಎಎಚ್‌ಒ) ಸಿಸ್ಟಮ್‌ ತರಲು ಯೋಜನೆ ರೂಪಿಸಿದ ಪರಿಣಾಮ 2017ರ ಅನಂತರ ಉತ್ಪಾದನೆಗೊಳ್ಳುವ ಹಳೆ ಮತ್ತು ಹೊಸ ಮಾಡೆಲ್‌ ದ್ವಿಚಕ್ರ ವಾಹನಗಳಲ್ಲಿ ಹೆಡ್‌ಲ್ಯಾಂಪ್‌ ಆನ್‌ ಆಗಿರುತ್ತದೆ.

2015ರ ಅಂಕಿ-ಅಂಶದ ಆಧಾರದಲ್ಲಿ ಕರ್ನಾಟಕದಲ್ಲಿ 44,000 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 13,158 ಅಪಘಾತ ಬೈಕ್‌ಗೆ ಸಂಬಂಧಿಸಿದ್ದು. 1.5 ಲಕ್ಷ ಜನ ಮೃತಪಟ್ಟವರ ಪೈಕಿ 32,000 ಮಂದಿ ಬೈಕ್‌ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಡ್‌ಲೈಟ್‌ ನಿರಂತರ ಉರಿಸುವಿಕೆ ಅಪಘಾತ ನಿಯಂತ್ರಣಕ್ಕೆ ಕಾರಣವಾಗಬಹುದು ಎನ್ನುವ ಉದ್ದೇಶ ಹೊಂದಲಾಗಿದೆ.

ಅಧಿಕೃತ ಸುತ್ತೋಲೆ ಬಂದಿಲ್ಲ
ಈ ಹೊಸ ಎಎಚ್‌ಒ ನಿಯಮದ ಬಗ್ಗೆ ಆರ್‌ಟಿಒ, ಸಂಚಾರ ಠಾಣಾ ಇಲಾಖೆಗಳಿಗೆ ಅಧಿಕೃತ ಸುತ್ತೋಲೆ ಬಂದಿಲ್ಲ. ಹೊಸ ಬೈಕ್‌ಗಳಲ್ಲಿ ಎಎಚ್‌ಒ ಕಡ್ಡಾಯವಾಗಿದ್ದು, ತಂತ್ರಜ್ಞಾನ ಬಳಸಿ ಲೈಟ್‌ ಆಫ್‌ ಮಾಡಿ ವಾಹನ ಚಲಾಯಿಸಿದರೆ ದಂಡ ವಿಧಿಸುವಿಕೆಗೆ ಅವಕಾಶ ಇದೆಯೋ ಅನ್ನುವ ಬಗ್ಗೆ ಇನ್ನು ಸ್ಪಷ್ಟ ನಿರ್ದಶನ ಇಲಾಖೆಗಳಿಗೆ ಬಂದಿಲ್ಲ.

Advertisement

ಬಹುತೇಕ ಸವಾರರದ್ದು ಒಂದೇ ಪ್ರಶ್ನೆ. ಹೆಡ್‌ಲೈಟ್‌ ನಿರಂತರ ಚಾಲು ಆಗುವುದರಿಂದ ಬ್ಯಾಟರಿ ವೀಕ್‌ ಆಗುತ್ತದೆ. ವಾಹನ ಹಾಳಾಗುತ್ತದೆ. ಆದರೆ ಇದನ್ನು ದ್ವಿಚಕ್ರ ವಾಹನ ಶೋರೂಂನವರು ಒಪ್ಪುವುದಿಲ್ಲ. ಬ್ಯಾಟರಿ ಚಾರ್ಜ್‌ ಆಗಿ ಹೆಚ್ಚಾದ ವಿದ್ಯುತ್‌ ಪೂರೈಕೆ ಆಗುತ್ತದೆ. ಹಾಗಾಗಿ ಬೈಕ್‌ ಹಾಳಾಗುತ್ತದೆ, ಬ್ಯಾಟರಿ ವೀಕ್‌ ಆಗುತ್ತದೆ ಎಂಬ ಆತಂಕ ಬೇಡ ಎನ್ನುತ್ತಾರೆ ಶೋರೂಂ ಮಾಲಕರು.

ಫೋರ್‌ ವೀಲರ್‌ಗೂ ಎಎಚ್‌ಒ!
ದ್ವಿಚಕ್ರ ವಾಹನಗಳಂತೆ ಫೋರ್‌ವೀಲರ್‌ಗೂ ಈ ನಿಯಮ ಅಳವಡಿಕೆಯ ಚಿಂತನೆ ನಡೆದಿದೆ. ಕಡ್ಡಾಯ ನಿಯಮ ಇಲ್ಲಿಗೂ ಅನ್ವಯವಾದರೆ, ನಾಲ್ಕು ಚಕ್ರದ ಎಲ್ಲ ವಾಹನಗಳಿಗೂ ಈ ಸಿಸ್ಟಮ್‌ ಅಳವಡಿಕೆ ಆಗಲಿದೆ.

ಈ ನಿಯಮ ಯಾಕೆ?
ವಾಹನ ಅಪಘಾತ ತಪ್ಪಿಸುವುದು ಈ ಎಎಚ್‌ಒ ಅಳವಡಿಕೆಯ ಮುಖ್ಯ ಉದ್ದೇಶ. ಮುಂಜಾನೆ ವೇಳೆ ವಾಹನ ಸಂಚರಿಸುವ ಸಂದರ್ಭ ಬೆಳಕು ಕಡಿಮೆ ಆಗಿ ಅಪಘಾತಗಳು ಸಂಭವಿಸುತ್ತಿವೆ. ಅಟೋಮೆಟಿಕ್‌ ಹೆಡ್‌ಲ್ಯಾಂಪ್‌ ಆನ್‌ ಸಿಸ್ಟಮ್‌ನಿಂದ ಸವಾರರಿಗೆ ಎದುರುಗಡೆಯಿಂದ ಬರುವ ವಾಹನದ ಹೆಡ್‌ಲ್ಯಾಂಪ್‌ ಗೋಚರಿಸಿ ವಾಹನದ ಬರುವಿಕೆ ಅರಿವಾಗುತ್ತದೆ. ಸ್ವಿಚ್‌ ಆನ್‌/ಆಫ್‌ ಬಟನ್‌ ವ್ಯವಸ್ಥೆಯಲ್ಲಿ ಬಹುತೇಕರು ಆನ್‌ ಮಾಡಲು ಮರೆತಿರುತ್ತಾರೆ. ಅಟೋಮೆಟಿಕ್‌ ವ್ಯವಸ್ಥೆಯಿಂದ ಆ ಸಮಸ್ಯೆ ಬಾರದು. ಅಪಘಾತದ ಪ್ರಮಾಣದಲ್ಲಿ ಇಳಿಮುಖ ಸಾಧ್ಯ ಅನ್ನುವುದು ಹೊಸ ನಿಯಮದ ಹಿಂದಿನ ಉದ್ದೇಶ.

ವಿದೇಶಗಳಲ್ಲಿ ಹತ್ತು ವರ್ಷದ ಹಿಂದೆಯೇ ಇಂತಹ ನಿಯಮ ಜಾರಿಯಲ್ಲಿದೆ. ಭಾರತದಲ್ಲಿ ಇದು ಇತ್ತೀಚಿನ ವರ್ಷದ ಬೆಳವಣಿಗೆ. ಎಎಚ್‌ಒ ಸಿಸ್ಟಮ್‌ ಇರುವ ಹೊಸ ಬೈಕ್‌ಗಳಲ್ಲಿ ಬೀಮ್‌ ಬದಲಾಯಿಸಬಲ್ಲ ಬಟನ್‌ ಮಾತ್ರ ಇದೆ ಅನ್ನುತ್ತಾರೆ ಮೋಟಾರ್‌ ವಾಹನ ತಜ್ಞರು.

ನಿಯಮ ಮೀರಿದರೆ ದಂಡ
ಸ್ವಯಂಚಾಲಿತ ಹೆಡ್‌ಲ್ಯಾಂಪ್‌ ಬಗ್ಗೆ ಇಲಾಖೆಗೆ ಯಾವುದೇ ಸುತ್ತೋಲೆ ಬಂದಿಲ್ಲ. ದ್ವಿಚಕ್ರ ವಾಹನ ಖರೀದಿಸಿದ ಗ್ರಾಹಕ, ಅದರ ಮೂಲ ಸ್ವರೂಪವನ್ನು ಬದಲಾಯಿಸುವುದಕ್ಕೆ ಅವಕಾಶ ಇಲ್ಲ. ಹೆಡ್‌ಲೈಟ್‌ ಉರಿಸುವಿಕೆ ಕಡ್ಡಾಯ ಆದಲ್ಲಿ ತನ್ನಿಷ್ಟದಂತೆ ಹೆಡ್‌ಲೈಟ್‌ ಆನ್‌/ಆಫ್‌ ಮಾಡಿದರೆ ಸಾರಿಗೆ ನಿಯಮದ ಪ್ರಕಾರ ಅದು ಅಪರಾಧವೆನಿಸುತ್ತದೆ.
– ಫೆಲಿಕ್ಸ್‌  ಡಿ’ಸೋಜಾ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next