Advertisement
ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಲ್ಲಿ ಕೇವಲ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸುವುದಲ್ಲದೇ, ಸಾರ್ವಜನಿಕರಿಗೆ ಅನುಕೂಲವಾಗುವ ವಿಷಯಗಳೂ ಇದ್ದು, ಇವುಗಳು ಸಾರ್ವಜನಿಕರಿಗೆ ತಿಳಿಯಲು ಕೆಲವು ದಿನಗಳ ಕಾಯಬೇಕಷ್ಟೆ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ.
Related Articles
Advertisement
ತಪಾಸಣಾ ಕೇಂದ್ರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಮತ್ತು ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡ್‌ಗಳಲ್ಲಿ ಎರಡು ಆರ್‌ಟಿಒ ತಪಾಸಣಾ ಕೇಂದ್ರಗಳಿವೆ. ಈ ಎರಡೂ ಕೇಂದ್ರಗಳು ಕೇಂದ್ರ ಕಚೇರಿ ವ್ಯಾಪ್ತಿಗೊಳಪಟ್ಟಿದ್ದು, ಈ ಕೇಂದ್ರಗಳ ನಿರ್ವಹಣೆಯನ್ನು ಎಆರ್‌ಟಿಒಗಳು ನಿರ್ವಹಿಸುತ್ತಾರೆ. ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಅಧಿಕೃತ ವಾಗಿ ಕೇಂದ್ರ ಕಚೇರಿಯಿಂದ ಪರವಾನಗಿ ಪಡೆದು ಜಿಲ್ಲೆಯಲ್ಲಿ ನಿರ್ವಹಿಸುತ್ತಿದ್ದು, ಇವುಗಳ ಮೇಲ್ವಿಚಾರಣೆಯೂ ಕೇಂದ್ರ ಕಚೇರಿಗೆ ಒಳಪಟ್ಟಿದೆ.
ಹಿಂದಿನ ವರ್ಷ 2018-19 ನೇ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ 3984 ಆರ್‌ಟಿಒ ತಪಾಸಣೆಗಳು ನಡೆದಿದ್ದು, ಈ ಪೈಕಿ 138 ಪ್ರಕರಣಗಳಲ್ಲಿ ಕೇಸುಗಳನ್ನು ದಾಖಲಿಸಿ, 1.38 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ.
ಪ್ರಸಕ್ತ ಸಾಲಿನ ಏಪ್ರಿಲ್ 1 ರಿಂದ ಜೂನ್ ಅಂತ್ಯದವರೆಗೂ ವಾಯು ಮಾಲಿನ್ಯದ 505 ತಪಾಸಣಾ ಪ್ರಕರಣಗಳು ನಡೆದಿದ್ದು, 82 ಪ್ರಕರಣಗಳಲ್ಲಿ ಕೇಸು ದಾಖಲಿಸಲಾಗಿ, 82 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಈ ಅವಧಿಯಲ್ಲಿ 505 ಶಬ್ದಮಾಲಿನ್ಯ ಪ್ರಕರಣಗಳ ತಪಾಸಣೆ ನಡೆಸಿದ್ದು, 30 ಪ್ರಕರಣಗಳಲ್ಲಿ ಕೇಸು ದಾಖಲಿಸಿ, 30 ಸಾವಿರ ರೂ. ದಂಡ ವಸೂಲು ಮಾಡಲಾಗಿದೆ. ಹಿಂದಿನ ವರ್ಷದ ಆಡಿಟ್ ಆಕ್ಷೇ ಪಣೆಯ 84,357 ರೂ. ಅನ್ನು ಪ್ರಸಕ್ತ ಸಾಲಿನಲ್ಲಿ ವಸೂಲಿ ಮಾಡಲಾಗಿದೆ.
ಸರಕು ಸಾಗಾಣಿಕೆಯಲ್ಲಿ ಪ್ರಯಾಣಿಕರ ಸಾಗಾಣಿಕೆ: ಸರಕು ಸಾಗಾಣಿಕೆ ವಾಹನ ಪರವಾನಗಿ ಪಡೆದು ಅವುಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನಗಳ ತಪಾಸಣೆಗೆ ಕೋಲಾರ ಆರ್‌ಟಿಒದಿಂದ ವಿಶೇಷ ಆಂದೋಲನ ಮಾಡಲಾಗಿದೆ. 30 ಕೇಸುಗಳನ್ನು ದಾಖಲಿಸಿ, ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ನಿಗದಿತ ಅವಧಿಗೆ ದಂಡ ರೂಪದಲ್ಲಿ ವಾಹನದ ಆರ್‌ಸಿ ಮತ್ತು ಚಾಲಕರ ಪರವಾನಗಿಗಳನ್ನು ಅಮಾನತ್ತಲ್ಲಿ ಇಡಲು ಸೂಚಿಸಲಾಗಿದೆ. ಈ ಅಮಾನತಿನ ಅವಧಿಯಲ್ಲಿ ಸಂಬಂಧಪಟ್ಟ ವಾಹನವನ್ನು ತೆಗೆಯು ವಂತಿಲ್ಲ, ಚಾಲಕರು ವಾಹನ ಓಡಿಸುವಂತಿಲ್ಲ.
ನೋಂದಣಿ ಶೇ.50 ಕಡಿತ: ಆರ್ಥಿಕ ಹಿಂಜರಿತ ಮತ್ತು ವಿವಿಧ ಕಾರಣಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ವಾಹನ ನೋಂದಣಿ ಶೇ.50 ಕಡಿಮೆಯಾಗಿದೆ. ಪ್ರತಿ ನಿತ್ಯ ಕೋಲಾರ ಕಚೇರಿಯಲ್ಲಿ 80 ರಿಂದ 100 ದ್ವಿಚಕ್ರವಾಹನ ಗಳು ಮತ್ತು ನಾಲ್ಕೈದು ಕಾರುಗಳು ಮಾತ್ರವೇ ನೋಂದ ಣಿಗೆ ಬರುತ್ತಿವೆ. ಈ ಹಿಂದೆ ಇದರ ದುಪ್ಪಟ್ಟು ಸಂಖ್ಯೆಯ ವಾಹನಗಳು ನೋಂದಣಿಗೆ ಆಗಮಿಸುತ್ತಿತ್ತು.
ಚೈಲ್ಡ್ ಲಾಕ್ ತೆರವು: ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಟ್ಯಾಕ್ಸಿ ಗಾಡಿಗಳಲ್ಲಿ ವಾಹನ ಚಲಾವಣೆಯಾಗುತ್ತಿದ್ದಂತೆಯೇ ವಾಹನದ ಬಾಗಿಲುಗಳು ಸ್ವಯಂ ಚಾಲಿತವಾಗಿ ಲಾಕ್ ಆಗುವುದನ್ನು ತಡೆಯುವ ಚೈಲ್ಡ್ ಲಾಕ್ ವ್ಯವಸ್ಥೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಇದರಿಂದ ಮಹಿಳೆಯರ ಶೋಷಣೆ, ಕಿಡ್ನಾಪ್‌ನಂತ ಘಟನೆಗಳನ್ನು ನಿಗ್ರಹಿಸಲು ಸಾಧ್ಯವಿದೆ.
ರಸ್ತೆ ಸುರಕ್ಷತೆ: ಸರ್ಕಾರಗಳು ರಸ್ತೆ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುದಾನವು ಬಿಡುಗಡೆ ಯಾಗಿದೆ. ರಸ್ತೆ ಸುರಕ್ಷತಾ ಕಾರ್ಯಕ್ರಮ ಗ ಳಲ್ಲಿಯೇ ಈಗ ಹೊಸದಾಗಿ ತಿದ್ದುಪಡಿಯಾಗಿರುವ ಮೋಟಾರು ವಾಹನ ಕಾಯ್ದೆಯ ಕುರಿತು ಜನ ಜಾಗೃತಿ ಮೂಡಿಸಲು ಆರ್‌ಟಿಒ ಕಚೇರಿಯಿಂದ ನಿರ್ಧರಿಸಲಾಗಿದೆ.
ಚಾಲನಾ ಪರವಾನಗಿ: ಕೋಲಾರ ಆರ್‌ಟಿಒ ಕಚೇರಿ ಯಿಂದ ಪ್ರತಿ ನಿತ್ಯವೂ ಸರಾಸರಿ 100 ಮಂದಿ ತರಬೇತಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಪೈಕಿ ಕನಿಷ್ಠ 50 ಮಂದಿ ಚಾಲನಾ ಪರವಾನಗಿ ಪಡೆಯುತ್ತಿದ್ದಾರೆ. ಹೊಸ ಮೋಟಾರು ಕಾಯ್ದೆ ತಿದ್ದುಪಡಿ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಎಲ್ಆರ್ ಪಡೆದವರೆಲ್ಲರೂ ಡಿಎಲ್ ಪಡೆದುಕೊಳ್ಳಲು ಆಗಮಿಸುತ್ತಾರೆ. ಚಾಲನಾ ಪರವಾನಗಿ ಯನ್ನು ಸಕಾಲದ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸುತ್ತಿದ್ದು, ಹೀಗೆ ಅರ್ಜಿ ಸಲ್ಲಿಸಿದ 27 ದಿನಗಳಲ್ಲಿ ಚಾಲನಾ ಪರವಾನಗಿ ನೀಡಬೇಕಾಗಿದ್ದು, ಬಹುತೇಕ ಯಾವುದೇ ಬಾಕಿ ಇಲ್ಲದಂತೆ ಚಾಲನಾ ಪರವಾನಗಿ ಯನ್ನು ಮಂಜೂರು ಮಾಡಲಾಗುತ್ತಿದೆ. ಸಿಬ್ಬಂದಿ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಬಾಕಿ ಇರುವ ಪ್ರಕರಣಗಳನ್ನು ಮರುದಿನವೇ ಇತ್ಯರ್ಥ ಪಡಿಸಲು ಅಗತ್ಯಕ್ರಮವಹಿಸಲಾಗಿದೆ.
● ಕೆ.ಎಸ್.ಗಣೇಶ್