Advertisement

ಶಿರೂರು ಸಂತೆಯಲ್ಲಿ ಮಕ್ಕಳಿಂದ ತರಕಾರಿ ಮಾರಾಟ! 

06:00 AM May 27, 2018 | Team Udayavani |

ಬೈಂದೂರು:  ಪ್ರತೀ  ಗುರುವಾರ ಶಿರೂರು ಮಾರ್ಕೆಟ್‌ ವಠಾರದಲ್ಲಿ ವಾರದ ಸಂತೆ ನಡೆಯುತ್ತಿದೆ.  ಉ.ಕ.  ಹಾಗೂ ಮಲೆನಾಡು ಭಾಗದ ವ್ಯಾಪಾರಿಗಳು ಹೆಚ್ಚಾಗಿ ಆಗಮಿಸುವ ಈ ವಾರದ ಸಂತೆ ಈ ಬಾರಿ ಮಾತ್ರ ಭಿನ್ನವಾಗಿತ್ತು. ಕಾರಣವೆಂದರೆ ವ್ಯಾಪಾರಿಗಳ ಸಾಲಿನಲ್ಲಿ  ಪುಟಾಣಿ ಮಕ್ಕಳು ಸಹ ತರಕಾರಿ, ಇತರ ವಸ್ತುಗಳನ್ನು ಮಾರುತ್ತಿದ್ದರು. ಆಗಷ್ಟೆ ಪ್ರಾಥಮಿಕ ಹಂತದಲ್ಲಿರುವ ವಿದ್ಯಾರ್ಥಿಗಳ ವ್ಯಾವಹಾರಿಕ ಕೌಶಲವನ್ನು ನೋಡಿ ಪಾಲಕರು ಮನಸ್ಸಿನಲ್ಲಿ ನಗುತ್ತಿದ್ದರೆ ಸಾರ್ವಜನಿಕರು ಭೇಷ್‌ ಎನ್ನುತ್ತಿದ್ದರು.

Advertisement

ಜೇಸಿಐ ಶಿರೂರು ವತಿಯಿಂದ ಈ ಕಾರ್ಯಕ್ರಮ ನಡೆಸಲಾಗಿತ್ತು. ಮುಂಗಾರು ಸಂಭ್ರಮ ಹೆಸರಿನ ಈ ಪ್ರಾಯೋಗಿಕ ಕಾರ್ಯಕ್ರಮದಲ್ಲಿ  ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ತರಕಾರಿ, ಸೊಪ್ಪು, ಒಣಮೀನು, ಹಣ್ಣು, ಗೃಹೋಪಯೋಗಿ ವಸ್ತುಗಳು ಗ್ರಾಮೀಣ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವು ಮಕ್ಕಳು ವಿಶೇಷ ಆಫರ್‌ಗಳಿಂದ ನಿತ್ಯ ವ್ಯಾಪಾರಿಗಳಿಗೆ ಪೈಪೋಟಿ ನೀಡಿದ್ದರು. ವಿಶೇಷವಾಗಿ ಆರ್ಯುರ್ವೇದ ಹಾಗೂ ಗಿಡಮೂಲಿಕೆ ಸೇರಿದಂತೆ ಹಳ್ಳಿ ತಿನಿಸು ಹಾಗೂ ಗ್ರಾಮೀಣ ಭಾಗದ ವಸ್ತುಗಳ ಮಾರಾಟ ಆಕರ್ಷಣೆಯಾಗಿತ್ತು. ಅತೀ ಹೆಚ್ಚು ಮಾರಾಟ ಮಾಡಿ ಆದಾಯ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಸಹ ಘೋಷಿಸಲಾಗಿತ್ತು. 

ಹೊರಜಗತ್ತಿನ ಅರಿವು ಅಗತ್ಯ
ಶಾಲೆಯಲ್ಲಿ ಪಠ್ಯಕ್ಕೆ ಪೂರಕ ಶಿಕ್ಷಣ ನೀಡಲಾಗುತ್ತಿದೆ. ಹೊರಜಗತ್ತಿನ ಅರಿವು ಮಕ್ಕಳಿಗೆ ಅಗತ್ಯ. ವ್ಯಾವಹಾರಿಕ ಕೌಶಲ ಮತ್ತು ಸಾರ್ವಜನಿಕ ಸಂಪರ್ಕವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
– ಪಾಂಡುರಂಗ ಅಳ್ವೆಗದ್ದೆ,
ಶಿರೂರು ಜೇಸಿಐ ಅಧ್ಯಕ್ಷರು 

ವ್ಯವಹಾರ ಕೌಶಲ ಜ್ಞಾನ ಹೆಚ್ಚಳ
ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಸಾಕಷ್ಟು ಹೊರ ಪ್ರಪಂಚದ ಅನುಭವವಾಗುತ್ತದೆ. ಜನರೊಂದಿಗೆ ಹೇಗೆ ಬೆರೆಯಬೇಕೆಂಬ ಜ್ಞಾನ ಸಿಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವ್ಯವಹಾರ ಕೌಶಲ ಜ್ಞಾನ ದೊರೆತಂತಾಗುತ್ತದೆ. 
– ನಾಗರತ್ನಾ ರಾಜೇಶ್‌ ಆಚಾರಿ, ಹೆತ್ತವರು

Advertisement

Udayavani is now on Telegram. Click here to join our channel and stay updated with the latest news.

Next