ಶೃಂಗೇರಿ: ನವರಾತ್ರಿ ಮುಗಿದು ದೀಪಾವಳಿ ಹಬ್ಬ ಸಮೀಪಿಸುತ್ತಿದ್ದರೂ ಹೂವು, ಹಣ್ಣು, ತರಕಾರಿ, ದ್ವಿದಳಧಾನ್ಯದ ಬೆಲೆ ಗಗನಕ್ಕೇರಿದೆ. ಇದರಿಂದ ಗ್ರಾಹಕರು ಪರದಾಡುವಂತಾಗಿದೆ.
ವಿಪರೀತ ಮಳೆಯಿಂದಾಗಿ ತಾಲೂಕಿಗೆ ತರಕಾರಿ ಪೂರೈಕೆ ಕೊರತೆ ಎದುರಾಗಿದೆ. ಆದರೆ ಜಿಲ್ಲೆಯಲ್ಲಿಯೇ ಮಳೆಯಿಂದಾಗಿ ಸಂಪೂರ್ಣ ಫಸಲು ಹಾನಿಗೀಡಾಗಿದ್ದು ಇದರಿಂದಾಗಿ ತರಕಾರಿಬೆಲೆ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದೆ.
ಕೋವಿಡ್ ಲಾಕ್‌ಡೌನ್ ವೇಳೆ ತರಕಾರಿ ಕೊರತೆ ಉಂಟಾಗದಂತೆ ರೈತರು ಬೆಳೆದ ಫಸಲಿಗೆ ಉತ್ತಮಮಾರುಕಟ್ಟೆ ದೊರೆಯಲೆಂದು ಸರ್ಕಾರ ತಾಲೂಕಿನಲ್ಲಿ ಹಾಪ್‌ಕಾಮ್ಸ್ ಮಳಿಗೆ ತೆರೆಯಲಾಗಿತ್ತು. ಆದರೆ ಈಗ ತರಕಾರಿ ಬೆಲೆ ದುಪ್ಪಟ್ಟು ಆಗಿರುವುದರಿಂದ ಗ್ರಾಹಕರು ತರಕಾರಿ ಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಮಾರ್ಚ್, ಮೇ, ಜೂನ್‌ನಲ್ಲಿ 25 ರೂ, ಇದ್ದಟೊಮೇಟೋ ಈಗ 50 ರೂ. ವರೆಗೆ ಏರಿಕೆಯಾಗಿದೆ.ಈರುಳ್ಳಿ ಬೆಲೆ 80 ರೂ. ವರೆಗೆ ಏರಿಕೆ ಕಂಡಿದ್ದು,ಆಲೂಗಡ್ಡೆ, ಬೀನ್ಸ್, ಕ್ಯಾರೆಟ್, ನುಗ್ಗೆ, ಹಸಿಮೆಣಸು
ಬೆಲೆಯು ದುಪ್ಪಟ್ಟು ಏರಿಕೆಯಾಗಿದೆ. ಇದಕ್ಕೆಹೊರತಾಗಿ ಹೂವು, ಹಣ್ಣು ಬೆಲೆಯಲ್ಲಿಯೂ ಭಾರೀಏರಿಕೆಯಾಗಿದೆ. ನವರಾತ್ರಿ ಕಳೆದು ದೀಪಾವಳಿ ಹಬ್ಬದ ಸಮಯದಲ್ಲಿ ಇನ್ನಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಮನೆಗಳಿಗೆ ಬೇಕಾಗುವಷ್ಟು ತರಕಾರಿ ಬೆಳೆಯಲಾಗುತ್ತಿತ್ತು. ವಿಪರೀತ ಮಂಗಗಳ ಕಾಟದಿಂದಾಗಿ ರೈತರು ತರಕಾರಿ ಬೆಳೆಯಲು ಆಸಕ್ತಿ ಕಳೆದುಕೊಂಡಿದ್ದಾರೆ. ತೋಟದಲ್ಲಿ ಉಪ ಬೆಳೆಯಾಗಿ ಬಾಳೆಯನ್ನು ಬೆಳೆಯಲಾಗುತ್ತಿತ್ತು. ಮಂಗಗಳ ಕಾಟದಿಂದ ಇದೀಗ ಬಾಳೆ ಬೆಳೆಗೂ ಕುತ್ತು ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಕೆ.ಜಿ ಕ್ಯಾರೆಟ್‌ಗೆ 80ರೂ., ಈರುಳ್ಳಿ 80 ರೂ., ಟೊಮೇಟೋ 50 ರೂ., ಆಲೂಗಡ್ಡೆ 40 ರೂ., ಬದನೆ 30 ರೂ., ಕೋಸು 40 ರೂ., ಬೆಂಡೆ 50 ರೂ., ಮೂಲಂಗಿ 50 ರೂ., ನುಗ್ಗೆ 80 ರೂ. ದರದಲ್ಲಿ ಮಾರಾಟವಾಗುತ್ತಿದೆ. ದೀಪಾವಳಿ ವೇಳೆಗೆ ತರಕಾರಿ ದರ ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎನ್ನುತ್ತಾರೆ ಹಾಪ್‌ಕಾಮ್ಸ್ ಮಳಿಗೆ ವ್ಯಾಪಾರಿ ವಿಜಯಕುಮಾರ್.
ಅದೇ ರೀತಿ ಹೂವು, ಹಣ್ಣಿನ ಬೆಲೆಯೂ ತಾರಕಕ್ಕೇರಿದೆ. ಸೇಬು ಕೆ.ಜಿ. ಗೆ 100 ರೂ., ದಾಳಿಂಬೆ 120 ರೂ., ಕಿತ್ತಳೆ 50 ರೂ., ಮೂಸಂಬಿ 50 ರೂ. ಇದೆ. ಹೂವಿನ ದರವೂ ಏರಿಕೆ ಕಂಡಿದ್ದು ಸೇವಂತಿಗೆ 1 ಮಾರಿಗೆ 120 ರೂ., ಮಲ್ಲಿಗೆ 100 ರೂ. ದರ ಇದೆ. ಇದರೊಂದಿಗೆ ದ್ವಿದಳ ಧಾನ್ಯದ ಬೆಲೆಯುಕೊಂಡುಕೊಳ್ಳಲಾರದ ಸ್ಥತಿ ತಲುಪಿದೆ. ತೊಗರಿ ಬೇಳೆ ಕೆ.ಜಿ. ಗೆ 120 ರೂ., ಹೆಸರುಬೇಳೆ 100 ರೂ., ಉದ್ದಿನಬೇಳೆ 130 ರೂ., ಕಡಲೇಬೇಳೆ 80 ರೂ., ಕೊತ್ತಂಬರಿ 130 ರೂ., ಜೀರಿಗೆ 260 ರೂ. ಇದೆ. ಭಾರೀ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಆತಂಕಕ್ಕೀಡಾಗಿದ್ದಾರೆ. ಸರ್ಕಾರ ಬೆಲೆ ಏರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕಿದೆ.