Advertisement

ಕಾಯಿ ಪಲ್ಲೆಗಿಲ್ಲ ಕಿಮ್ಮತ್ತು

12:51 PM Aug 18, 2018 | |

ಸಿಂದಗಿ: ಸತತ ಬರಗಾಲ ಒಂದು ಕಡೆಯಾದರೆ ಇನ್ನೊಂದು ಕಡೆ ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ಹೀಗಾಗಿ ರೈತ ಸಂಕಷ್ಟದಲ್ಲಿದ್ದಾನೆ. ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಕಾಲುವೆ ನೀರು, ತೆರೆದ ಮತ್ತು ಕೊಳವೆ ಬಾವಿ ನೀರಿನಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

Advertisement

ಜೀವನ ನಡೆಸುವುದು ಕಷ್ಟಕರವಾಗಿರುವ ತುಟ್ಟಿ ದಿನಮಾನಗಳಲ್ಲಿ ರೈತ ತನ್ನ ಆರ್ಥಿಕ ಜೀವನ ಸುಧಾರಿಸಿಕೊಳ್ಳಲು ತೋಟಗಾರಿಕೆಯ ಅಲ್ಪಾವಧಿ ಕಾಯಿಪಲ್ಲೆ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾನೆ. ಮಾರುಕಟ್ಟೆಯಲ್ಲಿ ಯಾವ ತರಕಾರಿಗೆ ಬೆಳೆಗೆ ಧಾರಣಿ ಇದೆಯೋ ಆ ಬೆಳೆಯನ್ನು ತನ್ನ ಜಮೀನಿನಲ್ಲಿ ಹೆಚ್ಚಾಗಿ ಬೆಳೆಯುತ್ತಾನೆ. ಅದೇ ರೀತಿ ಸಾಕಷ್ಟು ರೈತರು ಏಕ ಕಾಲಕ್ಕೆ ಬೆಳೆಯುವುದರಿಂದ ಏಕ ಕಾಲಕ್ಕೆ ಕಾಯಿಪಲ್ಲೆ ಫಸಲು ಬರುತ್ತದೆ. ಆಗ ಮಾರುಕಟ್ಟೆಗೆ ಮಾರಾಟ ಮಾಡಲು ಬಂದಾಗ ಕಾಯಿಪಲ್ಲೆ ಧಾರಣಿ ಇಳಿದಿರುತ್ತದೆ. ಆಗ ರೈತನಿಗೆ ನಿರಾಶೆ ಎದುರಾಗುತ್ತದೆ. 

ಸಿಂದಗಿ ತಾಲೂಕಿನಲ್ಲಿ ತೋಟಗಾರಿಗೆ ಅಲ್ಪಾವಧಿ ಬೆಳೆ ಕಾಯಿಪಲ್ಲೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷ ತೋಟಗಾರಿಕೆ ಇಲಾಖೆಯ ನಿರಿಕ್ಷೆಗಿಂತಲು ಹೆಚ್ಚು ಕೃಷಿ ಭೂಮಿಯಲ್ಲಿ ಬೆಳೆ ಬಿತ್ತನೆಯಾಗಿದೆ. ಟೋಮೆಟೋ ಬೆಳೆಯುವ ಗುರಿ 86 ಹೆಕ್ಟೇರ್‌ ಇದ್ದರೆ 102 ಹೆಕ್ಟೇರ್‌ ಬಿತ್ತನೆಯಾಗಿದೆ. ಉಳ್ಳಾಗಡ್ಡಿ ಬೆಳೆಯುವ ಗುರಿ 374 ಹೆಕ್ಟೇರ್‌ ಇದ್ದರೆ 376 ಹೆಕ್ಟೇರ್‌ ಬಿತ್ತನೆಯಾಗಿದೆ. ಮೆಣಸಿನಕಾಯಿ ಬೆಳೆಯುವ ಗುರಿ 464 ಹೆಕ್ಟೇರ್‌ ಇದ್ದರೆ 469 ಹೆಕ್ಟೇರ್‌ ಬಿತ್ತನೆಯಾಗಿದೆ. ಜೊತೆಗೆ ಇದರಂತೆ ಕಾಯಿಪಲ್ಲೆ ಬೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ.

ತೋಟಗಾರಿಕೆ ಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆ ವಿವಿಧ ಯೋಜನೆಗಳ ಸದುಪಯೋಗ ಪಡೆಸಿಕೊಳ್ಳಲು ಕಳೆದ ವರ್ಷ 250ಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದರೆ ಪ್ರಸಕ್ತ ವರ್ಷದಲ್ಲಿ 500ಕ್ಕೂ ಹೆಚ್ಚು ರೈತರು ಅರ್ಜಿ ಹಾಕಿದ್ದಾರೆ. ಇವರಲ್ಲಿ ಕೆಲವರು ಬಹುವಾರ್ಷಿಕ ಬೆಳೆ ಬೆಳೆದರೆ ಇನ್ನುಳಿದ ಶೇ. 25ಕ್ಕೂ ಹೆಚ್ಚು ರೈತರು ಕಾಯಿಪಲ್ಲೆ ಬೆಳೆಯುತ್ತಾರೆ. ಅಲ್ಪಾವಧಿ ಬೆಳೆ ಬೆಳೆಯುವಲ್ಲಿ ಜಿಲ್ಲೆಯಲ್ಲಿ ಸಿಂದಗಿ ತಾಲೂಕು ದ್ವಿತೀಯ ಸ್ಥಾನದಲ್ಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕಾಯಿಪಲ್ಲೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳೆದ ಕಾಯಿಪಲ್ಲೆ
ಗೋವಾ ರಾಜ್ಯಕ್ಕೆ ರಫ್ತಾಗುತ್ತದೆ. ಹೆಚ್ಚಿನ ಒಂದು ಭಾಗ ವಿಜಯಪುರ ಜಿಲ್ಲೆಯ ವಿವಿಧ ತಾಲೂಕಿಗೆ ರಫ್ತಾಗುತ್ತದೆ. ತಾಲೂಕಿನ ರೈತರು ಬೆಳೆದ ಕಾಯಿಪಲ್ಲೆ, ಬೆರೆ ಜಿಲ್ಲೆಯಿಂದ ಬಂದ ಕಾಯಿಪಲ್ಲೆ ಏಕ ಕಾಲಕ್ಕೆ ಮಾರುಕಟ್ಟೆಗೆ ಬಂದಿರುವ ಕಾರಣ ಕಾಯಿಪಲ್ಲೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.

Advertisement

ಧೀರ್ಘಾವಧಿ ಬೆಳೆ ನಿಂಬೆ, ದಾಳಿಂಬರ ಬೆಳೆದರೂ 2-3 ವರ್ಷಗಳಿಂದ ಬೆಲೆ ಇಲ್ಲ. ಆರ್ಥಿಕತೆ ಹೆಚ್ಚಿಸಿಕೊಳ್ಳಲು ಅಲ್ಪಾವಧಿ ತೋಟಗಾರಿಕೆ ಬೆಳೆ ಕಾಯಿಪಲ್ಲೆ ಮಾಡಿದರೂ ರೈತನ ಕೈ ತುಂಬುತ್ತಿಲ್ಲ. ಕನಿಷ್ಠ 5-10 ರೂ.ಗೆ ಮಾರಾಟವಾಗಬೇಕಾದ ಮೆಂತೆ ಪಲ್ಲೆ, ಕೊತ್ತಂಬರಿ, ಕೆರಬೇವು, ರಾಜಗಿರಿ ಪಲ್ಲೆ, ಹುಣಸಿ ಪಲ್ಲೆ, ಮೂಲಂಗಿ, ಸಬ್ಬಸಿಗೆ, ತಪ್ಪಲ ಉಳ್ಳಾಗಡ್ಡಿ ಮುಂತಾದ ಕಾಯಿಪಲ್ಲೆಗಳು
5 ರೂ.ಗೆ 3 ಸುಡು, 10 ರೂ.ಗೆ 8 ಸೂಡು ಮಾರಾಟವಾದರೆ ರೈತರ ಗತಿಯೇನು 

„ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next