Advertisement

ತರಕಾರಿ, ನೀನಾದೆ ಉಪಕಾರಿ

01:20 PM Jul 18, 2019 | Sriram |

ಭೂಮಿ ತಾಯಿ, ತನ್ನನ್ನು ನಂಬಿದವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂಬ ಒಂದು ಮಾತಿದೆ. ವೃದ್ಧರೈತರೊಬ್ಬರು ತಮ್ಮ ತುಂಡು ಭೂಮಿಯನ್ನೇ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿಕೊಂಡು, ಅಷ್ಟರಲ್ಲೇ ವಿವಿಧ ಬಗೆಯ ತರಕಾರಿ ಬೆಳೆಗಳನ್ನು ಬೆಳೆದು ಜೀವನೋತ್ಸಾಹ ತೋರಿರುವುದೇ ಅದಕ್ಕೆ ಸಾಕ್ಷಿ!

Advertisement

ಉದರಕ್ಕೆ ತುತ್ತು ಅನ್ನ ಕಂಡುಕೊಂಡು ಸಮಾಜದ ಎದುರು ತಲೆಯೆತ್ತಿ ನಿಲ್ಲಬೇಕು ಎನ್ನುವ ಛಲ ಪ್ರತಿಯೊಬ್ಬ ಮನುಷ್ಯನದೂ ಆಗಿರುತ್ತದೆ. ಹದಿಹರೆಯದವರೇ ಆಗಿರಲಿ, ಇಳಿ ವಯಸ್ಸಿನವರೇ ಆಗಿರಲಿ ಎಲ್ಲರನ್ನೂ ಸಮಾನರಾಗಿ ನೋಡುತ್ತಾಳೆ ಭೂಮಿ ತಾಯಿ. ತನ್ನನ್ನು ನಂಬಿದವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂಬ ಒಂದು ಮಾತಿದೆ. ಅದಕ್ಕೆ ಸಾಕ್ಷಿಯೆಂಬಂತೆ ವೃದ್ಧ ರೈತನೊಬ್ಬ ತನ್ನ ತುಂಡು ಭೂಮಿಯಲ್ಲೇ ವಿವಿಧ ಬಗೆಗಳ ತರಕಾರಿ ಬೆಳೆಗಳನ್ನು ಜೀವನೋತ್ಸಾಹ ತೋರಿರುವುದೇ ಸಾಕ್ಷಿ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಟಿ ಬಸಾಪುರ ಗ್ರಾಮದ ವಯೋವೃದ್ಧ ಸುಮಾರು 70 ವರ್ಷದ ಆಸುಪಾಸಿನಲ್ಲಿರುವ ಜಿ. ಬಸಪ್ಪ ಮೂಲತ ಕೃಷಿ ಕುಟುಂಬದ ಹಿನ್ನಲೆಯವರು. ಪ್ರಾರಂಭದಲ್ಲಿ ಸಾಂಪ್ರಾದಾಯಿಕ ಬೆಳೆಗಳಾದ ಸಜ್ಜೆ, ನವಣೆ,ರಾಗಿಯಂತಹ ಬೆಳೆಗಳನ್ನು ಮಾತ್ರವೇ ಬೆಳೆಯುತ್ತಿದ್ದರು. ಅದರಿಂದ ಹೇಳಿಕೊಳ್ಳುವಂಥ ಲಾಭವೇನು ಬರುತ್ತಿರಲಿಲ್ಲ. ಬಂದ ಬೆಳೆ ತಮ್ಮ ಮನೆಗೆ ಸಾಕಾಗುತ್ತಿತ್ತು. ಇಷ್ಟನ್ನೇ ಬೆಳೆಯುವುದರಿಂದ ಆರ್ಥಿಕ ಸಂಕಷ್ಠಗಳು ಬಗೆಹರಿಯುವುದಿಲ್ಲ ಎಂಬುದು ಅರ್ಥವಾಗಿದ್ದು ಆಗಲೇ. ಪ್ರತಿ ವಾರ ಸಮೀಪದ ಸಂತೆಗೆ ತರಕಾರಿ ಕೊಳ್ಳಲು ಹೋಗುತ್ತಿದ್ದ ಇವರು, ತರಕಾರಿಗಳ ಮಾರುಕಟ್ಟೆ ಮೌಲ್ಯಗಳನ್ನು ತಿಳಿಯುತ್ತಾ ಹೋದರು.

ಮಾರುಕಟ್ಟೆ ಅಧ್ಯಯನ
ಫೆಬ್ರವರಿಯಿಂದ ಜೂನ್‌ವರೆಗೆ ಎಲ್ಲಾ ಬಗೆಯ ತರಕಾರಿಗಳಿಗೂ ಬಹುಬೇಡಿಕೆಯಿರುತ್ತದೆ ಮತ್ತು ಇದೇ ಸಮಯದಲ್ಲಿ ಅವುಗಳ ಬೆಲೆಯೂ ಗಗನ ಮುಟ್ಟಿರುತ್ತದೆ ಎಂಬುದು ಅವರ ಅನುಭವದ ಮಾತು. ಅದಕ್ಕೆ ಕಾರಣವನ್ನೂ ಅವರು ನೀಡುತ್ತಾರೆ. ಬೇಸಗೆಯಿಂದ ಮಳೆಗಾಲದವರೆಗೆ ರೈತರು ಹೊಲಗಳನ್ನು ಮಾಗಿ ಕಾಯಲು ಬಿಟ್ಟಿರುತ್ತಾರೆ. ಮದುವೆ- ಮುಂಜಿಗಳು ಈ ತಿಂಗಳಲ್ಲೇ ಹೆಚ್ಚಾಗಿ ನಡೆದು ಹೋಗುತ್ತವೆ. ಸೊಪ್ಪು ಕಾಯಿಪಲ್ಯಗಳು, ಕ್ಯಾರೆಟ್‌, ಬೆಂಡೆಕಾಯಿ ತರಕಾರಿಗಳಿಗೆ ಗ್ರಾಹಕ ಹೆಚ್ಚು ಹಣ ತೆತ್ತಾದರೂ ಕಾರ್ಯಕ್ರಮ ಮಾಡುತ್ತಾರೆ. ಹೀಗಾಗಿ ತರಕಾರಿ ಬೆಳೆಗಾರರಿಗೆ ಇದು ಸುಗ್ಗಿಯ ಕಾಲ.

ಕಳೆದ 6 ವರ್ಷಗಳಿಂದ ಬಸಪ್ಪ ತನ್ನ ಒಂದೆಕೆರೆ ತುಂಡು ಭೂಮಿಯಲ್ಲಿ ಥರಹೇವಾರಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಯಾವ ಕಾಲಮಾನದಲ್ಲಿ ಯಾವ ತರಕಾರಿಗೆ ಬಹುಬೇಡಿಕೆ ಇರುತ್ತದೆ ಎಂಬುದನ್ನು ಅನುಭವದ ಮೇಲೆ ಅರಿತಿರುವ ಬಸಪ್ಪ ಅವನ್ನೇ ಬೆಳೆದು ಲಾಭ ಪಡೆಯುತ್ತಾರೆ.

Advertisement

ಜಮೀನಿನ ವಿಂಗಡಣೆ
ಈ ವರ್ಷ ಕ್ಯಾರೆಟ್‌, ಜವಳಿಕಾಯಿ, ಆಗಲಕಾಯಿ, ಮೆಣಸಿನಕಾಯಿ, ಸಿಫಾಲ್ಕ, ಮೆಂತೆ, ಕೊತ್ತಂಬರಿ ರಾಜಗಿರಿ ಸೊಪ್ಪುಗಳನ್ನು ಬೆಳೆದು ಸಮೀಪದ ಮಾರುಕಟ್ಟೆ, ಸಂತೆಗಳಿಗೆ ಸರಬರಾಜು ಮಾಡಿದ್ದಾರೆ. ಇದರಿಂದಲೇ ಪ್ರತಿದಿನ 300 ರು. ಗಳಿಂದ 400 ರು. ಗಳನ್ನು ಗಳಿಸುತ್ತಾನೆ. ಈತನ ಬೆಳೆಗೆ ತಗಲುವ ವಾರ್ಷಿಕ ಖರ್ಚು ಬಹಳ ಕಡಿಮೆ. ಒಂದು ಎಕರೆ ಜಮೀನನ್ನು 4 ಭಾಗಗಳಾಗಿ ವಿಂಗಡಿಸಿಕೊಂಡು ಪ್ರತಿ ಭಾಗದಲ್ಲಿಯೂ ಮಡಿ ಮಾಡಿ ಬೇರೆ ಬೇರೆ ತರಕಾರಿಗಳನ್ನು ಹಾಕುತ್ತಾರೆ. ಹೊಲಕ್ಕೆ ಕೊಟ್ಟಿಗೆ ಗೊಬ್ಬರವನ್ನು ಹಾಕಿಸಲು, ಉಳುಮೆ ಮಾಡಲು, ತರಕಾರಿ ಬೀಜಗಳನ್ನು ಕೊಳ್ಳಲು ಒಟ್ಟು 1500 ರು. ಗಳನ್ನು ವಿನಿಯೋಗಿಸುತ್ತಾನೆ. ಬೆಳೆಯ ಮಧ್ಯದ ಅವಧಿಯಲ್ಲಿ ಒಂದು ಬಾರಿ ಮಾತ್ರ ಯುರಿಯಾ ಗೊಬ್ಬರವನ್ನು ಬೆಳೆಗೆ ಒದಗಿಸುತ್ತಾರೆ.

ಹಿಂದೆಲ್ಲಾ ಹಳ್ಳಿಯಲ್ಲಿ ವಾಹನ ಸೌಕರ್ಯ ಇರಲಿಲ್ಲ. ಹೀಗಾಗಿ ತರಕಾರಿಗಳ ಸಾಗಾಣಿಕೆಗೆ ಕಷ್ಟವಾಗುತ್ತಿತ್ತು. ಈಗ ಸಾರಿಗೆ ವ್ಯವಸ್ಥೆ ಅನುಕೂಲಕರವಾಗಿರುವುದರಿಂದ ನಿಗದಿತ ಸಮಯಕ್ಕೆ ಸಂತೆಗೆ ತೆರಳಿ ಉತ್ತಮ ದರ ನಿಗದಿಯಾದರೆ ಮಾತ್ರ ಮಾರಾಟ ಮಾಡುತ್ತಾರೆ. ಪ್ರತಿ 45 ದಿನಗಳಿಗೊಮ್ಮೆ ಬೆಳೆಗಳನ್ನು ಬದಲಾಯಿಸಿ ತನ್ನ ಜಮೀನಿನ ಜಾಗವನ್ನು ಸ್ವಲ್ಪವೂ ವ್ಯರ್ಥ ಮಾಡದೇ ಸಂಪೂರ್ಣವಾಗಿ ಬಳಸಿಕೊಂಡು 4 ರಿಂದ 5 ಬಗೆಯ ತರಕಾರಿಗಳನ್ನು ಒಂದು ಎಕರೆ ಜಮೀನಿನಲ್ಲಿ ಬೆಳೆಯುತ್ತಿರುವುದು ಸಾಹಸವೇ ಸರಿ.
– ಪ್ರದೀಪ ಎಂ.ಬಿ.

Advertisement

Udayavani is now on Telegram. Click here to join our channel and stay updated with the latest news.

Next