ಲಕ್ನೋ: ʼಟೊಮ್ಯಾಟೋʼ ಬೆಳೆಗೆ ಈಗ ಸುಗ್ಗಿಕಾಲ. ಒಂದು ಕೆಜಿ ಟೊಮ್ಯಾಟೋ ಬೆಲೆ 100 ರ ಮೇಲೆ ದಾಟಿದೆ. ಟೊಮ್ಯಾಟೋ ಖರೀದಿಸಲು ಜನ ಹಿಂದೆ ಮುಂದೆ ನೋಡುತ್ತಿದ್ದಾರೆ. ಆದರೆ ಇಲ್ಲೊಬ್ಬ ವ್ಯಾಪಾರಿ ಟೊಮ್ಯಾಟೋವನ್ನು ಕಾಯಲು ಬೌನ್ಸರ್ಸ್ ಗಳನ್ನು ನೇಮಿಸಿದ್ದಾರೆ.!
ಹೌದು. ಕೇಳಲು ಅಚ್ಚರಿಯಾದರೂ ಉತ್ತರ ಪ್ರದೇಶದ ವಾರಣಾಸಿಯಲ್ಲಿ ತರಕಾರಿ ವ್ಯಾಪಾರಿಯೊಬ್ಬ ತನ್ನ ಅಂಗಡಿಯ ಟೊಮ್ಯಾಟೋ ಬೆಳೆ ಕಾಯಲು ಈ ರೀತಿಯ ಕ್ರಮ ಕೈಗೊಂಡಿದ್ದಾರೆ.
ತರಕಾರಿ ಮಾರಾಟಗಾರ ಮಾತ್ರವಲ್ಲದೆ ಸಮಾಜವಾದಿ ಪಕ್ಷದ ಸಕ್ರಿಯ ಕಾರ್ಯಕರ್ತನೂ ಆಗಿರುವ ಅಜಯ್ ಫೌಜಿ ತನ್ನ ಅಂಗಡಿಗೆ ಹತ್ತಾರು ಮಂದಿ ತರಕಾರಿಯನ್ನು ಖರೀದಿಸಲು ಬರುತ್ತಾರೆ. ಸದ್ಯ ಟೊಮ್ಯಾಟೋ ಬೆಳೆಗೆ ಹೆಚ್ಚಿನ ದರ ಇರುವುದರಿಂದ ತನ್ನ ಅಂಗಡಿಯಲ್ಲಿ ಜನ ಭರ್ತಿಯಾಗಿ ಟೊಮ್ಯಾಟೋ ಬೆಳೆ ಕಳ್ಳತನವಾಗುವ ಸಾಧ್ಯತೆಯಿದೆ ಎಂದು ಅಜಯ್ ಅಂಗಡಿಯ ಮುಂದೆ ಜನ ಸಾಲಾಗಿ ಬರುವಂತೆ ಮಾಡಲು ಇಬ್ಬರು ಬೌನ್ಸರ್ಸ್ ಗಳನ್ನು ನೇಮಿಸಿದ್ದಾರೆ.
ಈ ಬೌನ್ಸರ್ಸ್ ಗಳು ಮೊದಲು ಹಣ ನೀಡಿ ಬಳಿಕ ಟೊಮ್ಯಾಟೋ ಖರೀದಿಸಿ ಎಂದು ಗ್ರಾಹಕರಲ್ಲಿ ಹೇಳುವ ಕಾಯಕವನ್ನು ಮಾಡುತ್ತಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತರಕಾರಿ ಅಂಗಡಿ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.