ಹಾವೇರಿ: ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ತರಕಾರಿ, ಸೊಪ್ಪು, ಹಣ್ಣು ವ್ಯಾಪಾರಿಗಳೇ ಕಣ್ಣಿಗೆ ಕಾಣುತ್ತಿದ್ದಾರೆ. ಅವರ ಓಡಾಟವೇ ಎಲ್ಲೆಡೆ ಹೆಚ್ಚಾಗಿದ್ದು ಕೊಳ್ಳುವವರಿಗಿಂತ ಮಾರುವವರೇ ಹೆಚ್ಚಾದಂತೆ ಭಾಸವಾಗುತ್ತಿದೆ!
ಲಾಕ್‌ಡೌನ್‌ನಿಂದ ಬಹುತೇಕ ಸಣ್ಣಪುಟ್ಟ ಎಲ್ಲ ಉದ್ಯಮ, ಕೆಲಸಗಳಿಗೆ ಬ್ರೇಕ್ ಬಿದ್ದಿದ್ದು ಈಗ ಸುಲಭವಾಗಿ ದುಡಿಮೆ ಮಾಡುವುದು ಎಂದರೆ ಹಣ್ಣು, ತರಕಾರಿ ಮಾರುವುದೇ ಆಗಿದೆ. ಹೀಗಾಗಿ ಕೃಷಿ ಉತ್ಪನ್ನ ಮಾರಾಟವೇ ಹಲವರಿಗೆ ಆಸರೆಯಾಗಿದೆ. ಆಟೋಚಾಲಕರು, ಪಾನಿಪುರಿ, ಗೋಬಿ, ಆಮ್ಲೆàಟ್, ಎಗ್‌ರೈಸ್ ಅಂಗಡಿಯವರು, ಗಾರೆ ಕೆಲಸದವರು, ಮನೆಗೆಲಸದವರು, ಕ್ಷೌರಿಕರು, ಬಡಗಿಗಳು, ಸುಣ್ಣ ಬಣ್ಣದವರು, ಮೆಕ್ಯಾನಿಕ್‌ಗಳು, ಸಣ್ಣ ಹೋಟೆಲ್ ನಡೆಸುವರು, ಬಟ್ಟೆ, ಪಾತ್ರೆ, ಗೃಹೋಪಯೋಗಿ ಪ್ಲಾಸ್ಟಿಕ್ ಪರಿಕರ, ಐಸ್ಕ್ರೀಂ ಹೀಗೆ ದಿನದ ದುಡಿಮೆಯನ್ನೇ ನಂಬಿ ಹೊಟ್ಟೆ ಹೊರೆಯುತ್ತಿದ್ದವರು ಕಳೆದ ಒಂದು ತಿಂಗಳಿನಿಂದ ಹಣ್ಣು, ತರಕಾರಿ, ಸೊಪ್ಪು, ಹೂವು ಮಾರಾಟಕ್ಕೆ ಇಳಿದಿದ್ದಾರೆ.
ಕಡಿಮೆ ಬಂಡವಾಳ ಸಾಕಾಗುತ್ತೆ : ಕೃಷಿ ಉತ್ಪನ್ನಗಳ ದರ ಕಡಿಮೆ ಇರುವುದರಿಂದ ಹೊಸದಾಗಿ ವ್ಯಾಪಾರ ಮಾಡುವವರಿಗೆ ಬಂಡವಾಳವೂ ಕಡಿಮೆ ಸಾಕು. 100ರಿಂದ 500ರೂ. ಒಳಗೆ ಬಂಡವಾಳ ಬೆಳಗ್ಗೆ ಹಾಕಿ ಎರಡೂ¾ರು ಉತ್ಪನ್ನ ಖರೀದಿಸಿದರೆ ಓಣಿ ಓಣಿ ಸುತ್ತಾಡಿ ಸಂಜೆ ವೇಳೆಗೆ 200-300ರೂ. ಲಾಭ ಮಾಡಿಕೊಂಡು ದಿನದ ದುಡಿಮೆ ಮಾಡಬಹುದಾಗಿದೆ. ಹೀಗಾಗಿ ಎಲ್ಲರೂ ಈ ವ್ಯಾಪಾರಕ್ಕೆ ಮುಂದಾಗಿದ್ದಾರೆ.
ತಳ್ಳುವ ಗಾಡಿಗೆ ಎಲ್ಲಿಲ್ಲದ ಬೇಡಿಕೆ : ಹಣ್ಣು, ತರಕಾರಿ, ಹೂವು, ಸೊಪ್ಪು ಮಾರಲು ತಳ್ಳುವ ಗಾಡಿಗೆ ಹೆಚ್ಚು ಜನ ಮೊರೆ ಹೋಗಿದ್ದು ಗಾಡಿಯ ಬೇಡಿಕೆ ಹೆಚ್ಚಾಗಿದೆ. ಹೊಸದಾಗಿ ಈ ವ್ಯಾಪಾರಕ್ಕೆ ಇಳಿದ ಕೆಲವರು ತಳ್ಳುವ ಗಾಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಬೈಕ್, ನೀರು ತರುವ ಕೈಗಾಡಿ ಅವಲಂಬಿಸಿದ್ದಾರೆ. ಇನ್ನು ಕೆಲವರು ತಮ್ಮ ತಲೆ ನಂಬಿಕೊಂಡಿದ್ದಾರೆ.
ಎಗ್‌ರೈಸ್ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಲಾಕ್ ಡೌನ್‌ನಿಂದ ಅಂಗಡಿ ಬಂದ್ ಆಗಿದ್ದು ಈಗ ತರಕಾರಿ ಮಾರಾಟಕ್ಕೆ ಇಳಿದಿದ್ದೇನೆ. ಹಳೆ ತಕ್ಕಡಿ ಕಲ್ಲು ಪರಿಚಯಸ್ಥರ ಬಳಿ ತೆಗೆದುಕೊಂಡಿದ್ದೇನೆ.
-ಅಣ್ಣಪ್ಪ, ಎಗ್ರೈಸ್ ಅಂಗಡಿಕಾರ
ಆಟೋ ಚಾಲನೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೆ. ಲಾಕ್‌ಡೌನ್ ಕೆಲದಿನ ಇರಬಹುದು ಎಂದು ಭಾವಿಸಿ 8-10 ದಿನ ಮನೆಯಲ್ಲಿಯೇ ಖಾಲಿ ಇದ್ದೆ. ಆದರೆ, ಈಗ ನಿತ್ಯದ ಖರ್ಚಿಗಾಗಿ ಅನಿವಾರ್ಯವಾಗಿ ತರಕಾರಿ ವ್ಯಾಪಾರಕ್ಕೆ ಇಳಿದಿದ್ದೇನೆ. ಸರಾಸರಿ ದಿನಕ್ಕೆ 200-300ರೂ. ದುಡಿಯುತ್ತಿದ್ದೇನೆ.
–ರಾಜೀವ ಉಪ್ಪಾರ, ಆಟೋ ಚಾಲಕ