Advertisement

ರೈತರ ಉತ್ಪನ್ನಕ್ಕೆ ಅಡ್ಡಾದಿಡ್ಡಿ ದರ

05:53 PM May 01, 2021 | Team Udayavani |

ವರದಿ: ದತ್ತು ಕಮ್ಮಾರ

Advertisement

ಕೊಪ್ಪಳ: ಒಂದೆಡೆ ಕೊರೊನಾ ಕರ್ಫ್ಯೂ ಬರೆ, ಇನ್ನೊಂದೆಡೆ ತರಕಾರಿ, ಹಣ್ಣುಗಳ ಬೆಲೆ ಕುಸಿತವಾದರೆ ಮತ್ತೂಂದೆಡೆ ಬೆಳಗ್ಗೆ 6ರಿಂದ 10 ಗಂಟೆಯೊಳಗೆ ಮಾರಾಟ ಮಾಡಬೇಕೆಂಬ ಸರ್ಕಾರದ ನಿಯಮದಿಂದ ಅನ್ನದಾತ ನೂರೆಂಟು ಸಂಕಷ್ಟ ಎದುರಿಸುತ್ತಿದ್ದಾನೆ.

ಕೊಪ್ಪಳದ ಮಾರುಕಟ್ಟೆಗೆ ಬೆಳೆದ ಉತ್ಪನ್ನ ರಾತ್ರೋ ರಾತ್ರಿ ತಂದು ಮಾರುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಹಾಲಿಗೆ 12 ತಾಸು ಮಾರಾಟಕ್ಕೆ ಅವಕಾಶವಿತ್ತಂತೆ ತರಕಾರಿ-ಹಣ್ಣಿಗೂ ಕನಿಷ್ಟ 8 ಗಂಟೆ ಮಾರಾಟಕ್ಕೆ ಅವಕಾಶ ಕೊಡಿ ಎಂದೆನ್ನುತ್ತಿದೆ ರೈತ ಸಮೂಹ. ಸರ್ಕಾರ 14 ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ರೈತರು ಹಲವು ಸಂಕಷ್ಟ ಎದುರಿಸುತ್ತಿದ್ದಾರೆ.

ಹಗಲು-ರಾತ್ರಿ ಎನ್ನದೇ ತರಕಾರಿ, ಸೊಪ್ಪು ಬೆಳೆದಿದ್ದಾರೆ. ಬೇಸಿಗೆ ನೀರಿನ ಕೊರತೆ ಮಧ್ಯೆಯೂ ಬೆಳೆ ಉಳಿಸಿಕೊಂಡಿದ್ದಾರೆ. ಆದರೆ ದಿಢೀರ್‌ 2ನೇ ಅಲೆಯಲ್ಲಿ ಕರ್ಫ್ಯೂ ಜಾರಿಯಿಂದಾಗಿ ಕಷ್ಟಪಟ್ಟು ಬೆಳೆದ ತರಕಾರಿ ಮಾರುಕಟ್ಟೆಗೆ ತಂದು ನಷ್ಟ ಎದುರಿಸುತ್ತಿದ್ದಾರೆ. ರಾತ್ರಿಯೇ ಮಾರುಕಟ್ಟೆಗೆ ತರಬೇಕು: ಸರ್ಕಾರ ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ವಸ್ತುಗಳ ಖರೀದಿ, ಮಾರಾಟಕ್ಕೆ ಬೆಳಗ್ಗೆ 6ರಿಂದ 10 ಗಂಟೆವರೆಗೂ ಮಾತ್ರ ಅವಕಾಶ ನೀಡಿದೆ. ಆದರೆ ರೈತರು ಮುಂಜಾಗ್ರತೆಯಿಂದ ರಾತ್ರಿ 3 ಗಂಟೆ ವೇಳೆಗೆ ನಿತ್ಯ ಕೊಪ್ಪಳ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಬುಟ್ಟಿ, ಚೀಲ ವಾಹನದಲ್ಲಿ ತಂದು ಮಾರುತ್ತಿದ್ದಾರೆ.

ಕೆಲವೊಮ್ಮೆ ತರಕಾರಿಗೆ ಉತ್ತಮ ಬೆಲೆ ಸಿಕ್ಕರೆ, ಮತ್ತೂಮ್ಮೆ ಬೆಲೆಯೇ ಸಿಗುವುದಿಲ್ಲ. ವಾಹನದಲ್ಲಿ ತಂದ ಬಾಡಿಗೆಯಷ್ಟು ಬೆಲೆ ಸಿಗದಂತಾಗಿ, ಮಾರುಕಟ್ಟೆಯಲ್ಲಿಯೇ ಅಡ್ಡಾದಿಡ್ಡಿ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ನಿತ್ಯ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ತರಕಾರಿ ಮನೆಯಲ್ಲಿ ನಾಲ್ಕಾರು ದಿನ ಸಂಗ್ರಹಿಸಿ ಇಡುವಂತಿಲ್ಲ. ಇಟ್ಟರೆ ಕೆಟ್ಟು ಹೋಗುತ್ತವೆ. ಎರಡು ದಿನ ಬಿಟ್ಟು ಮಾರುಕಟ್ಟೆಗೆ ತಂದರೂ ತರಕಾರಿ, ಕಾಯಿಪಲ್ಯ ಬಾಡಿದ ಸ್ಥಿತಿಯಲ್ಲಿರುತ್ತದೆ. ಮಧ್ಯವರ್ತಿಗಳು ಇದನ್ನೇ ಬಂಡವಾಳವಾಗಿಸಿ ರೈತರಿಂದ ಖರೀದಿದಾರರಿಗೆ ಅಡ್ಡಾದಿಡ್ಡಿ ದರಕ್ಕೆ ಮಾರಾಟ ಮಾಡಿಸುತ್ತಿದ್ದಾರೆ.

Advertisement

ಇತ್ತ ರೈತರು ಮಾರುಕಟ್ಟೆಗೆ ತಂದ ತರಕಾರಿ ವಾಪಸ್‌ ತೆಗೆದುಕೊಂಡು ಹೋಗುವಂತಿಲ್ಲ. ಗಾಡಿ ಬಾಡಿಗೆಯೂ ದುಬಾರಿಯಾಗಲಿದೆ ಎಂದು ಬೆಲೆ ಕುಸಿತವಿದ್ದರೂ ಅಷ್ಟಕ್ಕೆ ತರಕಾರಿ ಮಾರಾಟ ಮಾಡುವ ಸಂದಿ ಗ್ಧ ಸ್ಥಿತಿ ಎದುರಾಗಿದೆ. ಕೆಲವು ಬಾರಿ ರೈತರು ತಂದ ಮಾಲು ಮಾರುಕಟ್ಟೆಯಲ್ಲೇ ಬಿಸಾಡಿ ಕಣ್ಣೀರಿಡುತ್ತಲೇ ಮನೆಗೆ ತೆರಳಿದ ಉದಾಹರಣೆಗೂ ಇವೆ.

ಹೆಚ್ಚು ಸಮಯಕೊಡಿ: ಸರ್ಕಾರ ತರಕಾರಿ, ಹಣ್ಣು ಮಾರಾಟಕ್ಕೆ ಬೆಳಗ್ಗೆ 6ರಿಂದ 10 ಗಂಟೆಯೊಳಗೆ ಮಾತ್ರ ಅವಕಾಶ ನೀಡಿದೆ. ಕೇವಲ 4 ಗಂಟೆಯಲ್ಲಿ ಎಲ್ಲ ಮಾರಾಟ ಅಸಾಧ್ಯ. ಕೆಲವೊಮ್ಮೆ ರೈತರ ತರಕಾರಿ ಉಳಿದರೂ ಸಮಯದ ಅಭಾವದಿಂದಾಗಿ ಪೊಲೀಸರ ಭಯಕ್ಕೆ ತರಕಾರಿ ಅಲ್ಲಿಯೇ ಬಿಟ್ಟು ಬರುವ ಸ್ಥಿತಿ ಎದುರಾಗುತ್ತಿವೆ. ಸರ್ಕಾರ ತರಕಾರಿ, ಹಣ್ಣುಗಳ ಮಾರಾಟಕ್ಕೆ ಕನಿಷ್ಟ 8 ತಾಸು ಅವಕಾಶ ನೀಡಬೇಕು. ಇಲ್ಲವೇ ರೈತರೇ ತಮ್ಮ ವಾಹನದಲ್ಲಿ ಮನೆ ಮನೆಗೆ ತರಕಾರಿ ಮಾರಾಟಕ್ಕಾದರೂ ಅವಕಾಶ ಕೊಡಬೇಕು. ಇಲ್ಲವೇ ಮಳಿಗೆ ಸ್ಥಳದಲ್ಲಾದರೂ ಕನಿಷ್ಟ 8 ಗಂಟೆ ವ್ಯಾಪಾರಕ್ಕೆ ಅವಕಾಶ ಕೊಟ್ಟರೆ ಅನುಕೂಲ ಎನ್ನುತ್ತಿದೆ ರೈತಾಪಿ ವಲಯ.

ಕೊಪ್ಪಳ ಮಾರುಕಟ್ಟೆಗೆ ನಿತ್ಯ 50 ಕ್ವಿಂಟಲ್‌ ಈರುಳ್ಳಿ, 300 ಬಾಕ್ಸ್‌ ಟೊಮ್ಯಾಟೋ, 50 ಚೀಲ ಮೆಣಸಿನಕಾಯಿ ಸೇರಿ ಹೀಗೆ ಹೆಚ್ಚು ತರಕಾರಿ ಆವಕವಾಗುತ್ತದೆ. ಇನ್ನು ಹಣ್ಣುಗಳಲ್ಲಿ 15-20 ಟನ್‌ ಬಾಳೆ, 20-30 ಟನ್‌ ಮಾವು, 30-40 ಟನ್‌ ಕಲ್ಲಂಗಡಿ ಆವಕವಾಗುತ್ತದೆ. ಕಡಿಮೆ ಕಾಲವಕಾಶದಲ್ಲಿ ಎಲ್ಲವೂ ಮಾರಾಟ ಕಷ್ಟ. ಹಾಗಾಗಿ ಹೆಚ್ಚು ಅವಕಾಶ ಸಿಕ್ಕರೆ ರೈತರಿಗೂ ಅನುಕೂಲ. ಗ್ರಾಹಕರಿಗೂ ಮನೆ-ಮನೆಗೆ ತರಕಾರಿ ಸಿಗಲಿದೆ ಎಂದೆನ್ನುತ್ತಿದ್ದಾರೆ ರೈತರು.

Advertisement

Udayavani is now on Telegram. Click here to join our channel and stay updated with the latest news.

Next