ಬೆಳಗಾವಿ: ಲಾಕ್‌ಡೌನ್ ಸಂಕಷ್ಟದ ಜತೆಗೆ ಭಾರೀ ಮಳೆಯ ಹೊಡೆತಕ್ಕೆ ತರಕಾರಿ ನೆಲಕಚ್ಚಿ ನೀರು ಪಾಲಾಗಿದ್ದರಿಂದ ಒಂದೆಡೆ ದರ ಗಗನಕ್ಕೇರಿರುವ ಬಿಸಿ ಜಿಲ್ಲೆಯ ಗ್ರಾಹಕರಿಗೆ ತಟ್ಟಿದ್ದು, ಇನ್ನೊಂದೆಡೆ ಗೋವಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ರಪು¤ ಆಗುತ್ತಿರುವುದರಿಂದ ಇಲ್ಲಿಯವರಿಗೆ ತರಕಾರಿ ಸಿಕ್ಕರೂ ಕೈಗೆಟಕುವ ದರಕ್ಕೆ ಮಾತ್ರ ಇಲ್ಲವಾಗಿದೆ.
ಮೊದಲೇ ಲಾಕ್‌ಡೌನ್ ಸಂಕಷ್ಟದಿಂದ ಒದ್ದಾಡುತ್ತಿರುವ ರೈತರು ಹಾಗೂ ಗ್ರಾಹಕರಿಗೆ ಮಳೆ ಹೆಚ್ಚಾಗಿ ಮತ್ತೂಂದು ಸಂಕಷ್ಟ ಎದುರಾಗಿದೆ. ಕಳೆದ 2-3 ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ತರಕಾರಿ ಬೆಳೆಗಳು ನೀರುಪಾಲಾಗಿವೆ. ಹೀಗಾಗಿ ರೈತರಿಗೆ ಬಾಯಿಗೆ ಬಂದ ತುತ್ತು ಕೈಗೆ ಸಿಗದೇ ನಷ್ಟ ಅನುಭವಿಸುವಂತಾಗಿದೆ.
ದರ ಕೇಳಿ ಅಬ್ಟಾ ಎಂದ ಗ್ರಾಹಕ: ಸಗಟು ಮಾರುಕಟ್ಟೆಯಲ್ಲಿಯೇ ತರಕಾರಿ ದರ ಜಾಸ್ತಿಯಾಗಿದ್ದರಿಂದ ಗ್ರಾಹಕರ ಕೈಗೆ ತರಕಾರಿಸಿಗುತ್ತಿಲ್ಲ. ತರಕಾರಿ ಮಾರುಕಟ್ಟೆಗೆ ಹೋದ ಗ್ರಾಹಕರುದರ ಕೇಳಿ ವಾಪಸ್ಸು ಬರುವಂತಾಗಿದೆ. ಆಲೂಗಡ್ಡೆ,ಬೀನ್ಸ್, ಬದನೆಕಾಯಿ, ಕ್ಯಾಬೀಜ್(ಎಲೆಕೋಸು), ಫ್ಲಾವರ್, ಹೀರೇಕಾಯಿ, ಹಾಗಲಕಾಯಿ,ಭೇಂಡೆಕಾಯಿ, ಡೊಣ್ಣ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಬೀಟ್‌ರೂಟ್ ಸೇರಿದಂತೆ ಅನೇಕತರಕಾರಿಗಳ ದರ ಏರಿಕೆ ಆಗಿದೆ.
ಲಾಕ್‌ಡೌನ್ ಸಂಕಷ್ಟದ ನಡುವೆ ಸಾಮಾನ್ಯ ಜನರು ಉದ್ಯೋಗ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಆರ್ಥಿಕ ಸಮಸ್ಯೆಗಳ ನಡುವೆ ಬೆಲೆಯೇರಿಕೆ ದೊಡ್ಡ ಬರೆ ಹಾಕಿದಂತಾಗುತ್ತಿದೆ.ದಿನಸಿ ಪದಾರ್ಥಗಳು, ತರಕಾರಿ ಬೆಲೆಯೇರಿಕೆ ಬಿಸಿ ತಗಲುತ್ತಿದೆ. ರಾಜ್ಯದಲ್ಲಿ ಬಿದ್ದ ಮಳೆಯಿಂದ ಪ್ರವಾಹ ಬಂದು ಬೆಳೆಗಳೆಲ್ಲ ಹಾನಿಯಾಗಿವೆ. ಬೆಳೆಇಲ್ಲದೇ ರೈತರು ಕಂಗಾಲಾಗಿದ್ದು, ಕೈಗೆ ಸಿಕ್ಕ ಅಲ್ಪಸ್ವಲ್ಪ ಬೆಳೆಗಳನ್ನು ತರುತ್ತಿದ್ದಾರೆ.
ಬಿಸಿಲು ನಾಡಿನಿಂದ ತರಕಾರಿ ಆವಕ : ಮುಂಬೈ ಕರ್ನಾಟಕದಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಳೆಗಳೆಲ್ಲ ನೀರು ಪಾಲಾಗಿದ್ದರಿಂದ ಬೆಳಗಾವಿಯ ಸಗಟು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಇಲ್ಲವಾಗಿದೆ. ಬೆಳಗಾವಿ ತಾಲೂಕಿನಿಂದ ಬರುತ್ತಿದ್ದ ತರಕಾರಿ ಆವಕ ಸುಮಾರು ಶೇ. 80ರಷ್ಟು ಕಡಿಮೆಯಾಗಿದ್ದು, ಕೇವಲ ಶೇ. 20ರಷ್ಟು ಮಾತ್ರ ಬರುತ್ತಿದೆ. ಇನ್ನುಳಿದ ತರಕಾರಿ ಬಿಸಿಲು ನಾಡಿನ ಜಿಲ್ಲೆಗಳಿಂದ ಬರುತ್ತಿದೆ. ಬಂದ ತರಕಾರಿ ಎಲ್ಲವೂ ಗೋವೆ ಪಾಲಾಗುತ್ತಿದೆ. ಕೇಳಿದಷ್ಟು ದರಕ್ಕೆ ಗೋವಾದವರು ಖರೀದಿ ಸುತ್ತಿರುವುದರಿಂದ ಇಲ್ಲಿಯವರಿಗೆ ಸಮಸ್ಯೆಯಾಗಿದೆ. ನಿತ್ಯ 50ಕ್ಕೂ ಹೆಚ್ಚು ಲಾರಿಗಳನ್ನು ತುಂಬಿಕೊಂಡು ಗೋವಾಕ್ಕೆ ತರಕಾರಿ ಕಳುಹಿಸಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಬೆಂಗಳೂರು, ಹಾವೇರಿ, ಬಳ್ಳಾರಿ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ತರಕಾರಿ ಬರುತ್ತಿದೆ.
ಸಾಗಾಟ ಬಾಡಿಗೆ ಹೆಚ್ಚಳ : ಗ್ರಾಮೀಣ ಭಾಗದ ರೈತರಿಗೆ ತೈಲ ಬೆಲೆಯೇರಿಕೆಯೂ ತಲೆಬಿಸಿಯಾಗಿ ಕಾಡುತ್ತಿದೆ. ತರಕಾರಿ ಸೇರಿದಂತೆ ತಮ್ಮ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಗಳಿಗೆ ಸಾಗಾಟ ಮಾಡಬೇಕೆಂದರೆ ಕನಿಷ್ಠ 200ರಿಂದ 500ರೂ. ಹೆಚ್ಚಿನ ಬಾಡಿಗೆ ನೀಡಬೇಕಿದೆ. ಇದರಿಂದಾಗಿ ತರಕಾರಿ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ. ಬೆಳೆ ಅಷ್ಟಕ್ಕಷ್ಟೇ ಇದ್ದಿದ್ದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದರ ಜಾಸ್ತಿ ಆಗಿದೆ. ಮಾರುಕಟ್ಟೆಯಲ್ಲಿ ಪ್ರತಿ ವಸ್ತುವಿನ ದರ ಏರಿಕೆಯಾಗಿದೆ. ವಿತರಕರಿಂದ ಖರೀದಿ ಮಾಡುವಾಗ ಸಾರಿಗೆ ನೆಪವೊಡ್ಡಿ ಪ್ರತಿ ವಸ್ತುಗಳ ಮೇಲೆ ಹೆಚ್ಚಿಗೆ ಹಣ ಪಡೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಸ್ತುಗಳ ದರ ಏರಿಕೆ ಮಾಡಲಾಗಿದೆ.
ಬೆಳಗಾವಿ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಳಗಾವಿಮಾರುಕಟ್ಟೆಗೆ ಬರುತ್ತಿದ್ದ ತರಕಾರಿ ಆವಕ ಕಡಿಮೆ ಆಗಿದೆ. ಜತೆಗೆ ಬೇಡಿಕೆಯೂ ಹೆಚ್ಚಾಗಿರುವುದರಿಂದದರ ಜಾಸ್ತಿ ಆಗಿದೆ. ಬೇರೆ ಜಿಲ್ಲೆಗಳಿಂದ ತರಕಾರಿ ನಮ್ಮ ಮಾರುಕಟ್ಟೆಗೆ ಬರುತ್ತಿದೆ. –
ಸದಾನಂದ ಹುಂಕರೀಪಾಟೀಲ,ವರ್ತಕರು
ಮೊದಲೇ ಲಾಕ್‌ಡೌನ್‌ದಿಂದ ತೊಂದರೆ ಅನುಭವಿಸಿ ಹೊರ ಬರುವಷ್ಟರಲ್ಲಿ ಈಗ ದಿನಸಿ ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ದರ ಕೇಳಿಯೇ ಹೆದರುವಂತಾಗಿದೆ.
– ಸುರೇಶ ಅಕ್ಕಿ, ಗ್ರಾಹಕರು
–ಭೈರೋಬಾ ಕಾಂಬಳೆ