ಹಾವೇರಿ: ಶ್ರಾವಣ ಮಾಸದ ಮೊದಲ, ನಾಡಿನ ದೊಡ್ಡ ಹಬ್ಬಗಳೊಂದಾದ ನಾಗರ ಪಂಚಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಬೆಲೆ ಏರಿಕೆ ನಡುವೆಯೂ ಗ್ರಾಹಕರು ಉತ್ಸಾಹ ಕುಗ್ಗಿಸಿಕೊಳ್ಳದೇ ಹಬ್ಬದ ಸಾಮಗ್ರಿ ಖರೀದಿಯಲ್ಲಿ ತೊಡಗಿದರು.
ಶ್ರಾವಣದಲ್ಲಿ ಪಂಚಮಿ ಹಬ್ಬ ಆರಂಭವಾಗುತ್ತಿದ್ದಂತೆ ಒಂದಾದ ಮೇಲೊಂದರಂತೆ ಸರಣಿ ಹಬ್ಬಗಳು ಪ್ರಾರಂಭವಾಗುತ್ತವೆ. ಪಂಚಮಿ ಹಬ್ಬದ ಅಂಗವಾಗಿಯೇ ಆಚರಿಸುವ ರೊಟ್ಟಿ ಪಂಚಮಿ ಹಬ್ಬಕ್ಕೆ ತರಕಾರಿ ಬೆಲೆ ಏರಿಕೆ ಭರ್ಜರಿ ಶಾಕ್ ನೀಡಿದೆ. ಈ ದರ ಏರಿಕೆ ಶಾಕ್ ನಡುವೆಯೂ ಶನಿವಾರ ನಗರದ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು.
ರೊಟ್ಟಿ ಪಂಚಮಿಯಲ್ಲಿ ಜೋಳದ ರೊಟ್ಟಿ, ಚಪಾತಿ ಹಾಗೂ ವಿವಿಧ ತರಕಾರಿ ಪಲ್ಯ ಹಾಗೂ ಸೊಪ್ಪುಗಳಿಂದ ಕೂಡಿದ ಪಚಡಿ ಮತ್ತು ಹೆಸರು, ಮಡಿಕೆ, ಅಲಸಂದಿ, ಕಡಲೆ ಸೇರಿದಂತೆ ಇತರ ದ್ವಿದಳ ಧಾನ್ಯಗಳ ಪಲ್ಯ ಮಾಡುವುದು ಈ ಹಬ್ಬದ ವಿಶೇಷ. ಕಳೆದ ಕೆಲ ತಿಂಗಳಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಮುಖೀಯಾಗಿದೆ.
ಒಂದು ಕೆಜಿ ಟೊಮೆಟೋ ಬೆಲೆ 30-40 ರೂ., ಒಂದು ಕೆಜಿ ಹಿರೇಕಾಯಿ 60 ರೂ., ಬೆಂಡೆಕಾಯಿ ರೂ.40, ಹಸಿ ಮೆಣಸಿನಕಾಯಿ 60-90ರೂ., ಉಳ್ಳಾಗಡ್ಡಿ ರೂ. 20-30, ಎಲೆಕೋಸು 40ರೂ., ಗಜ್ಜರಿ ರೂ. 60ರೂ., ಸವತೆಕಾಯಿ 40-60ರೂ., ಬದನೆಕಾಯಿ 60ರೂ., ಕ್ಯಾಬಿಜ್ 40 ರೂ. ಹೀಗೆ ಎಲ್ಲ ತರಕಾರಿ ಬೆಲೆ ಇದೆ. ಅದಕ್ಕಾಗಿ ತರಕಾರಿ ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯಲು ಕೆಜಿ ದರದ ಬದಲು ಕಾಲು ಕೆಜಿ ದರವನ್ನೇ ಹೇಳಿ ಆಕರ್ಷಿಸುತ್ತಿದ್ದಾರೆ. ತರಕಾರಿಯಷ್ಟೇ ಅವಶ್ಯಕವಾಗಿರುವ ಸೊಪ್ಪಿನ ಬೆಲೆಯೂ ತಾನೇನು ಕಮ್ಮಿ ಇಲ್ಲ ಎನ್ನುವಂತೆ ಬೆಲೆ ಏರಿಕೆಯಾಗಿದೆ. ಪೂಜೆಗೆ ನಾಗಪ್ಪನ ಮೂರ್ತಿ ಖರೀದಿಯೂ ಜೋರಾಗಿತ್ತು. ಗಾತ್ರಕ್ಕೆ ತಕ್ಕಂತೆ 25ರೂ.ಗಳಿಂದ 50ರೂ.ವರೆಗೂ ಮಣ್ಣಿನಮೂರ್ತಿ ಮಾರಾಟವಾದವು.
ಪಂಚಮಿ ಹಬ್ಬದಲ್ಲಿ ವಿವಿಧ ಬಗೆಯ ಉಂಡಿಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಬೆಲೆ ಏರಿಕೆ ಬಿಸಿ ಕಿರಾಣಿ ಸಾಮಗ್ರಿಗಳಿಗೂ ಬಿಟ್ಟಿಲ್ಲ. ಒಂದು ಕೆಜಿ ಶೇಂಗಾ ಬೆಲೆ 120 ರೂ., ಒಣಕೊಬ್ಬರಿ ಕೆಜಿಗೆ 200-250ರೂ., ಬೂಂದೆಕಾಳು ಕೆ.ಜಿ.ಗೆ 100ರೂ., ಬೆಲ್ಲ ಕೆಜಿಗೆ 40-45ರೂ., ಎಳ್ಳು ಕೆಜಿಗೆ 250ರೂ., ತೊಗರಿ ಬೆಳೆ 80-100, ಸಕ್ಕರೆ 40-50ರೂ. ಇದೆ.
ಒಟ್ಟಾರೆ ನಾಗರಪಂಚಮಿ ಸಡಗರ ಜಿಲ್ಲೆಯಾದ್ಯಂತ ಮನೆ ಮಾಡಿದ್ದು ಮೊದಲ ಹಬ್ಬದ ಸಂಭ್ರಮ ಹೆಚ್ಚಾಗಿದೆ.