Advertisement

ಗಗನಕ್ಕೇರಿದ ತರಕಾರಿ ಬೆಲೆ: ಸುಸ್ತಾದ ಗ್ರಾಹಕ

10:18 PM Apr 29, 2019 | Lakshmi GovindaRaju |

ದೇವನಹಳ್ಳಿ: ಬಿಸಿಲಿನ ಝಳಕ್ಕೆ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ತೋಟಗಳಲ್ಲಿ ತರಕಾರಿ ಬೆಳೆ ಸರಿಯಾಗಿ ಬಾರದ ಕಾರಣ ತರಕಾರಿ ಮತ್ತು ಸೊಪ್ಪುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುವಂತಾಗಿದೆ.

Advertisement

ದಿನೇ ದಿನೆ ಬಿಸಿಲಿನ ಧಗೆ ಹೆಚ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ತಾಜಾ ತರಕಾರಿಗಳು ಬರುತ್ತಿಲ್ಲ. ಬೆಲೆ ಏರುತ್ತಿರುವುದರಿಂದ ಗ್ರಾಹಕರಲ್ಲಿ ಖರೀದಿ ಆತಂಕ ಉಂಟಾಗಿದೆ. ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರು ಕೆ.ಜಿ.ಗಟ್ಟಲೇ ಖರೀದಿಸುವ ಬದಲಿಗೆ ಅರ್ಧ, ಕಾಲು ಕೆ.ಜಿ.ಗೆ ಇಳಿದಿದ್ದಾರೆ. ಕೆಲವರಂತೂ ಸೊಪ್ಪುಗಳ ಖರೀದಿಯತ್ತ ಮುಖ ಮಾಡಿದ್ದಾರೆ. ಜನರು ಗಗನಕ್ಕೇರಿರುವ ಬೆಲೆಯ ಬಗ್ಗೆ ಲೆಕ್ಕಾಚಾರ ಹಾಕತೊಡಗಿದ್ದಾರೆ.

ಸಾಂಬರ್‌ಗೆ ತರಕಾರಿ ಬಳಕೆ ಕಡಿಮೆ: ತರಕಾರಿ ಬೆಲೆ ಏರಿಕೆಯಿಂದ ಮಹಿಳೆಯರಂತೂ ದಿನನಿತ್ಯ ಯಾವ ಅಡುಗೆ ಮಾಡುವುದು ಎಂಬ ಚಿಂತೆಗೀಡಾಗಿದ್ದಾರೆ. ತರಕಾರಿ ಬೆಲೆ ಎಷ್ಟೇ ಗಗನಕ್ಕೇರಿದರೂ ತಿನ್ನುವುದು ತಪ್ಪುವುದಿಲ್ಲ ಎಂದು ಮಹಿಳಾ ಗ್ರಾಹಕರ ವಾದವಾಗಿದೆ. ಕಾಯಿಪಲ್ಯ ಸವಿಯುತ್ತಿದ್ದವರು ಸೊಪ್ಪಿನ ಸಾರು ಮಾಡಲು ಮುಂದಾಗುತ್ತಿದ್ದಾರೆ.

ಅದರಲ್ಲೂ ಮದುವೆ ಸೀಜನ್‌ ಇರುವುದರಿಂದ ತರಕಾರಿ ಬೆಲೆ ಗಗನಕ್ಕೇರಿದ ಪರಿಣಾಮ ಬಡವರು ಹಾಗೂ ಮಧ್ಯಮ ವರ್ಗದವರು ಪಲ್ಯಗಳ ಬಗ್ಗೆ ಚಿಂತನೆ ಮಾಡುವಂತಾಗಿದೆ. ಹೀಗೆಯೇ ಬೆಲೆ ಹೆಚ್ಚಾಗುತ್ತಿದ್ದರೆ ಮದುವೆ ಊಟದ ಸಾಂಬರ್‌ಗೆ ತರಕಾರಿ ಬಳಕೆ ಕಡಿಮೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಅದರ ಬದಲಿಗೆ ತಿಳಿಸಾರು, ಅನ್ನ ಮಾಡಿ ಬಡಿಸುವುದು ಸೂಕ್ತ ಎಂದು ಅಡುಗೆ ಭಟ್ಟರ ಅಭಿಪ್ರಾಯವಾಗಿದೆ.

ಗ್ರಾಹಕರು ತರಕಾರಿ ಮತ್ತು ಸೊಪ್ಪು ಖರೀದಿ ಮಾಡಲು ಹೊರಟ ಸಂದರ್ಭದಲ್ಲಿ ಬೆಲೆ ಗಗನಕ್ಕೇರಿದೆ. ಬೇಸಿಗೆ ಮತ್ತು ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಯಾವುದೇ ಬೆಳೆ ಕೊಯ್ಲು ಹಾಗೂ ಇಳುವರಿಯಲ್ಲಿ ವ್ಯತ್ಯಯವಾಗಿದೆ. ಹಾಗಾಗಿ, ಮಾರುಕಟ್ಟೆಗೆ ತರಕಾರಿ ಸರಿಯಾದ ರೀತಿಯಲ್ಲಿ ಸರಬರಾಜು ಆಗುವಲ್ಲಿ ಅನಾನುಕೂಲವಾಗುತ್ತಿದೆ.

Advertisement

ಮಾರುಕಟ್ಟೆಯಲ್ಲಿ ಗ್ರಾಹಕರು ಈರುಳ್ಳಿ ಎಷ್ಟು ಬೆಲೆ, ಹುರುಳಿಕಾಯಿ ಎಷ್ಟು ದರ, ಹೀರೇಕಾಯಿ ಎಷ್ಟು ಬೆಲೆ, ಕ್ಯಾರೆಟ್‌ ಹೇಗೆ ಎಂದು ಕೇಳುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬಂದಿತು. ಸೊಪ್ಪು, ತರಕಾರಿಗಳ ಬೆಲೆ ಕೇಳಿ ಗ್ರಾಹಕರಿಗೆ ಶಾಕ್‌ ಆಗಿದೆ. ಈಗಿನ ಮಾರುಕಟ್ಟೆಯಲ್ಲಿ ಈರುಳ್ಳಿ ಒಂದು ಕೆ.ಜಿ.ಗೆ 20ರೂ., ಆಲೂಗೆಡ್ಡೆ 20ರೂ., ಹುರುಳಿಕಾಯಿ ಕೆ.ಜಿ.ಗೆ ರೂ.120, ಕ್ಯಾರೆಟ್‌ 50ರೂ., ಟೊಮೆಟೋ 40ರೂ., ಕೊತ್ತುಂಬರಿ ಕೆ.ಜಿ.ಗೆ 100ರೂ., ಪುದೀನ ಕಟ್ಟು 20ರೂ., ಮೆಂತ್ಯೆ ಸೊಪ್ಪು 20ರೂ., ಸಬ್ಬಕ್ಕಿ 30ರೂ. ಮತ್ತು ದಂಟು, ಪಾಲಕ್‌, ಹರಿವೆ,

ಚೊಕ್ಕೊತ ಸೊಪ್ಪು ಕಟ್ಟಿಗೆ 10ರೂ., ಬೆಳುಳ್ಳಿ 80ರೂ., ಮೆಣಸಿನಕಾಯಿ 100ರೂ., ಬದನೆಕಾಯಿ 40ರೂ., ಬೆಂಡೆಕಾಯಿ 40ರೂ., ತೊಂಡೆಕಾಯಿ 40ರೂ., ನವಿಲುಕೋಸು 40ರೂ., ಹೂಕೋಸು 30ರೂ., ಎಲೆಕೋಸು 30ರೂ., ಸೌತೇಕಾಯಿ ಕೆ.ಜಿ.ಗೆ 40ರೂ., ಕ್ಯಾಪ್ಸಿಕಂ 60ರೂ., ಬಟಾಣಿ 120ರೂ., ಮೂಲಂಗಿ 40ರೂ., ಶುಂಟಿ 120ರೂ., ಬೀಟ್‌ರೂಟ್‌ 40ರೂ., ನುಗ್ಗೆಕಾಯಿ 50 ರೂ. ಹಾಗೂ ಬೇಸಿಗೆ ಇರುವುದರಿಂದ ಒಂದು ನಿಂಬೆಹಣ್ಣಿಗೆ 5ರೂ.ನಂತೆ ದರ ಹೆಚ್ಚಿಸಿಕೊಂಡಿವೆ.

ಬೆಲೆಗಳು ಏರುತ್ತಲೇ ಇವೆ: ಒಂದು ತಿಂಗಳಿನಿಂದ ತರಕಾರಿ ಹಾಗೂ ಆಹಾರ ಧಾನ್ಯಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ. ನಿನ್ನೆ ಇದ್ದ ಬೆಲೆ ಇಂದು ಇರುವುದಿಲ್ಲ, ಇಂದು ಇದ್ದ ಬಲೆ ನಾಳೆ ಇರುವುದಿಲ್ಲ. ನಿತ್ಯ ತರಕಾರಿ ಹಾಗೂ ಆಹಾರ ಪದಾರ್ಥಗಳ ಬೆಲೆಗಳು ಏರುತ್ತಲೇ ಇವೆ ಎಂದು ಗ್ರಾಹಕರ ಅಭಿಪ್ರಾಯವಾಗಿದೆ.

ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಹೆಚ್ಚಾಗಿರುತ್ತದೆ. ತೋಟಗಳಲ್ಲಿ ನೀರಿನ ಕೊರತೆ ಇರುವುದರಿಂದ ಸರಿಯಾದ ರೀತಿ ತರಕಾರಿಗಳು ಮಾರುಕಟ್ಟೆಗೆ ಬರುವುದು ಕಷ್ಟವಾಗುತ್ತದೆ. ಮಳೆ ಇಲ್ಲ, ಬೆಳೆ ಇಲ್ಲ, ಕೂಲಿ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಳ ಬೆಲೆಗಳು ಜಾಸ್ತಿಯಾದರೂ ತರಕಾರಿ ಖರೀದಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ತರಕಾರಿ ಬೆಲೆ ಹೆಚ್ಚಾಗಿರುವುದರಿಂದ ಎಷ್ಟೇ ಬೆಲೆ ಏರಿದರೂ ಖರೀದಿಸಲೇಬೇಕು.
-ಸೌಮ್ಯಾ, ಗೃಹಿಣಿ.

ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿಗಳನ್ನು ತಂದು ಮಾರುವುದೇ ನಮ್ಮ ಉದ್ಯೋಗ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸರಿಯಾದ ರೀತಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಹೆಚ್ಚು ಬೆಲೆ ಕೊಟ್ಟು ತರಕಾರಿ ತಂದು ಮಾರುತ್ತಿದ್ದೇವೆ. ಕೊತ್ತುಂಬರಿ ಸೊಪ್ಪನ್ನು ಕೇಳುವಹಾಗೇಯಿಲ್ಲ. ಸೊಪ್ಪಿನಲ್ಲಿ ಹೆಚ್ಚು ದುಬಾರಿ ಕೊತ್ತುಂಬರಿಯಾಗಿದೆ. ಬಟಾಣಿ ಒಂದು ಕೆ.ಜಿ.ಗೆ 120ರೂ., ಹುರುಳಿಕಾಯಿ ಕೆ.ಜಿ.ಗೆ 120ರೂ. ಇದೆ.
-ನೇತ್ರಾವತಿ, ತರಕಾರಿ ವ್ಯಾಪಾರಿ.

ಬಿಸಿಲು ಹೆಚ್ಚಾಗಿರುವುದರಿಂದ ಸೊಪ್ಪು³ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ದಂಟಿನ ಸೊಪ್ಪು ಕಟ್ಟಿಗೆ 10ರೂ. ಇದೆ. ಸಬ್ಬಕ್ಕಿ 30ರೂ., ಮೆಂತೆ ಸೊಪ್ಪು 20ರೂ.ನಂತೆ ಮಾರಾಟವಾಗುತ್ತಿದೆ. ಕೊತ್ತಂಬರಿ ಸೊಪ್ಪು ಒಂದು ಕೆ.ಜಿ.ಗೆ 100ರೂ. ಆಗಿದೆ. ಕರಬೇವಿನ ಸೊಪ್ಪು ಒಂದು ಕಟ್ಟಿಗೆ 10ರೂ. ಇತ್ತು, ಈಗ ಕೆ.ಜಿ.ಗೆ 50-60ರೂ.ಆಗಿದೆ. ಸೊಪ್ಪಿನ ಬೆಲೆ ಏರಿಕೆಯಿಂದ ಗ್ರಾಹಕರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಸೊಪ್ಪುಗಳು ಒಣಗಿ ಹೋಗುತ್ತಿವೆ.
-ಲಕ್ಷ್ಮಮ್ಮ, ಸೊಪ್ಪು ವ್ಯಾಪಾರಿ.

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next