Advertisement

ನರಿಮೊಗರು ಶಾಲೆಯಲ್ಲಿ ತರಕಾರಿ ತೋಟ ಮಾಡಿದ ಶಿಕ್ಷಕ

01:54 PM Mar 30, 2019 | Naveen |
ನರಿಮೊಗರು : ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೇವಲ ಪಾಠ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ಅದರಾಚೆಗೂ ಕೆಲಸ ಮಾಡಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಉಪಯುಕ್ತವಾಗುತ್ತದೆ ಎನ್ನುವುದನ್ನು ತರಕಾರಿ ಕೃಷಿ ಮಾಡುವ ಮೂಲಕ ಶಿಕ್ಷಕರೊಬ್ಬರು ತೋರಿಸಿಕೊಟ್ಟಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾತ್ರ ಮಾಡದೇ ಬಿಡುವಿನ ವೇಳೆಯಲ್ಲಿ ಶಾಲಾ ವಠಾರದಲ್ಲಿ ತರಕಾರಿ ಕೃಷಿ ಮಾಡುವ ಮೂಲಕ ಭಕ್ತಕೋಡಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಪ್ರಸಾದ್‌ ಸುದ್ದಿಯಾಗಿದ್ದಾರೆ. ಸಂಜೆ 6 ಗಂಟೆಯವರೆಗೂ ಕೃಷಿ ಕಾಯಕದಲ್ಲಿ ತೊಡಗಿ ಮನೆಗೆ ತೆರಳುವ ಶಿಕ್ಷಕ ಪ್ರಸಾದ್‌ ನಡೆಯು ಗ್ರಾಮದಲ್ಲಿ ಮಾದರಿಯೆನಿಸಿಕೊಂಡಿದೆ.
ಭಕ್ತಕೋಡಿ ಶಾಲೆಯ ತರಕಾರಿ ತೋಟ ಎಲ್ಲರನ್ನು ಆಕರ್ಷಿಸುತ್ತಿದೆ. ಇವರಿಗೆ ಶಾಲೆಯ ಸಹಶಿಕ್ಷಕ ಅನಂತ ಕೆ. ಅವರೂ ಸಹಕಾರ ನೀಡುತ್ತಿದ್ದಾರೆ. ಶಾಲಾ ಎಸ್‌ ಡಿಎಂಸಿ ಅಧ್ಯಕ್ಷ ಅಶೋಕ್‌ ಎಸ್‌.ಡಿ. ಅವರೂ ಸಾಥ್‌ ನೀಡುತ್ತಿದ್ದು, ಶಾಲೆಗೆ ರಜೆ ಇರುವ ಸಂದರ್ಭ ಸ್ವತಃ ತಾವೇ ತರಕಾರಿ ಕೃಷಿಗೆ ನೀರು ಹಾಯಿಸುವ ಕೆಲಸವನ್ನು ಎಸ್‌ಡಿಎಂಸಿ ಅಧ್ಯಕ್ಷರು ಮಾಡುತ್ತಿದ್ದಾರೆ. ಶಾಲೆಯ ಮುಖ್ಯಗುರು ಹಾಗೂ ಶಿಕ್ಷಕ ವೃಂದದವರು ಕೂಡ ಶಿಕ್ಷಕ ಪ್ರಸಾದ್‌ ಅವರ ಕಾರ್ಯಕ್ಕೆ ಸಹಕಾರ ಕೊಡುತ್ತಿದ್ದಾರೆ.
ತರಕಾರಿ ತೋಟದಲ್ಲಿ ಏನೇನಿದೆ?
ಶಾಲಾ ವಠಾರದಲ್ಲಿ ಮಾಡಿದ ತರಕಾರಿ ತೋಟದಲ್ಲಿ ತೊಂಡೆಕಾಯಿ, ಬದನೆ, ಮೆಣಸು, ಬೆಂಡೆಕಾಯಿ, ಸೌತೆ, ಅಲಸಂಡೆ, ಹೀರೇಕಾಯಿ, ಬಸಳೆ, ಹರಿವೆ, ಸಿಹಿಗೆಣಸು, ಚೀನೀಕಾಯಿ, ಗೆಣಸು, ಬಳ್ಳಿ ಮೆಣಸು, ಪಪ್ಪಾಯಿ, ಬಾಳೆ ಮೊದಲಾದವುಗಳ ಜತೆಗೆ ಈರುಳ್ಳಿ ಗಿಡ ಮತ್ತು ಟೊಮೇಟೊ ಗಿಡವೂ ಇದೆ. ತರಕಾರಿ ತೋಟವನ್ನು ಮಜ್ಜಿಗೆ, ಬೆಲ್ಲ, ಗೋಮೂತ್ರ, ಸೆಗಣಿ ಮೊದಲಾದ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ.
ಬಿಸಿಯೂಟಕ್ಕೂ ವರದಾನ
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟಕ್ಕೆ ಪದಾರ್ಥ ಮಾಡಲು ಬೇಕಾದ ತರಕಾರಿಗಳು ಶಿಕ್ಷಕ ಪ್ರಸಾದ್‌ ಮಾಡಿರುವ ತರಕಾರಿ ತೋಟದಿಂದ ಸಿಗುತ್ತಿರುವುದು ವರದಾನವಾಗಿದೆ. ಬಿಸಿ ಊಟದ ಅಡುಗೆ ಸಿಬಂದಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ತಮಗಿಷ್ಟ ಬರುವ ತರಕಾರಿಯನ್ನು ಕೊಯ್ದು ಬಿಸಿಯೂಟಕ್ಕೆ ಪದಾರ್ಥ ಮಾಡಬಹುದಾಗಿದೆ.
ತೋಟದಲ್ಲೇ ಕೃಷಿ ತರಗತಿ
ಶಿಕ್ಷಕ ಪ್ರಸಾದ್‌ ಹಾಗೂ ಶಿಕ್ಷಕ ಅನಂತ ಕೆ. ಅವರು ಮಕ್ಕಳಿಗೆ ತರಕಾರಿ ತೋಟದಲ್ಲೇ ಕೃಷಿ ಬಗ್ಗೆ ಪಾಠ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಕೃಷಿ ಬಗೆಗಿನ ಆಸಕ್ತಿ ಇಮ್ಮಡಿಗೊಳ್ಳುವಂತೆ ಮಾಡಿದೆ. ಶಾಲೆಯಲ್ಲಿ ತರಕಾರಿ ಕೃಷಿಯಿಂದ ಪ್ರೇರಣೆಗೊಂಡ ಅನೇಕ ಮಕ್ಕಳು ತಮ್ಮ ಮನೆಯಲ್ಲೂ ಇದೇ ಮಾದರಿಯ ತರಕಾರಿ ಕೃಷಿ ಆರಂಭಿಸಿದ್ದು, ತಮ್ಮ ಮನೆಯ ತರಕಾರಿ ಕೃಷಿ ನೋಡಲು ಶಿಕ್ಷಕರನ್ನು ಆಮಂತ್ರಿಸುತ್ತಿದ್ದಾರೆ.
ಸಿಗುತ್ತಿದೆ ಎಲ್ಲರ ಸಹಕಾರ
ತರಕಾರಿಗೆ ಹಾನಿಯಾಗದಂತೆ ಇಲ್ಲಿನ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಮುತುವರ್ಜಿ ವಹಿಸುತ್ತಿದ್ದಾರೆ. ಜತೆಗೆ ಹೆತ್ತವರ ಮತ್ತು ಊರಿನವರ ಸಹಕಾರವೂ ಸಿಗುತ್ತಿದೆ ಎಂದು ಶಿಕ್ಷಕ ಪ್ರಸಾದ್‌ ಹೇಳುತ್ತಾರೆ. ಶಾಲೆಯ ಸಮೀಪದಲ್ಲೇ ಮುಂಡೂರು ಗ್ರಾ.ಪಂ. ಅಧ್ಯಕ್ಷ ಎಸ್‌.ಡಿ ವಸಂತ ಅವರು ಹಾರ್ಡ್‌ವೇರ್‌ ಅಂಗಡಿ ಹೊಂದಿದ್ದು ತರಕಾರಿ ತೋಟಕ್ಕೆ ನೀರಿನ ವ್ಯವಸ್ಥೆ ಹಾಗೂ ಇತರ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಸರ್ವೆ ಷಣ್ಮುಖ ಯುವಕ ಮಂಡಲದ ವತಿಯಿಂದ ಅಧ್ಯಕ್ಷ ಕಮಲೇಶ್‌ ಸರ್ವೆದೋಳಗುತ್ತು ನೀರಾವರಿ ವ್ಯವಸ್ಥೆ ಮಾಡಿದ್ದಾರೆ.
ಕಾರ್ಯರೂಪಕ್ಕಿಳಿಸಿದರೆ ಚೆನ್ನಾಗಿ ಮನವರಿಕೆ 
ಶಾಲಾ ಪಠ್ಯ ಕ್ರಮದಲ್ಲೂ ಕೃಷಿ ಬಗ್ಗೆ ಇದೆ. ಸರಕಾರಿ ಸುತ್ತೋಲೆಯಲ್ಲೂ ಶಾಲೆಗಳಲ್ಲಿ ಅಕ್ಷರ ತೋಟ ಇರಬೇಕೆಂದು ಇದೆ. ಕೃಷಿ ಚಟುವಟಿಕೆ ಬಗ್ಗೆ ಕೇವಲ ಬೋಧನೆ ಮಾಡಿದರೆ ಮಕ್ಕಳ ತಲೆಗೆ ಹತ್ತುವುದಿಲ್ಲ. ಅದನ್ನು ಈ ರೀತಿ ಕಾರ್ಯರೂಪಕ್ಕಿಳಿಸಿದಾಗ ಮಾತ್ರ ಅದು ಮಕ್ಕಳಿಗೆ ಚೆನ್ನಾಗಿ ಮನವರಿಕೆಯಾಗುತ್ತದೆ. ಈ ಕಾರ್ಯಕ್ಕೆ ಎಲ್ಲರ ಬೆಂಬಲ ಸಿಕ್ಕಿದೆ.
ಪ್ರಸಾದ್‌
ತರಕಾರಿ ಕೃಷಿ ಮಾಡಿದ ಶಿಕ್ಷಕ
ಕೃಷಿ ಆಸಕ್ತಿ ಮೂಡಲು ಸಹಕಾರಿ
ಶಿಕ್ಷಕ ಪ್ರಸಾದ್‌ರವರು ಆಸಕ್ತಿ ವಹಿಸಿ ಶಾಲೆಯಲ್ಲಿ ಮಾಡಿರುವ ತರಕಾರಿ ಕೃಷಿ ಬಗ್ಗೆ ನಮಗೆ ಹೆಮ್ಮೆಯಿದೆ. ಇದಕ್ಕೆ ನಾವೆಲ್ಲರೂ ಸಹಕಾರ ಕೊಡುತ್ತಿದ್ದೇವೆ. ಶಾಲೆಯಲ್ಲಿ ಮಾಡಿರುವ ತರಕಾರಿ ಕೃಷಿಯನ್ನು ನೋಡುವಾಗ ಖುಷಿಯಾಗುತ್ತಿದೆ. ಇದು ಬಿಸಿ ಊಟದ ಪದಾರ್ಥಕ್ಕೆ ಸಹಕಾರಿಯಾಗಿದೆ. ಮಾತ್ರವಲ್ಲದೆ ಮಕ್ಕಳಿಗೆ ಕೃಷಿ, ತರಕಾರಿ ಬಗ್ಗೆ ಆಸಕ್ತಿ ಮೂಡಲು ಮುಖ್ಯ ಕಾರಣವಾಗಿದೆ.
-ಅಶೋಕ್‌
ಎಸ್‌ಡಿಎಂಸಿ ಅಧ್ಯಕ್ಷರು
ಪ್ರವೀಣ್‌ ಚೆನ್ನಾವರ 
Advertisement

Udayavani is now on Telegram. Click here to join our channel and stay updated with the latest news.

Next