ಧಾರವಾಡ: ದ್ರಾಕ್ಷಾರಸ ಮದಿರೆಯಾಗಿ ಮತ್ತೇರಿಸುವುದು ಇತಿಹಾಸದಲ್ಲಿತ್ತು. ಅದೇ ದ್ರಾಕ್ಷಾರಸ ವೈನ್ ಎಂಬ ಹೆಸರಿನೊಂದಿಗೆ ಆಧುನಿಕ ಜಗತ್ತಿನಲ್ಲಿ ಹೆಸರಾಗಿದೆ.
ಇದೀಗ ಬರೀ ದ್ರಾಕ್ಷಾರಸ ಮಾತ್ರವಲ್ಲ, ಹತ್ತು ಬಗೆಯ ಹಣ್ಣು ಮತ್ತು ತರಕಾರಿಗಳಿಂದಲೂ ವೈನ್ ತಯಾರಿಸಬಹುದು ಮತ್ತು ಅದು ದೇಹಕ್ಕೆ ತುಂಬಾ ಉಪಯುಕ್ತ ಎನ್ನುವ ಅಂಶವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ತೋರಿಸಿಕೊಟ್ಟಿದೆ.
ಧಾರವಾಡ ಕೃಷಿ ವಿವಿಯ ಆಹಾರ ತಾಂತ್ರಿಕತೆ, ಆಹಾರ ವಿಜ್ಞಾನ ಮತ್ತು ಪೌಷ್ಠಿಕತೆ ವಿಭಾಗವು ಹಣ್ಣು ಮತ್ತು ತರಕಾರಿ ವೈನ್ ಸಿದ್ಧಗೊಳಿಸಿದ್ದು, ಹತ್ತು ಬಗೆಯ ಹಣ್ಣು-ತರಕಾರಿಗಳನ್ನು ಇದಕ್ಕೆ ಬಳಸಿಕೊಂಡಿದೆ. ದ್ರಾಕ್ಷಾ ರಸವನ್ನು ವೈನ್ ಆಗಿ ಪರಿವರ್ತಿಸುವ ಮಾದರಿಯಲ್ಲೇ ಈ ಹಣ್ಣು ಮತ್ತು ತರಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗೋಡಂಬಿ, ಮೂಸಂಬಿ, ಲಿಂಬೆಹಣ್ಣು, ಪೈನಾಪಲ್ ಮತ್ತು ದ್ರಾಕ್ಷಿಯು ಹಣ್ಣಿನ ವೈನ್‌ಗೆ ಬಳಕೆಯಾದರೆ, ಗಜ್ಜರಿ, ಬಿಟರೂಟ್ ನಂತರ ಗಡ್ಡೆ ತರಕಾರಿಗಳಿಂದಲೂ ವೈನ್ ಉತ್ಪಾದನೆ ಮಾಡಲಾಗುತ್ತಿದೆ. ಇನ್ನು ಬೆಲ್ಲವನ್ನೇ ಬಳಸಿಕೊಂಡು ವೈನ್ ಸಿದ್ಧಗೊಳಿಸಿದ್ದು ಕೃಷಿ ವಿವಿಯ ವಿಜ್ಞಾನಿಗಳ ನಿರಂತರ ಶ್ರಮಕ್ಕೆ ಸಿಕ್ಕ ಫಲವಾಗಿದೆ.
ಯಾಕೆ ವೈನ್?: ವೈನ್‌ಗೆ ಬರೀ ದ್ರಾಕ್ಷಿ ಮಾತ್ರ ಬಳಕೆಯಾಗುತ್ತಿದ್ದು, ಇನ್ನಿತರ ಹಣ್ಣುಗಳು ಸಿಗುವ ಪ್ರದೇಶದಲ್ಲಿ ಇದನ್ನು ಮೌಲ್ಯವರ್ಧನ ಗೊಳಿಸುವ ಪ್ರಯತ್ನ ಇದಾಗಿದೆ. ಕರಾವಳಿಯಲ್ಲಿ ಹೆಚ್ಚಿಗೆ ಗೋಡಂಬಿ ಹಣ್ಣು ಸಿಗುತ್ತಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಗಜ್ಜರಿ ಮತ್ತು ಲಿಂಬೇಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕರೆ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿ ವೈನ್‌ಗೆ ಉತ್ತಮ ಮಾರುಕಟ್ಟೆ ಕೂಡ ಇದ್ದು, ರೈತರು ಸ್ಥಳೀಯವಾಗಿಯೇ ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿಕೊಳ್ಳಬಹುದು ಎಂಬುದು ತರಕಾರಿ ಮತ್ತು ಹಣ್ಣು ವೈನ್ ಸಂಶೋಧಕರ ಅಭಿಪ್ರಾಯ.
ಬೇಕರಿ ಉತ್ಪನ್ನ: ಕೃಷಿ ವಿವಿಯ ಆಹಾರ ಭದ್ರತೆ ಮತ್ತು ಪೌಷ್ಟಿಕ ವಿಭಾಗವೂ ಈಗಾಗಲೇ ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳನ್ನು ಸಿದ್ಧಗೊಳಿಸಿ ಮೌಲ್ಯವರ್ಧಿಸುವ ತರಬೇತಿಯನ್ನು ರೈತರಿಗೆ ನೀಡುತ್ತಿದೆ. ಸಿರಿಧಾನ್ಯಗಳಿಂದ ಬಿಸ್ಕೆಟ್, ಬ್ರೆಡ್, ಬೇಕರಿ ತಿನಿಸುಗಳನ್ನು ಸಿದ್ಧಗೊಳಿಸಿ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಬಂದಿದೆ.
ನಾಲ್ಕು ವರ್ಷಗಳಿಂದ ತರಕಾರಿ, ಹಣ್ಣಿನ ವೈನ್ ತಯಾರಿಕೆ ಪ್ರಯತ್ನ ಮತ್ತು ಪ್ರಯೋಗ ನಡೆಯುತ್ತಿತ್ತು. ಈ ವರ್ಷ ಇದು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಇನ್ನಷ್ಟು ಸುಲಭ ವಿಧಾನದಲ್ಲಿ ರೈತರು ಸಿದ್ಧಗೊಳಿಸುವಂತೆ ಮಾಡುವ ಪ್ರಯೋಗ ಮುಂದುವರಿದಿದೆ.
-ಡಾ| ಸಂತೋಷ, ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗ, ಕೃಷಿ ವಿವಿ ಧಾರವಾಡ