Advertisement

ನೆರೆ ಹಾನಿಯಿಂದ ತರಕಾರಿ ಕೃಷಿ ಕಂಗಾಲು

11:16 PM Aug 12, 2019 | sudhir |

ಕುಂದಾಪುರ: ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಸಂಭವಿಸಿದ ಕಾರಣ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಬರುವ ತರಕಾರಿ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಪರಿಣಾಮ ಬೆಲೆಯಲ್ಲಿ ಮುಪ್ಪಟ್ಟು ಹೆಚ್ಚಳವಾಗಿದೆ.

Advertisement

ಸಾಮಾನ್ಯವಾಗಿ ಕುಂದಾಪುರ ಮಾರುಕಟ್ಟೆಗೆ ಶನಿವಾರ 15 ಲಾರಿಗಳಲ್ಲಿ ತರಕಾರಿ ಬರುತ್ತದೆ. ಆದರೆ ಈ ಬಾರಿ ಒಂದೇ ಲಾರಿ ಬಂದುದು. ಮಂಗಳವಾರ ಇನ್ನಷ್ಟು ಪ್ರಮಾಣದ ತರಕಾರಿ ಬರಬೇಕಿದ್ದು ಬರದಿದ್ದರೆ ದರದಲ್ಲಿ ಇನ್ನಷ್ಟು ಏರಿಕೆಯಾಗಲಿದೆ. ಸ್ಥಳೀಯ ತರಕಾರಿಯೂ ಮಳೆಹಾನಿ ಪಟ್ಟಿಯಲ್ಲಿದೆ.

ಮಳೆಯಿಂದ ರಸ್ತೆ ಸಮಸ್ಯೆ ಇದ್ದ ಕಾರಣ ವಿವಿಧ ಘಾಟಿಗಳ ಮೂಲಕ ಕುಂದಾಪುರ ಬರಬೇಕಿದ್ದ ತರಕಾರಿ ಲಾರಿಗಳು ಬಂದಿಲ್ಲ. ಇದರಿಂದಾಗಿ ದರ ಸದ್ಯದ ಮಟ್ಟಿಗೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ಉತ್ತರ ಕರ್ನಾಟಕದಲ್ಲಿ, ನಿಪ್ಪಾಣಿ, ಮಹಾರಾಷ್ಟ್ರದಲ್ಲಿ ಕೂಡ ಮಳೆಯಿಂದ ಬೆಳೆ ನಾಶವಾದ ಕಾರಣ ಈರುಳ್ಳಿಯಂತಹ ತರಕಾರಿ ತೀರಾ ದುಬಾರಿಯಾಗಲಿದೆ. ಈಗಾಗಲೇ ಈರುಳ್ಳಿ ಬೆಲೆಯಲ್ಲೂ ಮೂರು ಪಟ್ಟು ಹೆಚ್ಚಳವಾಗಿದೆ.

ದರ ಹೆಚ್ಚಳ
ಸಾಮಾನ್ಯವಾಗಿ ಊರಿನ ತರಕಾರಿಗಿಂತ ಘಟ್ಟದ ತರಕಾರಿಗೇ ಅವಲಂಬನೆಯಾಗಿದೆ. ಹಾಗಾಗಿ ಇತರ ಜಿಲ್ಲೆಗಳಿಂದ ಬರುವ ತರಕಾರಿಗಳ ದರ ಏರಿಕೆಯಾದರೂ ಖರೀದಿ ಅನಿವಾರ್ಯವಾಗಿದೆ. ಈರುಳ್ಳಿ 20ರಿಂದ 50 ರೂ. (ಸಂತೆಯಲ್ಲಿ 50, ಕೋಟೇಶ್ವರದಲ್ಲಿ 60, ಬೈಂದೂರಿನಲ್ಲಿ 50 ರೂ. ದರವಿದ್ದು ಲಭ್ಯತೆ ಆಧಾರದಲ್ಲಿ ದರ ವ್ಯತ್ಯಾಸವಾಗಿದೆ),  ಟೊಮೇಟೋ 30ರಿಂದ 45 ರೂ., ಬೀನ್ಸ್‌ 35ರೂ. ಗಳಿಂದ 60 ರೂ., ಕ್ಯಾರೆಟ್‌ 50 ರೂ.ಗಳಿಂದ 80 ರೂ., ಕೊತ್ತಂಬರಿ ಸೊಪ್ಪು 60ರಿಂದ 150 ರೂ. ಬೆಂಡೆ 40ರಿಂದ 60 ರೂ.ಗೆ ಆಲೂಗಡ್ಡೆ 35 ರೂ., ಅಲಸಂಡೆ 60 ರೂ., ಬೀಟ್‌ರೂಟ್‌ 50 ರೂ., ನುಗ್ಗೆ ಕಾಯಿ 80 ರೂ., ಕಾಲಿಫÉವರ್‌ 60 ರೂ., ಬಟಾಣಿ 100 ರೂ., ಕಾಳುಬೀನ್ಸ್‌ 100ರೂ., ಚೌಳಿಕೋಡು 50 ರೂ. ವರೆಗೆ ಏರಿಕೆಯಾಗಿದೆ. ಇತರ ತರಕಾರಿಗಳಿಗೆ ಬೆಲೆ ಕೂಡಾ ಸ್ವಲ್ಪ ಏರಿಕೆಯಾಗಿದೆ.

ಹಣ್ಣು ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಹೆಮ್ಮಾಡಿ, ಕುಂದಬಾರಂದಾಡಿ ಮೊದಲಾದೆಡೆ ಊರ ಬೆಂಡೆ ಬೆಳೆಸುತ್ತಿದ್ದು ಮಳೆಗೆ ಹೂವೆಲ್ಲ ಕೊಳೆತು ಹೋಗಿ ಸ್ಥಳೀಯ ಮಾರುಕಟ್ಟೆಗೆ ಹೊಡೆತ ನೀಡಿದೆ. ಆದ್ದರಿಂದ ಊರಬೆಂಡೆ ದರ 60 ರೂ. ಇದ್ದುದು 100 ರೂ.ಗೆ ಏರಿದೆ.

Advertisement

ಬೆಲೆಯೂ, ಕೊರತೆಯೂ
ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಪೂನಾ ಕಡೆಯಿಂದ ಬರುವ ಬೀನ್ಸ್‌, ಹೀರೆಕಾಯಿ, ಕೊತ್ತಂಬರಿ, ಬೆಂಡೆ, ಬೀಟ್ರೂಟ್‌, ಮುಳ್ಳುಸೌತೆ ಸೇರಿದಂತೆ ವಿವಿಧ ತರಕಾರಿಗಳು ಕಡಿಮೆ ಬಂದ ಕಾರಣ ದರ ಹೆಚ್ಚಾಗಿದೆ. ಈರುಳ್ಳಿ, ಕಾಲಿಫ್ಲವರ್‌, ಕ್ಯಾಪ್ಸಿಕಾಮ್‌, ಕ್ಯಾಬೇಜ್‌, ಕ್ಯಾರೆಟ್‌ ಸೇರಿದಂತೆ ವಿವಿಧ ತರಕಾರಿ ಬೆಲೆ ಹೆಚ್ಚಳವಾಗುತ್ತಿದೆ. ಇನ್ನೊಂದಷ್ಟು ತರಕಾರಿಯ ಕೊರತೆ ಕಾಡುತ್ತಿದೆ.

ಕೊತ್ತಂಬರಿ ಸೊಪ್ಪಿನ ದರ ರವಿವಾರ 300 ರೂ. ಇದ್ದರೆ ಸೋಮವಾರ 100 ರೂ. ಆಗಿದೆ. ಸರಬರಾಜು ಇದ್ದರೆ ದರದಲ್ಲೂ ಏರಿಳಿತವಾಗಲಿದೆ. ಪ್ರಸ್ತುತ ಸಂಗ್ರಹದಲ್ಲಿರುವ ತರಕಾರಿ ಮಾರುಕಟ್ಟೆಗೆ ಬರುತ್ತಿದೆ. ಸಂಗ್ರಹ ಖಾಲಿಯಾದ ಬಳಿಕ ಘಟ್ಟ ಪ್ರದೇಶದಲ್ಲಿ ಲಭ್ಯವಾಗಲಿದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಅಣೆಕಟ್ಟಿನ ನೀರು ಬಿಟ್ಟ ಕಾರಣ ಕೆಲವೆಡೆ ಬೆಳೆ ಮುಳುಗಿದೆ.

ಕಟಾವಿಗೆ ಬಂದುದನ್ನು ಕಟಾವು ಮಾಡಲಾಗಿದೆ. ಹೊಸದಾಗಿ ಬಿತ್ತನೆ ಮಾಡಿದ್ದರ ಕಥೆಯೂ ನೀರಿಳಿದ ಬಳಿಕ ತಿಳಿಯಬೇಕಿದೆ. ಈ ವಾರದಲ್ಲಿ ತರಕಾರಿ ಲಭ್ಯತೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಅಲ್ಲಿನ ರೈತರಲ್ಲಿ ಸಂಗ್ರಹ ಇದ್ದರೆ, ಬೆಳೆಹಾನಿ ದೊಡ್ಡ ಪ್ರಮಾಣದಲ್ಲಿ ಆಗದಿದ್ದರೆ ತೊಂದರೆಯಾಗದು. ಇಲ್ಲದಿದ್ದರೆ ದ‌ವಸಧಾನ್ಯ, ತರಕಾರಿ, ಬೇಳೆಕಾಳುಗಳ ದರ ಗಗನಮುಖೀಯಾಗಲಿದೆ. ಹೊಟೇಲ್‌ ತಿಂಡಿ ತುಟ್ಟಿಯಾಗಲಿದೆ.

ಹೊಟೇಲ್‌ಗ‌ೂ ಕಷ್ಟ
ತರಕಾರಿ ಬೆಳೆಯೇ ನಾಶವಾದರೆ ಇನ್ನೂ ಮೂರ್ನಾಲ್ಕು ತಿಂಗಳು ಕಷ್ಟವಾಗಲಿದೆ. ಸಂಗ್ರಹಿಸುವಂತೆಯೂ ಇಲ್ಲ. ಖರೀದಿಯೂ ತುಟ್ಟಿಯಾದರೆ ಸಮಸ್ಯೆಯಾಗಲಿದೆ.
– ವಿಜಯ್‌, ಹೋಟೆಲ್‌ ಮಾಲಕರು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next