Advertisement

ಪ್ರಚಾರಕ್ಕಾಗಿಯೇ ತರಕಾರಿ ಹಂಚಿಕೆ: ಆರೋಪ

03:12 PM May 06, 2020 | Team Udayavani |

ಚನ್ನಪಟ್ಟಣ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್‌, ರೈತರ ತರಕಾರಿ ಖರೀದಿಸಿ ಕಷ್ಟಕ್ಕೀಡಾಗಿದ್ದ ರೈತರು, ಬಡವರು, ಕೂಲಿ ಕಾರ್ಮಿಕರಿಗೆ ನೆರವಾಗಲು ತಮ್ಮದೇ ಟಾಸ್ಕಫೋರ್ಸ್‌ ಸಮಿತಿ ನಿರ್ಮಿಸಿಕೊಂಡಿದ್ದರು. ಆದರೆ ಈ ಟಾಸ್ಕ ಫೋರ್ಸ್‌ಗಳಲ್ಲಿದ್ದ ಮುಖಂಡರು, ಕಾರ್ಯಕರ್ತರು ಮಾತ್ರ, ತರಕಾರಿ ಖರೀದಿ ಹಾಗೂ ಹಂಚುವ ನೆಪದಲ್ಲಿ ಪ್ರಚಾರ ಗಿಟ್ಟಿಸಿಕೊಂಡು, ಸಮಿತಿಯ ಧ್ಯೇಯೋದ್ದೇಶಗಳನ್ನು ಗಾಳಿಗೆ ತೂರಿದ್ದಾರೆ ಎಂಬ ದೂರುಗಳು ಕೇಳಿವೆ.

Advertisement

ಕೆಲ ಮುಖಂಡರು, ಎಲೆಕೋಸು, ನಾಲ್ಕೈದು ಟೊಮೆಟೋ, ಮೂರ್‍ನಾಲ್ಕು ಕ್ಯಾರೆಟ್‌ ಹಂಚಿ, ಅದನ್ನೇ ಮಹಾದಾನ ಎಂಬಂತೆ ಮೊಬೈಲ್‌ ಕ್ಯಾಮೆರಾಗಳಿಗೆ ಪೋಸು ನೀಡುತ್ತಿದ್ದಾರೆ. ಜತೆಗೆ ಯಾರೋ ಖರೀದಿಸಿದ ತರಕಾರಿಗೆ ಮುಖಂಡರು ಜಾತ್ರೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ತಾಲೂಕಿನ ಮಟ್ಟಿಗೆ ಟಾಸ್ಕಫೋರ್ಸ್‌ ಹಾಗೂ ಜಿಪಂ ಸದಸ್ಯರು ಸೇರಿದಂತೆ ಬೆರಳೆಣಿಕೆಯಷ್ಟು, ಮುಖಂಡರು ಮಾತ್ರ ತರಕಾರಿ ಖರೀದಿಗೆ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ. ಪ್ರತಿ ಜಿಪಂ ವ್ಯಾಪ್ತಿಯಲ್ಲಿ ಹಂಚಲು ಚಾಲನೆ ನೀಡುವ ಸಂದರ್ಭದಲ್ಲಿ ಮುಖಂಡು ನಾಮುಂದು ತಾಮುಂದು ಎಂಬಂತೆ ಪೋಟೋಗೆ ಮುಗಿಬೀಳುತ್ತಿದ್ದು, ಸಾಮಾಜಿಕ ಅಂತರ ಮರೆಯುತ್ತಿದ್ದಾರೆ. ಇನ್ನಾದರೂ ಮುಖಂಡು ಜವಾಬ್ದಾರಿ ಅರಿತುಕೊಳ್ಳಲಿ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳುತ್ತಿವೆ.

ರೈತರಿಂದ ತರಕಾರಿ ಖರೀದಿಸಿ, ಗ್ರಾಮೀಣ ಪ್ರದೇಶ ದಲ್ಲಿ ಸಂಕಷ್ಟದಲ್ಲಿರುವವರಿಗೆ ಹಂಚಲಾಗುತ್ತಿದೆ. ಮುಖಂಡರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸ ಬೇಕು. ನಿಮ್ಮ ವೈಯಕ್ತಿಕ ಕೊಡುಗೆಯೂ ಅಗತ್ಯ. ಫೋಸ್‌ ನೀಡುವುದರಿಂದ ಪ್ರಯೋಜನವಿಲ್ಲ.
●ಶರತ್‌ಚಂದ್ರ, ಟಾಸ್ಕಫೋರ್ಸ್‌ ಅಧ್ಯಕ್ಷ, ಚನ್ನಪಟ್ಟಣ ತಾ

ಜಿಲ್ಲೆ ಹಾಗೂ ಹೊರ ಜಿಲ್ಲೆ ಸೇರಿ 300 ಟನ್‌ ತರಕಾರಿ ಖರೀದಿಸಲಾಗಿದೆ. ಜಿಪಂ ಸದಸ್ಯರು, ಕೆಲ ಮುಖಂಡರು ಮಾತ್ರ ಅಲ್ಪ ದೇಣಿಗೆ ಕೊಟ್ಟಿದ್ದಾರೆ. ಕೆಲವರು ವಿತರಿಸುವುದನ್ನೇ ಪ್ರಚಾರಕ್ಕೆ ಬಳಸಿಕೊಂಡಿರುವುದು ಸರಿಯಲ್ಲ. ಜವಾಬ್ದಾರಿಯುತವಾಗಿ ವರ್ತಿಸಿ.
●ಎಸ್‌.ಗಂಗಾಧರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next