ಲಿಂಗಸುಗೂರು: ಸಂತೆ ಕರ ವಸೂಲಿ ಹರಾಜಿನ ಮೂಲಕ ಪುರಸಭೆ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದರೂ ಸಂತೆ ಮೈದಾನದಲ್ಲಿ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಪರಿಣಾಮ ರೈತರು, ವ್ಯಾಪಾರಸ್ಥರು, ಗ್ರಾಹಕರು ಕೆಸರಲ್ಲೇ ತರಕಾರಿ, ಇತರೆ ವ್ಯಾಪಾರ ವಹಿವಾಟು ನಡೆಸುವಂತಾಗಿದೆ.
ಪಟ್ಟಣದಲ್ಲಿ ಪ್ರತಿ ಶನಿವಾರ ಸಂತೆ ಮೈದಾನದಲ್ಲಿ ವಾರದ ಸಂತೆ ನಡೆಯುತ್ತಿದೆ. ಸುತ್ತಲಿನ ಹಳ್ಳಿ, ತಾಂಡಾಗಳ ರೈತರು, ವರ್ತಕರು ಇಲ್ಲಿಗೆ ತರಕಾರಿ, ಕಾಳುಕಡಿ ವ್ಯಾಪಾರಕ್ಕೆ ಬರುತ್ತಾರೆ. ಸಂತೆ ಮೈದಾನದಲ್ಲಿ ವ್ಯಾಪಾರಸ್ಥರಿಗೆ ಬೇಸಿಗೆಯಲ್ಲಿ ಕನಿಷ್ಠ ಕುಡಿಯುವ ನೀರು, ಶೌಚಾಲಯ ಸೌಲಭ್ಯವಿಲ್ಲ. ನೆರಳಿನ ಸೌಲಭ್ಯವಂತೂ ಕೇಳಲೇಬೇಡಿ. ಬೇಸಿಗೆಯಲ್ಲಿ ನೆತ್ತಿ ಸುಡುವ ಬಿಸಿಲಲ್ಲೇ ಬೆಳಗ್ಗೆಯಿಂದ ಸಂಜೆವರೆಗೆ ವ್ಯಾಪಾರ ನಡೆಯುತ್ತದೆ. ಮಳೆಗಾಲದಲ್ಲಿ ಇಡೀ ಸಂತೆ ಮೈದಾನ ಅಕ್ಷರಶಹ ಕೆಸರುಗದ್ದೆಯಂತಾಗುತ್ತದೆ. ಇದರಲ್ಲೇ ಕುಳಿತು ವ್ಯಾಪಾರಸ್ಥರು ವಹಿವಾಟು ನಡೆಸುವ ಸ್ಥಿತಿ ಇದೆ.
ಆದಾಯ ಬೇಕು-ಅಭಿವೃದ್ಧಿ ಬೇಡ: ವಾರದ ಸಂತೆಯಲ್ಲಿ ವ್ಯಾಪಾರಸ್ಥರಿಂದ ಸುಂಕ ವಸೂಲಿಗಾಗಿ ಪ್ರತಿ ವರ್ಷ 9 ತಿಂಗಳ ಅವಧಿಗೆ ಟೆಂಡರ್ ಕರೆಯಲಾಗುತ್ತದೆ. ಇದರಿಂದ ಪುರಸಭೆಗೆ 7 ಲಕ್ಷ ರೂ.ವರೆಗೆ ಆದಾಯ ಬರುತ್ತದೆ. ಪುರಸಭೆಗೆ ಆದಾಯ ಬೇಕು, ಸಂತೆ ಮೈದಾನ ಅಭಿವೃದ್ಧಿ ಬೇಡವಾಗಿದೆ. ಸಂತೆ ಮೈದಾನವನ್ನು ಕಾಂಕ್ರೀಟ್ ಮಾಡಿಸಿ, ವ್ಯಾಪಾರಸ್ಥರಿಗೆ ಶೆಡ್ ಹಾಕುವ ಕೆಲಸಕ್ಕೆ ಮುಂದಾಗಿಲ್ಲ. ಕನಿಷ್ಠ ಕುಡಿಯುವ ನೀರಿಲ್ಲ. ಮಳೆ ಬಂದರೆ ಕೆಸರುಗದ್ದೆಯಂತಾಗುವ ಮೈದಾನದಲ್ಲಿ ಸಂತೆಗೆ ಬರುವ ಅನೇಕರು ಜಾರಿ ಬಿದ್ದು ಗಾಯಗೊಂಡ ಘಟನೆಗಳು ಕೂಡ ನಡೆದಿವೆ. ಇದರ ಮಧ್ಯೆ ಹಂದಿ, ನಾಯಿ, ಜಾನುವಾರುಗಳ ಓಡಾಟದ ಕಾಟಕ್ಕೆ ವ್ಯಾಪಾರಸ್ಥರು ಹೈರಾಣಾಗಿದ್ದಾರೆ.
ಹೆಚ್ಚಿಗೆ ಕರ ವಸೂಲಿ: ಸಂತೆ ಕರ ವಸೂಲಿ ಗುತ್ತಿಗೆ ಹಿಡಿದವರು ಪುರಸಭೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಮೇಲಾಗಿ ಹಣ ಪಡೆದು ವ್ಯಾಪಾರಸ್ಥರಿಗೆ ರಸೀದಿ ಕೊಡುತ್ತಿಲ್ಲ. ಯಾವ ವ್ಯಾಪಾರಕ್ಕೆ ಎಷ್ಟು ಶುಲ್ಕ ಎಂಬ ದರಪಟ್ಟಿ ಫಲಕವನ್ನು ಸಂತೆ ಮೈದಾನದಲ್ಲಿ ಹಾಕಬೇಕೆಂಬ ನಿಯಮವಿದ್ದರೂ ಗುತ್ತಿಗೆ ದಾರರು ಹಾಕುತ್ತಿಲ್ಲ. ಈ ಬಗ್ಗೆ ಪುರಸಭೆ ಕೂಡ ನಿರ್ಲಕ್ಷ್ಯ ವಹಿಸಿದೆ. ಸಂತೆ ಮೈದಾನ ಅಭಿವೃದ್ಧಿಗೆ, ವ್ಯಾಪಾರಸ್ಥರಿಗೆ ನೀರು, ಶೌಚಾಲಯ ಸೌಲಭ್ಯ ಕಲ್ಪಿಲು ಮತ್ತು ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಕರ ವಸೂಲಿಗೆ ಕಡಿವಾಣ ಹಾಕಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.