ಚಿಕ್ಕಮಗಳೂರು: ಎರಡು ವರ್ಷಗಳಿಂದ ನಿರಂತರವಾಗಿ ಕಾಡುತ್ತಿರುವ ಕೋವಿಡ್ ಸೋಂಕಿನಿಂದ ಸ್ವಚ್ಛಂದವಾಗಿ ಜೀವನ ನಡೆಸುತ್ತಿದ್ದವರ ಬದುಕು ಬಿರುಗಾಳಿಗೆ ಸಿಲುಕಿದ ತರಗೆಲೆಯಂತಾಗಿದೆ. ಆಟೋ ಓಡಿಸಿಕೊಂಡು ಬರುವ ಅಲ್ಪಸ್ವಲ್ಪ ಹಣದಲ್ಲೇ ನೆಮ್ಮದಿ ಜೀವನ ಕಂಡುಕೊಂಡಿದ್ದ ಆಟೋ ಚಾಲಕರು ದುಡಿಮೆ ಇಲ್ಲದೇ ತರಕಾರಿ ವ್ಯಾಪಾರಕ್ಕೆ ಮುಂದಾಗಿದ್ದಾರೆ.
ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮ ರೂಪಿಸಿದೆ. ಆಟೋ, ಟ್ಯಾಕ್ಸಿ ಸಂಚಾರವನ್ನು ನಿರ್ಬಂಧಿಸಿದೆ. ಚಾಲಕ ವೃತ್ತಿಯನ್ನೇ ನಂಬಿಕೊಂಡವರ ಬದುಕು ಬೀದಿಗೆ ಬಂದು ನಿಂತಿದೆ. ಆಟೋ ಓಡಿಸಲು ಅವಕಾಶವಿಲ್ಲ, ಆಟೋಗಳನ್ನು ರೋಡಿಗಿಳಿಸಿದರೇ ಪೊಲೀಸರು ದಂಡ ವಿಧಿಸುತ್ತಾರೆ. ಆಟೋವನ್ನು ಸೀಜ್ ಮಾಡುತ್ತಾರೆ. ಬೇರೆ ದುಡಿಮೆ ಇಲ್ಲದೇ ಕೈಯಲ್ಲಿ ಹಣವಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲವು ಆಟೋ ಚಾಲಕರು ತರಕಾರಿ ವ್ಯಾಪಾರಕ್ಕೆ ಮುಂದಾಗಿದ್ದಾರೆ.
ಸರ್ಕಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೂ ಆಟೋದಲ್ಲಿ ಮನೆ ಮನೆಗೆ ತೆರಳಿ ತರಕಾರಿ ವ್ಯಾಪಾರ ಮಾಡಲು ಅನುಮತಿ ನೀಡಿದೆ. ಅನೇಕ ಆಟೋ ಚಾಲಕರು ಸ್ವಂತ ಆಟೋವಿಲ್ಲ, ಬೇರೆಯವರಿಂದ ದಿನಕ್ಕಿಷ್ಟು ಎಂದು ಬಾಡಿಗೆ ಪಡೆದುಕೊಂಡು ಆಟೋ ಓಡಿಸುತ್ತಾರೆ. ಮನೆಯಲ್ಲೇ ಕುಳಿತರೇ ಆಟೋ ಮಾಲೀಕರಿಗೆ ಬಾಡಿಗೆ ಕಟ್ಟಲು ಸಾಧ್ಯವಾಗುವುದಿಲ್ಲ, ಮನೆ ನಿರ್ವಹಣೆಯೂ ಸಾಧ್ಯವಿಲ್ಲ ಎಂದು ತರಕಾರಿ ವ್ಯಾಪಾರಕ್ಕೆ ಮುಂದಾಗಿದ್ದಾರೆ.
ಪ್ಯಾಸೆಂಜರ್ ಆಟೋದಲ್ಲಿ ತರಕಾರಿ ತುಂಬಿಕೊಂಡು ನಗರದ ಬಡಾವಣೆ ಬಡಾವಣೆಗೆ ಸುತ್ತಿ ವ್ಯಾಪಾರ ಮಾಡುತ್ತಿರುವ ಸಂತೆ ಮೈದಾನದ ಮಂಜುನಾಥ್ ಅವರನ್ನು ಮಾತನಾಡಿಸಿದಾಗ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಕಠಿಣ ನಿಯಮ ಮಾಡಿದೆ. ಸುಮ್ಮನೆ ಮನೆಯಲ್ಲಿ ಕುಳಿತರೇ ಜೀವನ ಹೇಗೆ ಸಾಗಿಸುವುದು. ಅದಕ್ಕೆ ಆಟೋದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ತಮ್ಮ ನೋವು ತೋಡಿಕೊಂಡರು.
ಆಟೋ ಓಡಿಸಿಕೊಂಡು ಹೇಗೋ ದಿನಕ್ಕೆ 400, 500 ರೂ. ದುಡಿಯುತ್ತಿದ್ದೇವು. ಕಳೆದ 2 ವರ್ಷಗಳಿಂದ ಕೋವಿಡ್ ಬಾಧಿ ಸುತ್ತಿದ್ದು, ಎಲ್ಲರ ಬದುಕನ್ನು ಕಿತ್ತುಕೊಂಡು ಬಿಟ್ಟಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ತರಕಾರಿ ವ್ಯಾಪಾರ ಮಾಡಿಯಾದರು. ದಿನಕ್ಕೆ ನಾಲ್ಕು ಕಾಸು ದುಡಿಯಲು ಮುಂದಾಗಿದ್ದೇನೆ ಎಂದರು. ಸರ್ಕಾರ ಆಟೋ ಸಂಚಾರ ಸ್ಥಗಿತಗೊಳಿಸಿದೆ. ಒಂದು ವೇಳೆ ಆಟೋವನ್ನು ರಸ್ತೆಗಿಳಿಸಿದರೇ, ಪೊಲೀಸರು ದಂಡ ವಿಧಿಸುತ್ತಾರೆ, ಆಟೋ ಸೀಜ್ ಮಾಡುತ್ತಾರೆ. ದುಡಿಮೆ ಇಲ್ಲದಿದ್ದರೇ ಕುಟುಂಬ ಸಾಗಿಸುವುದು ಹೇಗೆ ಎಷ್ಟುದಿನ ಅಂತ ದುಡಿಮೆ ಇಲ್ಲದೇ ಮನೆಯಲ್ಲೇ ಕುಳಿತುಕೊಳ್ಳುವುದು. ಆದಷ್ಟು ಆಗಲಿ ಹೇಗೋ ಕುಟುಂಬ ನಡೆಸುವಷ್ಟು ಸಂಪಾದನೆಯಾದರೇ ಸಾಕು ಎಂದು ಮನೆ ಮನೆಗೆ ತೆರಳಿ ತರಕಾರಿ ಮಾರುತ್ತಿದ್ದೇನೆ.
ಎಪಿಎಂಸಿ ಮಾರುಕಟ್ಟೆಯಿಂದ ತರಕಾರಿಕೊಂಡು ಬೆಳಗ್ಗೆಯಿಂದ ಸಂಜೆವರೆಗೂ ತರಕಾರಿ ಮಾರುತ್ತೇನೆ. ನಿತ್ಯ 2000 ರೂ. ತರಕಾರಿ ಖರೀದಿಸಿ ಮಾರಾಟ ಮಾಡುತ್ತೇನೆ. ಒಂದು ದಿನ ಚೆನ್ನಾಗಿ ವ್ಯಾಪಾರವಾದರೆ ಮತ್ತೂಂದು ದಿನ ಇಲ್ಲದಂತಾಗುತ್ತದೆ. ಇಂದು 500 ರೂ. ತರಕಾರಿ ಮಾರಿದ್ದೇನೆ ಎನ್ನುತ್ತಾರೆ. 10 ಗಂಟೆ ಬಳಿಕ ಜನರ ಓಡಾಟಕ್ಕೆ ನಿರ್ಬಂಧವಿರುವುದರಿಂದ 10 ಗಂಟೆಯ ಮೇಲೆ ವ್ಯಾಪಾರವೇ ನಡೆಯುವುದಿಲ್ಲ, ಹೇಗೋ ಬರುವ ಅಲ್ಪಸ್ವಲ್ಪ ಸಂಪಾದನೆಯಲ್ಲೇ ಕುಟುಂಬ ನಿರ್ವಹಿಸುತ್ತಿದ್ದೇನೆ ಎಂದರು. ಒಟ್ಟಾರೆ ಕೋವಿಡ್ ಸೋಂಕು ಅನೇಕರ ಬದುಕನ್ನು ಕಿತ್ತುಕೊಂಡಿದೆ. ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕಾಗಿ ಮೂಲವೃತ್ತಿಯನ್ನೇ ಬಿಟ್ಟು, ಬೇರೆ ಬೇರೆ ವೃತ್ತಿಗೆ ಜಾರುತ್ತಿದ್ದಾರೆ.
ಆಟೋ ಚಾಲಕರಿಗೆ ಸರ್ಕಾರ ಮೂರು ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ಆ ಹಣ ಬರುವರೆಗೂ ಕಾದು ಕುಳಿತರೇ, ಕುಟುಂಬ ನಿರ್ವಹಣೆಗೆ ಏನುಮಾಡಬೇಕು. ಅದರಿಂದ ತರಕಾರಿ ವ್ಯಾಪಾರಕ್ಕೆ ಮುಂದಾಗಿದ್ದೇನೆ.-
ಮಂಜುನಾಥ, ಆಟೋ ಚಾಲಕ.
-ಸಂದೀಪ ಜಿ.ಎನ್. ಶೇಡ್ಗಾರ್