Advertisement

Road potholes: ಪ್ರವಾಸಿಗರ ಪ್ರಾಣ ಹಿಂಡುವ ಗುಂಡಿ ಬಿದ್ದ ರಸ್ತೆ!

12:01 PM May 27, 2024 | Team Udayavani |

ಮಾಗಡಿ: ವೀರೇಗೌಡನದೊಡ್ಡಿಯಿಂದ ಮಂಚನಬೆಲೆ ರಸ್ತೆ ಸುಮಾರು 4 ಕಿ.ಮೀ. ತೀರಾ ಹದಗೆಟ್ಟಿದ್ದು, ವಾಹನಗಳ ಸವಾರರು ಸ್ಪಲ್ಪ ಯಾಮಾರಿದರೂ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ.

Advertisement

ತಾಲೂಕಿನ ಮಾಡಬಾಳ್‌ ಹೋಬಳಿ ಹಂಚೀಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಚನಬೆಲೆ ಜಲಾಶಯವಿದೆ. ಪ್ರಕೃತಿ ಮಡಿಲಲ್ಲಿರುವ ಮಂಚನಬೆಲೆ ಜಲಾಶಯ ಅತ್ಯಂತ ಸುಂದರವಾದ ಪ್ರವಾಸಿ ತಾಣ. ರಜಾ ಬಂತೆಂದರೆ ಸಾಕು, ಬೆಂಗಳೂರು ನಗರದಿಂದ ಮೋಜು, ಮಸ್ತಿಗಾಗಿ ಪ್ರವಾಸಿಗರು ಬರುತ್ತಾರೆ. ಇಲ್ಲಿಗೆ ಬರುವವರು ಮೊದಲು ಪ್ರಸಿದ್ಧ ಸಾವನದುರ್ಗಕ್ಕೂ ಬರುವುದುಂಟು.

ಉತ್ತರವಿಲ್ಲ: ವೀರೇಗೌಡನದೊಡ್ಡಿಯಿಂದ ಮಂಚನ ಬೆಲೆಗೆ ತೆರಳುವ ರಸ್ತೆ ಡಾಂಬರೀಕರಣಗೊಂಡು ಹಲವು ವರ್ಷಗಳೇ ಉರುಳಿವೆ. ಹಂಚೀಕುಪ್ಪೆ ಗ್ರಾಪಂಗೆ ಸೇರುವ ಈ ರಸ್ತೆ ಮೂಲಕವೇ ಹತ್ತಾರು ಗ್ರಾಮಗಳಿವೆ. ಈ ಗ್ರಾಮಕ್ಕೆ ತೆರಳುವ ಜನರೂ ಹದಗೆಟ್ಟ ರಸ್ತೆ ಸಂಚಾರಕ್ಕೆ ರೋಸಿ ಹೋಗಿದ್ದಾರೆ. ಗರ್ಭಿಣಿಯರು ಅಥವಾ ಅನಾರೋಗ್ಯಕ್ಕೆ ತುತ್ತಾದ ವಯೋವೃದ್ಧರನ್ನೋ ಈ ಹದಗೆಟ್ಟ ರಸ್ತೆ ಮೂಲಕ ಕರೆ ತಂದರೆ, ಬಹುಷಃ ನೋವಿನಿಂದ ರಸ್ತೆ ಮಧ್ಯೆಯೇ ಹೆರಿಗೆ ಆಗಬಹುದು, ಇನ್ನು ವಯೋ ವೃದ್ಧರು ಮಾರ್ಗಮಧ್ಯೆ ಸಾವನ್ನಪ್ಪಬಹುದು. ಆದರೆ, ಸಮಸ್ಯೆ ಹೀಗಿದ್ದರೂ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಗ್ರಾಪಂನಲ್ಲಿ ಉತ್ತರವೇ ಇಲ್ಲ.

ಕ್ರಮ ಕೈಗೊಳ್ಳಿ: ಕಾಡಿನ ನಡುವೆ ಈ ರಸ್ತೆ ಹಾದು ಹೋಗುವುದು, ಕಾಡುಪ್ರಾಣಿಗಳ ಕಾಟ ತಪ್ಪಿಸಿಕೊಂಡು ಸಂಚರಿ ಸಬೇಕಾದ ಅನಿವಾರ್ಯತೆ ಇದೆ. ಇಂಥ ಪರಿಸ್ಥಿತಿಯಲ್ಲಿ ಕನಿಷ್ಠ ತೇಪೆ ಕೆಲಸವನ್ನಾದರೂ ಪಂಚಾಯ್ತಿ ಅಧಿಕಾರಿಗಳು ಮಾಡಿಸಬಹುದಿತ್ತು. ಆದರೂ, ಕಂಡು ಕಾಣದಂತೆ ಜಾಣ ಕುರುಡು ಪ್ರದ ರ್ಶನದಿಂದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇನ್ನಾ ದರೂ ಪಂಚಾಯ್ತಿ ಅಧಿಕಾರಿಗಳಾಗಲಿ, ಸಂಬಂಧ ಪಟ್ಟ ಲೋಕೋ ಪಯೋಗಿ ಅಧಿ ಕಾರಿಗಳಾಗಲಿ ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಸಾವನದುರ್ಗಕ್ಕೆ ಬರುವ ದಾರಿ ದುರ್ಗಮ : ಪ್ರವಾಸಿಗರು ಸಾವನದುರ್ಗದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಪುರಾತನವಾದ ಸಾವಂಧಿ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಕೃತಿ ಮಡಿಲಲ್ಲಿರುವ ಮಂಚನಬೆಲೆ ಜಲಾಶಯವನ್ನು ನೋಡಿಕೊಂಡು ಸಂಜೆ ವೇಳೆಗೆ ನಗರಕ್ಕೆ ವಾಪಸ್ಸಾಗುತ್ತಾರೆ. ಆದರೆ, ಮಂಚನಬೆಲೆ ಜಲಾಶಯದಿಂದ ವೀರೇಗೌಡನದೊಡ್ಡಿ ಮೂಲಕ ಸಾವನದುರ್ಗಕ್ಕೆ ಬರುವ ದಾರಿ ಅತ್ಯಂತ ದುರ್ಗಮಯವಾಗಿದೆ. ಅದರಲ್ಲೂ ರಸ್ತೆ ತೀರಾ ಹಳ್ಳಗುಂಡಿಗಳಿಂದ ಕೂಡಿದೆ. ವಾಹನಗಳ ಸವಾರರು ಹಳ್ಳ ಗುಂಡಿಗಳನ್ನು ತಪ್ಪಿಸಿಕೊಂಡು ಸರ್ಕಸ್‌ ಮಾಡಿಕೊಂಡೇ ಸಂಚರಿಸಬೇಕಿದೆ. ಈ ಸಂಬಂಧಪಟ್ಟ ನಿತ್ಯ ಸವಾರರು ಲೋಕೋ ಪಯೋಗಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಜಲಾಶಯದ ಹಿಂಭಾಗದ ಶಿಥಿಲ ಸೇತುವೆಯನ್ನು ತೆರವುಗೊಳಿಸಿ ಹೊಸ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಂಚನಬೆಲೆ- ವೀರೇಗೌಡನದೊಡ್ಡಿ ರಸ್ತೆ ದುರಸ್ತಿಗೆ ಮೊದಲ ಆದ್ಯತೆ ಕೊಡುವ ಮೂಲಕ ಶೀಘ್ರ ಕಾಮಗಾರಿ ಪ್ರಾರಂಭಿಸುತ್ತೇನೆ. ●ಎಚ್‌.ಸಿ.ಬಾಲಕೃಷ್ಣ, ಶಾಸಕರು

ವೀರೇಗೌಡನದೊಡ್ಡಿ- ಮಂಚನಬೆಲೆ ರಸ್ತೆ ತೀರ ಹಳ್ಳಗುಂಡಿಗಳಿಂದ ಕೂಡಿ ಹದಗೆಟ್ಟಿದ್ದರೂ ಕನಿಷ್ಠ ತೇಪೆ ಹಾಕದೆ ಇರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಅಕ್ಷರಶಃ ಈ ರಸ್ತೆ ಸಂಚಾರ ಯಮಯಾತನೆ. ●ಶಿವರಾಜು, ಮಂಚನಬೆಲೆ ನಿವಾಸಿ

ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next