Advertisement

ವೀರಶೈವರು ಒಗ್ಗಟ್ಟಾಗಿರಿ: ರಂಭಾಪುರಿ ಶ್ರೀ

11:12 AM May 18, 2019 | Team Udayavani |

ಬಾಗಲಕೋಟೆ: ಇಂದು ರಾಜಕೀಯದ ಸಂಘರ್ಷದಲ್ಲಿ ವೀರಶೈವ ಧರ್ಮ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ವೀರಶೈವರು ಒಗ್ಗಟ್ಟಾಗಿ ಜಾಗೃತರಾಗಿರಬೇಕಾಗಿದೆ ಎಂದು ರಂಭಾಪುರಿ ಪೀಠದ ಡಾ| ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

Advertisement

ತಾಲೂಕಿನ ಬಿಲ್ಕೆರೂರ ಬಿಲ್ವಾಶ್ರಮ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಂಜೆ ನಡೆದ ಭಾವೈಕ್ಯತಾ ಧರ್ಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈಚೆಗೆ ಸಮಾಜ ಒಡೆಯುವ ಕೆಲಸ ನಡೆಯುತ್ತಿದ್ದು ಇದನ್ನು ಸಮರ್ಥವಾಗಿ ತಡೆದು ಧರ್ಮ, ಸಂಸ್ಕೃತಿಯನ್ನು ಉಳಿಸುವ ದೊಡ್ಡ ಜವಾಬ್ದಾರಿ ಸಮಾಜ ಬಾಂಧವರ ಮೇಲಿದೆ ಎಂದರು. ವೈಚಾರಿಕತೆ, ಆಧುಣೀಕರಣದ ಹೆಸರಿನಲ್ಲಿ ಸಂಸ್ಕೃತಿಯನ್ನು ಕಲುಷಿತಗೊಳಿಸುವ ಹುನ್ನಾರ ನಡೆಯುತ್ತಿದೆ. ಧರ್ಮದಲ್ಲಿ ರಾಜಕೀಯ ನುಸುಳಿ ಧರ್ಮದ ಗೌರವ, ಘನತೆ ಕುಗ್ಗಿಸುವ ಕೆಲಸ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಲೇಸು ಬಯಸಿದೆ. ಯಾವುದೇ ತಾರತಮ್ಯ ಮಾಡದೇ ಧರ್ಮ ಪಾಲನೆ ಮಾಡಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಪಂಚಪೀಠಗಳು ಯಾವುದೇ ಜಾತಿ,ಮತ, ಪಂಥ ಎನ್ನದೇ ಎಲ್ಲ ಜಾತಿ, ಜನಾಂಗಗಳ ಶ್ರೇಯೋಭಿವೃದ್ಧಿಯ ಉದ್ದೇಶ ಹೊಂದಿ ಸಮನ್ವತೆಯ ಸಂದೇಶ ಸಾರಿವೆ ಎಂದರು. ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಡಾ|ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶೀ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯ ವಹಿಸಿದ್ದರು. ಶ್ರೀಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ಅನೇಕ ಹರ-ಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.

ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ವೀರಣ್ಣ ಚರಂತಿಮಠ, ವಿಧಾನಪರಿಷತ್‌ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಸಿ.ಎಸ್‌.ನಾಡಗೌಡ ಮಾತನಾಡಿದರು. ದಾನಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ನಿವೃತ್ತ ನ್ಯಾಯಾಧೀಶ ಎಸ್‌.ವೈ.ಕುಂಬಾರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರಶಾಂತ ರಿಪ್ಪನಪೇಟೆ ಅವರ ‘ಕಾರಣಾಗಮ ಅಮೃತ ಬಿಂದು’ ಗ್ರಂಥ ಹಾಗೂ ಆನಂದಕುಮಾರ ಕಂಬಳಿಹಾಳ ರಚಿಸಿದ ಧ್ವನಿ ಸುರಳಿ ಬಿಡುಗಡೆ ಮಾಡಲಾಯಿತು. ಕಲಾವಿದ ಮಲ್ಲಿಕಾರ್ಜುನ ಹೂಗಾರ ಪ್ರಾರ್ಥಿಸಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸ್ವಾಗತಿಸಿದರು. ಕೊಣ್ಣೂರಿನ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next