Advertisement

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

08:23 PM Mar 28, 2024 | Team Udayavani |

ಧಾರವಾಡ : ಲೋಕಸಭೆಯ ಧಾರವಾಡ ಕ್ಷೇತ್ರಕ್ಕೆ ಲಿಂಗಾಯತರಿಗೆ ಬಿಜೆಪಿ ಟಿಕೇಟ್ ನೀಡಬೇಕು. ಈ ಬಗ್ಗೆ ಈಗಾಗಲೇ ಗಡುವು ನೀಡಿರುವ ದಿಂಗಾಲೇಶ್ವರ ಸ್ವಾಮೀಜಿಗಳ ನಿರ್ಣಯಕ್ಕೆ ವೀರಶೈವ ಲಿಂಗಾಯತ ಮಹಾಸಭಾದ ಧಾರವಾಡ ಘಟಕ ಬೆಂಬಲ ನೀಡಲಿದೆ ಎಂದು ಲಿಂಗಾಯತ ಮುಖಂಡ ಈಶ್ವರಚಂದ್ರ ಹೊಸಮನಿ ಹೇಳಿದರು.

Advertisement

ಇಲ್ಲಿನ ಲಿಂಗಾಯತ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯವೇ ಅತ್ಯಧಿಕ ಪ್ರಮಾಣದಲ್ಲಿದ್ದು, ಯಾವ ಪಕ್ಷವೂ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಬಿಜೆಪಿ ಪಕ್ಷದಲ್ಲಿ ಈಗಾಗಲೇ ನಾಲ್ಕು ಬಾರಿ ಒಬ್ಬರಿಗೆ ಟಿಕೇಟ್ ನೀಡಿದ್ದು, ಈ ಬಾರಿ ಲಿಂಗಾಯತರಿಗೆ ಟಿಕೇಟ್ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್‌ಗೆ ಒತ್ತಾಯಿಸಿದರು.

ಸಮಾಜದ ಮುಖಂಡರ ಮೇಲೆ ಕಳೆದ ಕೆಲವು ವರ್ಷಗಳಿಂದ ಆಗಿರುವ ಅನ್ಯಾಯದ ಬಗ್ಗೆ ನಿನ್ನೆ ದಿಂಗಾಲೇಶ್ವರ ಸ್ವಾಮೀಜಿಗಳು ಮನಬಿಚ್ಚಿ ಮಾತನಾಡಿದ್ದಾರೆ. ಅವರು ಆಡಿರುವ ಮಾತುಗಳು ಸತ್ಯವಾಗಿದ್ದು ಅದಕ್ಕೆ ನಮ್ಮ ಸಹಮತವಿದೆ. ಕೂಡಲೇ ಬಿಜೆಪಿ ಎಚ್ಚೆತ್ತುಕೊಳ್ಳಬೇಕು. ಕಳೆದ 20 ವರ್ಷಗಳಲ್ಲಿ ಲಿಂಗಾಯತ ಸಮುದಾಯವನ್ನು ಹತ್ತಿಕ್ಕಲಾಗುತ್ತಿದೆ ಎಂದರು.

ಮಹಾಸಭಾದ ಮುಖಂಡ ವೀರಣ್ಣ ಯಳಲ್ಲಿ ಮಾತನಾಡಿ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇರುವ ಲಿಂಗಾಯತ ಸಮುದಾಯವನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ. ನಮ್ಮ ಮುಖಂಡರಿಗೆ ಟಿಕೆಟ್ ನೀಡುವ ನೀರಿಕ್ಷೆ ಇತ್ತು. ಆದರೆ ನೀಡದೇ ಇರುವುದಕ್ಕೆ ವಿಳಂಬವಾದರೂ ಈಗ ಹೋರಾಟ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಈ ವಿಚಾರವನ್ನು ಪ್ರಸ್ತಾಪಿಸಿ ಸಮಾಜದ ಜನರನ್ನು ಜಾಗೃತಿ ಮಾಡುತ್ತೇವೆ ಎಂದರು.

ಲಿಂಗಾಯತ ಸಮುದಾಯದ ಒಳದನಿಯನ್ನು ನಾವು ಮಾಧ್ಯಮಗಳ ಮುಂದೆ ಇಟ್ಟಿದ್ದೇವೆ. ಈ ಹಿಂದಿನ ವರ್ಷಗಳಲ್ಲೂ ನಾವು ಹೋರಾಟ ಮಾಡಿದ್ದೇವು. ಒಂದು ವೇಳೆ ಬಿಜೆಪಿ ಅಥವಾ ಕಾಂಗ್ರೆಸ್ ಟಿಕೇಟ್ ನೀಡದೇ ಹೋದರೆ ದಿಂಗಾಲೇಶ್ವರ ಸ್ವಾಮೀಜಿಗಳ ಅಣತಿಯಂತೆ ಮುಂದಿನ ನಿರ್ಣಯವನ್ನು ತಿಳಿಸುವುದಾಗಿ ಹೇಳಿದರು.

Advertisement

ಮಹಾಸಭಾದ ಕಾರ್ಯದರ್ಶಿ ಸಿದ್ದಣ್ಣ ಕಂಬಾರ, ಸದಸ್ಯರಾದ ಎಂ.ಡಿ.ಪಾಟೀಲ, ಗಂಗಣ್ಣ ಈರೇಶನವರ, ರಾಜಶೇಖರ ಉಪ್ಪಿನ, ಎಂ.ಎಫ್.ಹಿರೇಮಠ, ಕಲ್ಲಪ್ಪ ಯಲಿವಾಳ, ಅಮೃತ ಬೊಳ್ಳೊಳ್ಳಿ, ಆರ್.ಬಿ.ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಯಾವುದೇ ಸಂಬಂಧವಿಲ್ಲ
ಹುಬ್ಬಳ್ಳಿಯಲ್ಲಿ ನಡೆದ ಮಠಾಧಿಶರ ಸಭೆಯಲ್ಲಿ ಪಾಲ್ಗೊಂಡಿದ್ದ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು, ದಿಂಗಾಲೇಶ್ವರ ಸ್ವಾಮೀಜಿಗಳು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ನೀಡಿದ್ದ ಹೇಳಿಕೆಗೂ ತಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಶ್ರೀ ಕ್ಷೇತ್ರ ಮುರುಘಾಮಠ ಲೋಕಕಲ್ಯಾಣಾರ್ಥ ಸ್ಥಾಪನೆಯಾಗಿದ್ದು ಸರ್ವಸಮಾಜದ ಏಳಿಗೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶ್ರೇಯೋಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ವೀರಶೈವ ಲಿಂಗಾಯತ ಮಠವಾಗಿದ್ದರು ಸಹ ಸರ್ವಸಮಾಜದ ಭಕ್ತರು ಗದ್ದುಗೆಯ ಆರಾಧಕರಿದ್ದರು. ಶ್ರೀ ಕ್ಷೇತ್ರ ಮುರುಘಾಮಠ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ ಹಾಗೂ ಎಂದು ರಾಜಕೀಯ ವಿಷಯಗಳಲ್ಲಿ ಭಾಗವಹಿಸುವದಿಲ್ಲ ಹಾಗೂ ಯಾವದೇ ಅಭ್ಯರ್ಥಿ ಆಯ್ಕೆ ಆಯಾ ಪಕ್ಷದ ವರಿಷ್ಠರು ಹಾಗೂ ಅವರ ಪಕ್ಷದ ತೀರ್ಮಾನ ಇದಕ್ಕೆ ಮಠಮಾನ್ಯಗಳಿಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next