ಧಾರವಾಡ: ಉತ್ತರ ಪ್ರದೇಶದ ಕಾಶಿ ಜ್ಞಾನಪೀಠದಲ್ಲಿ ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವವು ಮಕರ ಸಂಕ್ರಾಂತಿಯಿಂದ ಮಹಾಶಿವರಾತ್ರಿವರೆಗೆ ವಾರಣಾಸಿಯಲ್ಲಿ ಜರುಗಲಿದೆ ಎಂದು ಕಾಶಿ ಜ್ಞಾನ ಪೀಠದ ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2020ರ ಜ.15ರಿಂದ ನಿರಂತರ 38 ದಿನಗಳ ಕಾಲ ನಡೆಯಲಿದೆ. ಈ ಬೃಹತ್ ಧರ್ಮಯಜ್ಞಕ್ಕೆ “ವೀರಶೈವ ಮಹಾಕುಂಭ’ ಪ್ರಧಾನ ಶೀರ್ಷಿಕೆ ನೀಡಲಾಗಿದೆ. ಜ.15ರಂದು ಮಕರ ಸಂಕ್ರಾಂತಿ ದಿನ ಸಚಿವ ಕೆ.ಎಸ್.ಈಶ್ವರಪ್ಪ ಅವರು ವೀರಶೈವ ಮಹಾಕುಂಭಕ್ಕೆ ಚಾಲನೆ ನೀಡಲಿದ್ದಾರೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸದಾನಂದ ಗೌಡ, ಸುರೇಶ ಅಂಗಡಿ, ಕಿಶನ್ ರೆಡ್ಡಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಫೆ.15ರಂದು ವೀರಶೈವ ಧರ್ಮದ ಪಂಚಪೀಠಗಳ ಶ್ರೀಗಳ ಸಾನ್ನಿಧ್ಯದಲ್ಲಿ ಬೃಹತ್ ಧರ್ಮ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಿಎಂ ಯಡಿಯೂರಪ್ಪ ಸಮಾವೇಶ ಉದ್ಘಾಟಿಸುವರು.
ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು. ಫೆ.16ರಂದು ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಪೀಠಗಳ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪ್ರಧಾನಿ ಮೋದಿ ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವ ಉದ್ಘಾಟಿಸುವರು.
ವಿಶ್ವದ 19 ಭಾಷೆಗಳಿಗೆ ಅನುವಾದಿತವಾಗಿರುವ ಜಾಗತಿಕ ದಾರ್ಶನಿಕ ಮತ್ತು ಧಾರ್ಮಿಕ ಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯ ಎಲ್ಲ ಭಾಷೆಗಳ ಗ್ರಂಥಗಳ ಹಾಗೂ ಮೊಬೈಲ್ ಆ್ಯಪ್‌ನ ಲೋಕಾರ್ಪಣೆಯನ್ನೂ ನೆರವೇರಿಸಲಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಾಗೂ ಕರ್ನಾಟಕದ ಸಿಎಂ ಯಡಿಯೂರಪ್ಪ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಶೀ ಶ್ರೀಗಳು ತಿಳಿಸಿದರು.
ವೀರಶೈವ-ಲಿಂಗಾಯತ ಧರ್ಮದ ಎಲ್ಲ ಉಪಜಾತಿಗಳಿಗೂ ರಾಜ್ಯ ಸರ್ಕಾರ ಒಬಿಸಿ ಮೀಸಲಾತಿ ನೀಡುವುದರ ಜೊತೆಗೆ ಕೇಂದ್ರ ಸರ್ಕಾರದಿಂದ ಈ ಸೌಲಭ್ಯ ಸಿಗುವಂತೆ ಮಾಡಲು ಶಿಫಾರಸು ಮಾಡಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮುಗಿದ ಅಧ್ಯಾಯ.
-ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿಜ್ಞಾನ ಪೀಠ