ದಾವಣಗೆರೆ: ವೀರಶೈವ-ಲಿಂಗಾಯತ ಎಂದಿದ್ದರೂ ಒಂದೇ. ವೀರಶೈವ-ಲಿಂಗಾಯತ ವಿಭಜನೆ ಮಾಡುವ ಪ್ರಯತ್ನ ಈಗಲ್ಲ, ಯಾವಾಗಲೂ ಸಫಲವಾಗಲ್ಲ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಖೀಲ ಭಾರತ ವೀರಶೈವ ಮಹಾಸಭೆ ಸಹ ವೀರಶೈವ-ಲಿಂಗಾಯತ ಒಂದೇ ಎಂದು ಹೇಳಿದೆ.
ತುಮಕೂರಿನ ಡಾ| ಶಿವಕುಮಾರ ಸ್ವಾಮೀಜಿಯವರು ಸಹ ಅದೇ ಮಾತನ್ನು ಹೇಳಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲಿ ವೀರಶೈವ-ಲಿಂಗಾಯತ ಎಂದು ಸಮಾಜವನ್ನು ಒಡೆಯುವ ಕೆಲಸ ನಡೆಯಿತು.
ಅದರಲ್ಲಿ ತೊಡಗಿಸಿಕೊಂಡವರು ಸೋಲು ಕಂಡರು.ಸರ್ಕಾರವೂ ಇದರಲ್ಲಿ ವಿಫಲವಾಯಿತು. ಹೀಗಾಗಿ,ವೀರಶೈವ-ಲಿಂಗಾಯತ ಎಂದು ಸಮಾಜ ಒಡೆಯುವ ಕೆಲಸಕ್ಕೆ ಯಾರೇ ಮುಂದಾದರೂ ಸಫಲತೆ ಸಿಗಲ್ಲ ಎಂದು ದೃಢ ವಿಶ್ವಾಸದಿಂದ ಹೇಳಿದರು.
ವೀರಶೈವ-ಲಿಂಗಾಯತರು ಒಗ್ಗಟ್ಟಾಗಿದ್ದರೆ ನಮ್ಮವರೇ ಮುಖ್ಯಮಂತ್ರಿ ಆಗುತ್ತಾರೆ. ಆ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕು ಎಂಬುದು ತಮ್ಮ ಆಶಯ. ಯಾವುದೇ ಪಕ್ಷದಲ್ಲೇ ಇರಲಿ.
ವೀರಶೈವ-ಲಿಂಗಾಯತ ವಿಚಾರ ಬಂದಾಗ ಎಲ್ಲರೂ ಒಂದಾಗಬೇಕು.ಚುನಾವಣೆಯಲ್ಲೂ ಅಷ್ಟೇ. ಯಾವ ಪಕ್ಷ ನಮಗೆ ಸ್ಪಂದಿಸುತ್ತದೆಯೋ ಅಂತಹ ಪಕ್ಷದ ಪರ ಒಲವು ಸಹಜವಾಗಿಯೆ ಇರುತ್ತದೆ. ಆದರೆ, ಇಂತದ್ದೇ ಪಕ್ಷ, ಅಭ್ಯರ್ಥಿ ಎಂದು
ಹೇಳಲಿಕ್ಕಾಗದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.