ಮಂಗಳೂರು: ಜೆಡಿಎಸ್ ಯಾರೊಂದಿಗೆ ಕೈಜೋಡಿಸುತ್ತದೋ ಆ ಪಕ್ಷ ಸರ್ವನಾಶವಾದಂತೆಯೇ ಎಂದು ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಗುಡುಗಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರದ ಕುರಿತು ಟೀಕಿಸಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ಅವರು ಜೆಡಿಎಸ್ ಯಾರೊಂದಿಗೆ ಕೈಜೋಡಿಸುತ್ತದೋ ಆ ಪಕ್ಷ ಸರ್ವನಾಶವಾದಂತೆಯೇ, ಅದೊಂದು ರೀತಿ ಉಡ ಹೊಕ್ಕ ಮನೆಯ ಹಾಗೆ, ಅವರ ಜೊತೆ ಕೈಜೋಡಿಸಿ ಕಳೆದ ಬಾರಿ ಸಂಸತ್ ಚುನಾವಣೆಯಲ್ಲಿ ನಮ್ಮ ಸಂಖ್ಯೆ ಒಂದಕ್ಕೆ ಇಳಿದಿತ್ತು, ಈಗ ಬಿಜೆಪಿ ಕಥೆಯೂ ಅಷ್ಟೇ ಆಗಲಿದೆ ಎಂದರು.
ಇನ್ನು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡಿದ ಅವರು ಈಗ ಹೊಸ ಸಂಸತ್ ಭವನದಲ್ಲಿ ಮಹಿಳಾ ಮೀಸಲು ಕಾಯಿದೆ ಜಾರಿ ಮಾಡಿದ್ದು ಚಾರಿತ್ರಿಕ ಎಂದು ಬಿಜೆಪಿ ಬಿಂಬಿಸುತ್ತಿದೆ. ಮಹಿಳೆಯರು ಪಾಪಿಷ್ಟರು ಎನ್ನುವ ಗೋಳ್ವಲ್ಕರ್ ಅವರ ಸಿದ್ಧಾಂತ ಪಾಲಿಸುವ ಬಿಜೆಪಿ ಎಂದಿಗೂ ಮಹಿಳೆಯರಿಗೆ ಸಮಾನತೆ ಕೊಡುವುದಿಲ್ಲ, ಇದು ಕೇವಲ ಕಪಟ ನಾಟಕವಷ್ಟೇ, ಮಸೂದೆ ಅಂಗೀಕಾರ ಮಾಡಲು ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ೧೦ ವರ್ಷ ತೆಗೆದುಕೊಂಡಿದ್ದಾರೆ.
೨೦೧೧ರಲ್ಲಿ ನಾನು ಕಾನೂನು ಸಚಿವನಾಗಿರುವಾಗಲೇ ಇದೇ ಬಿಲ್ ಅನ್ನು ರಾಜ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದೆ, ಆದರೆ ಪಕ್ಷಕ್ಕೆ ಸಾಕಷ್ಟು ಶಕ್ತಿ ಇಲ್ಲದ ಕಾರಣ ಆಗ ಲೋಕಸಭೆಯಲ್ಲಿ ಜಾರಿಯಾಗಿರಲಿಲ್ಲ ಎಂದು ಅವರು ಹೇಳಿದರು.
ಸಂಸದರಿಗೆ ಸಂಸತ್ತಿನಲ್ಲಿ ನೀಡಲಾದ ಸಂವಿಧಾನದ ಪ್ರತಿಯಲ್ಲಿ ಜಾತ್ಯತೀತ ಎನ್ನುವ ಶಬ್ದ ಬಿಟ್ಟಿರುವುದು ಖಂಡನಾರ್ಹ, ಇದು ಬಿಜೆಪಿಯ ಅಸಾಂವಿಧಾನಿಕ ಕ್ರಮ. ತಾಕತ್ತಿದ್ದರೆ ಅವರು ವಿಶೇಷ ಅಧಿವೇಶನ ಕರೆದು, ತಿದ್ದುಪಡಿ ಮಾಡಿ ಆ ಶಬ್ದ ತೆಗೆಯಲಿ, ಇದು ನನ್ನ ಸವಾಲು ಎಂದರು.
ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ ಖಚಿತ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲಿದ್ದೇನೆ, ಆದರೆ ಪುತ್ರ ಹರ್ಷ ಮೊಯ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮೊಯ್ಲಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್