ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿ ಬಡ ವಿದ್ಯಾರ್ಥಿಗಳು ವೈದ್ಯರು, ಎಂಜನಿಯರಿಂಗ್ ಆಗಲು ಸಿಇಟಿ ಪರೀಕ್ಷೆ ಅಸ್ತಿತ್ವಕ್ಕೆ ತಂದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿಗೆ ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ಜಾರಿದ ಬೆನ್ನಲ್ಲೇ ಅವರ ರಾಜಕೀಯ ಭವಿಷ್ಯದ ಬಗ್ಗೆ ಕ್ಷೇತ್ರದ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಶಾಸಕರಾಗಿ, ಸಚಿವರಾಗಿ ರಾಜ್ಯದ ಮುಖ್ಯ ಮಂತ್ರಿ ಯಾಗಿ, ಕೇಂದ್ರದಲ್ಲಿ ನಾಲ್ಕೈದು ಮಹತ್ವದ ಖಾತೆಗಳನ್ನು ನಿಭಾಯಿಸಿ ದೇಶದ ಎರಡನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ, ಲೋಕಸಭೆಯ ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮೊಯಿಲಿಗೆ ರಾಜಕೀಯವಾಗಿ ಎರಡನೇ ಬಾರಿಗೆ ಪುನರ್ ಜನ್ಮ ನೀಡಿದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕೈ ಟಿಕೆಟ್ ತಪ್ಪಿದ್ದು, ಅವರ ಚುನಾವಣಾ ರಾಜಕಾರಣ ಮುಗಿಯಿತೇ ಎನ್ನುವ ಚರ್ಚೆ ಲೋಕಸಭೆ ಚುನಾವಣೆ ಹೊತ್ತಲ್ಲಿ ನಡೆದಿದೆ.
ಕಾರ್ಕಳದಿಂದ 6 ಬಾರಿ ಶಾಸಕ: 1972 ರಿಂದ 1999 ರ ವರೆಗೂ ಸತತ ಆರು ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಿಂದ ವಿಧಾನಸಭೆ ಪ್ರವೇಶಿಸಿ ಹಲವು ಮಹತ್ವದ ಖಾತೆಗಳನ್ನು ನಿರ್ವಹಿಸಿದ ಮೊಯಿಲಿ ರಾಜ್ಯದ ಮುಖ್ಯಮಂತ್ರಿಯಾಗಿಯು 1992 ರಿಂದ 1994 ರ ವರೆಗೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಅನೇಕ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಸಣ್ಣ ಕೈಗಾರಿಕೆ, ಹಣಕಾಸು, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ, ಕರ್ನಾಟಕ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಮಂಗಳೂರಿನಲ್ಲಿ 2 ಬಾರಿ ಸೋಲು: ಮುಖ್ಯಮಂತ್ರಿಯಾದ ಬಳಿಕ 1999 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಮಂಗಳೂರು ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ವೀರಪ್ಪ ಮೊಯಲಿ ಬಿಜೆಪಿ ಅಭ್ಯರ್ಥಿ ವಿ.ಧನಂಜಯ್ ಕುಮಾರ್ ವಿರುದ್ಧ ಕೇವಲ 8,469 ಮತಗಳ ಅಂತರದಲ್ಲಿ ಲೋಕಸಭೆ ಪ್ರವೇಶ ಕೈ ತಪ್ಪಿತು. ನಂತರ 2004 ರ ಲೋಕಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗುವ ವೀರಪ್ಪ ಮೊಯಿಲಿ ಡಿ.ವಿ.ಸದಾನಂದಗೌಡ ವಿರುದ್ಧ 33,415 ಮತಗಳ ಅಂತರದಿಂದ ಸೋಲು ಕಾಣುತ್ತಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಸತತ 2 ಬಾರಿ ಸೋತ ನಂತರ 2009 ರ ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಶ್ವತ್ಥನಾರಾಯಣ ವಿರುದ್ಧ 51,381 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಬಳಿಕ 2014 ರ ಲೋಕಸಭಾ ಚುನಾವಣೆಯಲೂ ಕೂಡ ಎರಡನೇ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಬಿ.ಎನ್.ಬಚ್ಚೇಗೌಡ ವಿರುದ್ದ (ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಿದ್ದರು) 9,520 ಮತಗಳ ಅಂತರದಿಂದ ಗೆಲು ಸಾಧಿಸಿದ್ದರು. ನಂತರ 2019 ರಲ್ಲಿ ಅದೇ ಬಿಜೆಪಿಯ ಬಿ.ಎನ್.ಬಚ್ಚೇಗೌಡ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಲಾಗದೇ ಸೋತರು.
ತಪ್ಪಿದ ಟಿಕೆಟ್, ಮುಂದೇನು? ಸದ್ಯ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ 84 ವರ್ಷದ ಮಾಜಿ ಮುಖ್ಯಮಂತ್ರಿ ಮೊಯಿಲಿ ರವರ ಕೈ ತಪ್ಪಿ ರಕ್ಷಾ ರಾಮಯ್ಯಗೆ ಸಿಕ್ಕಿದ್ದು, ಮೊಯಿಲಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲೂ ಚುನಾವಣಾ ರಾಜಕಾರಣ ಮೊಯಿಲಿ ಅವರದು ಈ ಲೋಕಸಭಾ ಚುನಾವಣೆ ಮೂಲಕ ಕೊನೆಗೊಂಡಿದೇ ಎನ್ನುವ ಚರ್ಚೆ ಕೂಡ ಕ್ಷೇತ್ರದ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಮಾಜಿ ಸಿಎಂ ಮೊಯಿಲಿ ರಾಜಕೀಯ ಪಯಣ :
ಎಲ್‌ಐಸಿ ಉದ್ಯೋಗಿಯಾಗಿದ್ದ ಮಾಜಿ ಸಿಎಂ ವೀರಪ್ಪ ಮೊಯಿಲಿ
ವಕೀಲ ವೃತ್ತಿ ಮೂಲಕ 1968 ರಲ್ಲಿ ರಾಜಕಾರಣ ಪ್ರವೇಶಿಸಿದ ಮೊಯಿಲಿ
ದಕ್ಷಿಣ ಕನ್ನಡ ಜಿಲ್ಲೆಯ ಕರ್ಕಾಳದಿಂದ 6 ಬಾರಿ ವಿಧಾನಸಭೆಗೆ ಸತತ ಆಯ್ಕೆ
ಸಣ್ಣ ಕೈಗಾರಿಕೆ, ಹಣಕಾಸು, ಕಾನೂನು, ಶಿಕ್ಷಣ ಸಚಿವರಾಗಿಯು ಕಾರ್ಯ
1983 ರಿಂದ 1985 ರ ವರೆಗೂ ವಿರೋಧ ಪಕ್ಷದ ನಾಯಕರಾಗಿ ಸೇವೆ
1992 ರಿಂದ 1994 ರ ವರೆಗೂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಕೆ
2000 ರಿಂದ 2004 ರ ವರೆಗೂ ಕರ್ನಾಟಕ ಕಂದಾಯ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ
2005 ರಿಂದ 20009 ರವರೆಗೂ ಕೇಂದ್ರದ 2ನೇ ಆಡಳಿತ ಸುಧಾರಣಾ’ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಕ
2009 ರಿಂದ 2014ರ ವರೆಗೂ 2 ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರು
ಕೇಂದ್ರದಲ್ಲಿ ಕಾನೂನು, ಪೆಟ್ರೋಲ್, ಇಂಧನ, ಪರಿಸರ, ಕಾರ್ಪೋರೆಟ್, ಅರಣ್ಯ ಹಾಗೂ ಪರಿಸರ ಸಚಿವರಾಗಿ ಕಾರ್ಯನಿರ್ವಹಣೆ
2014 ರಿಂದ 2019 ರ ವರೆಗೂ ಲೋಕಸಭೆಯ ಸಂಸದೀಯ ಹಾಗೂ ಹಣಕಾಸು ಸ್ಥಾಯಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
- ಕಾಗತಿ ನಾಗರಾಜಪ್ಪ