Advertisement

ಸಾಕಾರಗೊಳ್ಳದ ಚಾರಣಿಗರ ಸ್ವರ್ಗ ವೀರಮಲೆ ಪ್ರವಾಸಿ ಯೋಜನೆ

01:45 AM Dec 05, 2018 | Karthik A |

ಕಾಸರಗೋಡು: ಹಲವು ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಂದ ಸಂಪದ್ಭರಿತ ಪ್ರದೇಶವಾಗಿರುವ ಕಾಸರಗೋಡು ಜಿಲ್ಲೆಯನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಗೊಳಿಸಲು ಸಾಕಷ್ಟು ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಘೋಷಿಸುವ ಯೋಜನೆಗಳು ಘೋಷಣೆಯಾಗಿಯೇ ಉಳಿದು ಬಿಡುತ್ತದೆ ಎಂಬುದೇ ದೊಡ್ಡ ದುರಂತ. ಚಾರಣಿಗರ ಸ್ವರ್ಗವೆಂದೇ ಕರೆಸಿಕೊಂಡಿದ್ದ ರಾಣಿಪುರಂ ಪ್ರವಾಸಿ ಕೇಂದ್ರದಷ್ಟೇ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ವೀರಮಲೆ ಗಮನ ಸೆಳೆಯಬಹುದಾಗಿದ್ದರೂ ಇಲ್ಲಿ ಸಾಕಷ್ಟು ಅಭಿವೃದ್ಧಿ ಈವರೆಗೂ ಸಾಧ್ಯವಾಗಿಲ್ಲ. ಅಭಿವೃದ್ಧಿಯ ಬಗ್ಗೆ ಹಲವು ಘೋಷಣೆಗಳು ಮೊಳಗಿದ್ದರೂ, ಈ ಘೋಷಣೆಗಳೆಲ್ಲ ಕಡತಕ್ಕೆ ಮಾತ್ರ ಸೀಮಿತವಾಗಿ ಉಳಿದುಕೊಂಡಿವೆ.

Advertisement

ಚಾರಣಿಗರ ಸ್ವರ್ಗವೆಂದೇ ಖ್ಯಾತಿ ಪಡೆದಿದೆ ವೀರಮಲೆ. ಕೇರಳದ ಸಚಿವರು ವೀರಮಲೆ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದರೂ ಈ ವರೆಗೂ ಯಾವುದೇ ಪ್ರಾಥಮಿಕ ಪ್ರಕ್ರಿಯೆಯೂ ನಡೆದಿಲ್ಲ. ಸ್ಥಳೀಯರು ಬಹಳಷ್ಟು ನಿರೀಕ್ಷಿಸಿದ್ದರೂ ಯೋಜನೆ ಕಾರ್ಯಗತಗೊಳ್ಳದಿರುವುದರಿಂದ ನಿರಾಸೆಗೊಂಡಿದ್ದಾರೆ. ಸಚಿವರು ಘೋಷಣೆ ಗಾಳಿಗೋಪುರದಂತಾಗಿದೆ.

ಪ್ರಕೃತಿ ರಮಣೀಯ ಪ್ರದೇಶವಾಗಿರುವ ವೀರಮಲೆ ಚೆರ್ವತ್ತೂರು ಪಂಚಾಯತ್‌ನಲ್ಲಿ ನೆಲೆಗೊಂಡಿದ್ದು, ವೀರಮಲೆ ಬೆಟ್ಟವನ್ನು ಕಾರ್ಯಂಗೋಡು ನದಿ ಆವರಿಸಿಕೊಂಡಿದೆ. ಇದೇ ವೀರಮಲೆ 18 ನೇ ಶತಮಾನದಲ್ಲಿ ಡಚ್ಚರ ಪ್ರಮುಖ ಕೇಂದ್ರವಾಗಿತ್ತು. ರಾಣಿಪುರದಂತೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ವೀರಮಲೆ ಹಿಲ್‌ ಪ್ರವಾಸಿಗರ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಎಲ್ಲ ಸಾಧ್ಯತೆಗಳಿದ್ದು, ಈ ಬಗ್ಗೆ ಸಚಿವರು ಕೂಡ ಘೋಷಣೆ ಮಾಡಿದ್ದರು.

ಜನಪ್ರತಿನಿಧಿಗಳೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವೀರಮಲೆ ಬೆಟ್ಟಕ್ಕೆ ಹಲವು ಬಾರಿ ಭೇಟಿ ನೀಡಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಲ್ಪಟ್ಟಿದ್ದರೂ ಅಂತಹ ಯಾವುದೇ ಯೋಜನೆ ಕೈಗೂಡದಿದ್ದಾಗ ವೀರಮಲೆ ಪ್ರವಾಸಿ ಕೇಂದ್ರ ಯೋಜನೆಯನ್ನು ಖಾಸಗಿ ಹೂಡಿಕೆಯಿಂದ ಅಭಿವೃದ್ಧಿ ಪಡಿಸುವುದಾಗಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಘೋಷಣೆ ಮಾಡಿದ್ದರು. ಆದರೆ ಸಚಿವರ ಘೋಷಣೆ ಕಡತದಲ್ಲೇ ಉಳಿದುಕೊಂಡಿದೆ. 2016ರ ಡಿಸೆಂಬರ್‌ ತಿಂಗಳಲ್ಲಿ ಸಚಿವರು ವೀರಮಲೆಗೆ ಭೇಟಿ ನೀಡಿದ್ದರು.

ಬಜೆಟ್‌ ಅಧಿವೇಶನಕ್ಕೆ ಮುನ್ನ ಸಚಿವರು ವೀರಮಲೆಗೆ ಭೇಟಿ ನೀಡಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಘೋಷಣೆ ಮಾಡಿದ್ದರಿಂದ ಸ್ಥಳೀಯರು ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದ್ದರು. ಸಚಿವರ ಘೋಷಣೆಯ ಬಳಿಕ ಈ ವರೆಗೂ ಯಾವುದೇ ಪ್ರಸ್ತಾವವಾಗಲೀ, ಪ್ರಾಥಮಿಕ ಪ್ರಕ್ರಿಯೆಯಾಗಲೀ ನಡೆದಿಲ್ಲ. ಇದರಿಂದ ಸಹಜವಾಗಿಯೇ ಸ್ಥಳೀಯರು ನಿರಾಸೆಗೊಂಡಿದ್ದಾರೆ. ಅರಣ್ಯ ಇಲಾಖೆಯ ಸ್ವಾಧೀನದಲ್ಲಿರುವ 70 ಎಕರೆ ಭೂಪ್ರದೇಶದಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ವರ್ಷಗಳ ಹಿಂದೆಯೇ ಡಿ.ಟಿ.ಪಿ.ಸಿ. ಮುಖಾಂತರ ಯೋಜನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿತ್ತು.

Advertisement

ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ತಕ್ಕುದಾದ ಅಭಿವೃದ್ಧಿ ಪಡಿಸಲಾಗುವುದೆಂದು ಡಿಟಿಪಿಸಿ ಅಧಿಕಾರಿಗಳೊಂದಿಗಿದ್ದ ಜನಪ್ರತಿನಿಧಿಗಳು ಘೋಷಿಸಿದ್ದರು. ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಸೌಕರ್ಯಗಳನ್ನು ಒದಗಿಸುವುದಾಗಿ ತಿಳಿಸಲಾಗಿತ್ತು. ವೀರಮಲೆ ಬೆಟ್ಟದ ಮೇಲೆ ಮಕ್ಕಳ ಪಾರ್ಕ್‌, ಆಟಿಕೆಗಳ ಜೋಡಣೆ, ರೋಪ್‌ ವೇ, ತೇಜಸ್ವಿನಿ ಹೊಳೆಯಿಂದ ವೀರಮಲೆ ತಲುಪಲು ವಿಶೇಷ ರೀತಿಯ ಬೋಟ್‌ ಸರ್ವೀಸ್‌ ಆರಂಭಿಸುವುದು, ಈಜು ಕೊಳ ಮೊದಲಾದವುಗಳನ್ನು ಕಲ್ಪಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಎಲ್ಲ ಘೋಷಣೆಗಳೂ, ಯೋಜನೆಗಳೂ  ಮರೆಯಾದವು. ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ತಕ್ಕ ಪ್ರದೇಶವಾಗಿರುವ ವೀರಮಲೆ ಬೆಟ್ಟವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿದ್ದರೆ ಪ್ರವಾಸಿಗರನ್ನು ಹೆಚ್ಚುಹೆಚ್ಚು ಆಕರ್ಷಿಸುತ್ತಿತ್ತು. ಆದರೆ ಅದು ಈವರೆಗೂ ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ನಿರಾಶ್ರಿತರಾಗುವ ಜನರಿಗಾಗಿ ಎರಡು ಕೇಂದ್ರಗಳನ್ನು ಈ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ಕೇಂದ್ರಗಳು ಇದೀಗ ಸಮಾಜ ವಿದ್ರೋಹಿಗಳ ಅಟ್ಟಹಾಸ ಕೇಂದ್ರವಾಗಿ ಬದಲಾಗಿದೆ ಎಂಬುದಾಗಿ ಸ್ಥಳೀಯರು ಸಾರ್ವತ್ರಿಕವಾಗಿ ಆರೋಪಿಸುತ್ತಿದ್ದಾರೆ. ಕಾಂಞಂಗಾಡ್‌ನಿಂದ ಸುಮಾರು 16 ಕಿ.ಮೀ. ದೂರದಲ್ಲೂ, ಬೇಕಲ ಕೋಟೆಯಿಂದ 29 ಕಿ.ಮೀ. ದೂರದಲ್ಲಿರುವ ಚೆರ್ವತ್ತೂರಿನ ವೀರಮಲೆ ಹಿಲ್‌ಪ್ರದೇಶಕ್ಕೆ ಹತ್ತಿರದ ರೈಲು ನಿಲ್ದಾಣ ಚೆರ್ವತ್ತೂರು ಆಗಿದೆ.

— ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next