ಮಡಿಕೇರಿ: ಎರಡು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪುರಂದರ ಮತ್ತು ದ್ವಿತೀಯ ದರ್ಜೆ ಕಚೇರಿ ಸಹಾಯಕ ಜಾಗೃತ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದಿದೆ.
ತಾಲೂಕಿನ ತೂಚಮಕೇರಿ ನಿವಾಸಿ ಎಂ.ಎನ್. ನರೇಂದ್ರ ತಮ್ಮ ಜಮೀನಿಗೆ ಸಂಬಂಧಿಸಿದ ಭೂ ದಾಖಲೆಯನ್ನು ಪರಿವರ್ತಿಸಿ ಕೊಡುವಂತೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ತಿಂಗಳು ಕಳೆದರೂ ದಾಖಲೆ ಪರಿವರ್ತಿಸಲು ತಹಶೀಲ್ದಾರ್ ಅಥವಾ ಕಚೇರಿ ಸಿಬಂದಿ ಮುಂದಾಗಲಿಲ್ಲ. ಬದ ಲಾಗಿ ಈ ಕೆಲಸಕ್ಕಾಗಿ 15 ಸಾವಿರ ರೂ. ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ಇದರಲ್ಲಿ ಒಟ್ಟು 7 ಸಾವಿರ ರೂ.ಗಳನ್ನು ನರೇಂದ್ರ ಅವರಿಂದ ಮುಂಗಡವಾಗಿ ಪಡೆದಿದ್ದ ತಹಶೀಲ್ದಾರ್ ಪುರಂದರ ಮತ್ತು ಸಿಬಂದಿ ಜಾಗೃತ ಅವರು ಮತ್ತೆ ಎರಡು ಸಾವಿರ ರೂ. ನೀಡುವಂತೆ ಆಗ್ರಹಿಸಿದ್ದರು. ಇದರಿಂದ ಬೇಸರ ಗೊಂಡಿದ್ದ ನರೇಂದ್ರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದಾಖಲೆಗಳ ಸಹಿತ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಭ್ರಷಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ವೀರಾಜಪೇಟೆ ತಾಲೂಕು ಕಚೇರಿಗೆ ದಾಳಿ ನಡೆಸಿ ನರೇಂದ್ರ ಅವರಿಂದ 2 ಸಾವಿರ ರೂ. ಪಡೆಯಲು ಮುಂದಾದ ತಹಶೀಲ್ದಾರ್ ಪುರಂದರ ಹಾಗೂ ಸಿಬಂದಿ ಜಾಗೃತ ಅವರನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.
ಎಸಿಬಿ ಉಪ ಅಧೀಕ್ಷಕ ಪೂರ್ಣ ಚಂದ್ರ ತೇಜಸ್ವಿ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಮಹೇಶ್, ಶ್ರೀಧರ್, ಸಿಬಂದಿಗಳಾದ ದಿನೇಶ್, ರಾಜೇಶ್, ಸುರೇಶ್, ಸಜನ್, ಪ್ರವೀಣ್, ಲೋಹಿತ್, ದೀಪಿಕಾ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.