Advertisement

ಹೊಯ್ಸಳರ ಕಾಲದ ವೀರಗಲ್ಲು ಪತ್ತೆ

01:13 PM Dec 31, 2019 | Suhan S |

ಶಿವಮೊಗ್ಗ: ತಾಲೂಕಿನ ತೇವರ ಚಟ್ನಹಳ್ಳಿಯಲ್ಲಿ ಹೊಯ್ಸಳರ ಕಾಲದ ಶಾಸನಭರಿತ ಮೂರು ಇತರೆ ಎರಡು ವೀರಗಲ್ಲುಗಳು ಪತ್ತೆಯಾಗಿವೆ. ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಕಾಲದ ಶಾಸನಭರಿತ ಮೂರು ವೀರಗಲ್ಲುಗಳು ಇಂತಿವೆ. ಹೊಯ್ಸಳರ ಕಾಲದ ಶಾಸನವಿರುವ

Advertisement

ಒಂದನೇ ವೀರಗಲ್ಲು: ಇದು ಶಾಸನವಿರುವ ವೀರಗಲ್ಲಾಗಿದ್ದು, ಮೂರು ಪಟ್ಟಿಕೆಗಳಿಂದ ಕೂಡಿದೆ. ಇದು 1 ಮೀಟರ್‌ 88 ಸೆಂಮೀ ಉದ್ದ ಹಾಗೂ 64 ಸೆಂಮೀ ಆಗಲವಾಗಿದೆ. ಇದು- 18ನೇ ಶತಮಾನದಲ್ಲಿ ಹಾಳಾಗಿರುವ ಸಂಭವವಿದ್ದು ಮೂರುಪಟ್ಟಿಕೆಗಳಲ್ಲಿ ಕುಳಿಗಳನ್ನು ಮಾಡಿರುವುದರಿಂದ ಶಾಸನವು ಹಾಳಾಗಿರುವುದು ಕಂಡುಬರುತ್ತದೆ.

ಶಿಲ್ಪದ ವಿವರ-ಕೆಳಗಿನ ಪಟ್ಟಿಕೆ: ವೀರನು ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದು ಹೋರಾಡುತ್ತಿರುವುದು. ಮೇಲ್ಭಾಗದಲ್ಲಿ ಛತ್ರಿಯಿರುವುದು ಎದುರುಗಡೆ ಇಬ್ಬರು ವೀರರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತಿರುವುದು ಒಬ್ಬ ವೀರ ಕೆಳಗಡೆ ಬಿದ್ದಿರುವುದನ್ನು ಕಾಣಬಹುದು.

ಎರಡನೇ ಪಟ್ಟಿಕೆ: ಈ ಪಟ್ಟಿಕೆಗೆ ಮಂಟಪವನ್ನು ಮಾಡಿದ್ದು ವೀರನನ್ನು ಅಪ್ಸರೆಯರು ತಮ್ಮ ತೋಳುಗಳ ಮೂಲಕ ಸ್ವರ್ಗಕ್ಕೆ ಕರೆದುಕೊಂಡು ಹೋಗುವ ದೃಶ್ಯ ಕಂಡುಬರುತ್ತದೆ.

ಮೂರನೇ ಪಟ್ಟಿಕೆ: ಇಲ್ಲಿ ವೀರನು ಕುಳಿತಿದ್ದು ಶಿವಲಿಂಗವಿದ್ದು ಇದರ ಎದುರಿಗೆ ನಂದಿ ಮೇಲ್ಭಾಗದಲ್ಲಿ ಎರಡು ಚಾಮರಗಳು ಚಂದ್ರವು ಹಾಳಾಗಿದ್ದು ಸೂರ್ಯನನ್ನು ಕಾಣಬಹುದು.

Advertisement

ಹೊಯ್ಸಳರ ಕಾಲದ ಎರಡನೇ ಶಾಸನವಿರುವ ವೀರಗಲ್ಲು: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು ಹಳೆಗನ್ನಡ ಶಾಸನವಿದ್ದು ತೃಟಿತವಾಗಿದೆ. ಇದು 1 ಮೀಟರ್‌ 39 ಸೆ.ಮೀ ಉದ್ದ 62 ಸೆ.ಮೀ ಆಗಲವಾಗಿದೆ.

ಶಿಲ್ಪದ ವಿವರ: ಕೆಳಗಿನ ಪಟ್ಟಿಕೆ: ಇಬ್ಬರು ವೀರರು ಕತ್ತಿ ಗುರಾಣಿ ಹಿಡಿದು ಹೋರಾಡುತ್ತಿರುವುದು, ಇನ್ನೊಬ್ಬ ವೀರನು ಕತ್ತಿಯನ್ನು ಹಿಡಿದು ಕುದುರೆಯ ಮೇಲೆ ಕುಳಿತು ಹೋರಾಡುತ್ತಿರುವುದು ಕಂಡುಬರುತ್ತದೆ.

ಎರಡನೇ ಪಟ್ಟಿಕೆ: ಇಲ್ಲಿ ಮಂಟಪವನ್ನು ನಿರ್ಮಾಣ ಮಾಡಿದ್ದು ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತದೆ.

ಮೂರನೇ ಪಟ್ಟಿಕೆ: ಇಲ್ಲಿ ವೀರನು ಸ್ವರ್ಗದಲ್ಲಿ ಕುಳಿತಿರುವುದು ಲಿಂಗವಿದ್ದು ಎದುರುಗಡೆ ನಂದಿ ಮೇಲ್ಭಾಗದಲ್ಲಿ ಸೂರ್ಯಚಂದ್ರರನ್ನು ಕಾಣಬಹುದು. ಹೊಯ್ಸಳರ ಕಾಲದ ಮೂರನೇ ಶಾಸನವಿರುವ

ವೀರಗಲ್ಲು: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು, ಎರಡು ಪಟ್ಟಿಕೆಗಳಲ್ಲಿ ತೃಟಿತವಾದ ಆರು ಸಾಲುಗಳ ಹಳೆಗನ್ನಡದ ಶಾಸನವು ಕಂಡು ಬರುತ್ತದೆ. ಇದು 85 ಸೆಂಮೀ ಉದ್ದ 45 ಸೆಂಮೀ ಅಗಲವಾಗಿದ್ದು ಈ ವೀರಗಲ್ಲಿನ ಕೆಳಭಾಗ ತುಂಡಾಗಿರುವುದನ್ನು ಕಾಣಬಹುದು.

ಶಿಲ್ಪದ ವಿವರ-ಕೆಳಗಿನ ಪಟ್ಟಿಕೆ: ಈ ಪಟ್ಟಿಕೆಯಲ್ಲಿ ಇಬ್ಬರು ಯೋಧರು ಕತ್ತಿ ಗುರಾಣಿಯನ್ನು ಹಿಡಿದು ಹೋರಾಡುತ್ತಿರುವುದು ಕಂಡು ಬರುತ್ತದೆ. ಇಲ್ಲಿ ಕೆಳ ಭಾಗ ತುಂಡಾಗಿರುವುದನ್ನು ಕಾಣಬಹುದು.

ಎರಡನೇ ಪಟ್ಟಿಕೆ: ಇಲ್ಲಿ ವೀರನನ್ನು ಅಪ್ಸರೆಯರು ಚಾಮರ ಹಿಡಿದು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ದೃಶ್ಯ ಕಾಣಬಹುದು.

ಮೂರನೇ ಪಟ್ಟಿಕೆ: ವೀರನು ಸ್ವರ್ಗದಲ್ಲಿ ಕುಳಿತಿರುವುದು ಇಲ್ಲಿ ಶಿವಲಿಂಗವಿದ್ದು ಲಿಂಗದ ಎದುರು ನಂದಿಯಿದ್ದು ಮೇಲ್ಭಾಗದಲ್ಲಿ ಸೂರ್ಯಚಂದ್ರರಿರುವುದನ್ನು ಕಾಣಬಹುದು.

ಶಾಸನದ ಪಾಠ: ಶಾಸನವು ಆರು ಸಾಲುಗಳಿಂದ ಕೂಡಿದ್ದು ಮೇಲ್ಭಾಗದ ಮೂರು ಸಾಲುಗಳು ತೃಟಿತವಾಗಿದ್ದು, ಎರಡನೇ ಪಟ್ಟಿಕೆಯ ಮೂರು ಸಾಲುಗಳನ್ನು ಓದಲಾಗಿದೆ. ಮೊದಲ ಪಟ್ಟಿಕೆ ಲಿಪಿಯು ತೃಟಿತವಾಗಿದೆ.

ಎರಡನೇ ಪಟ್ಟಿಕೆ : ಹಡೆವಳ ಬೀರಂ ಸುರಲೋಕ 6, ಪ್ರಾಪ್ತನಾದ ಹೊಯ್ಸಳರ ಮಹಾಮಂಡಳೇಶ್ವರನ ಅಧಿಕಾರಿಯಾದ ನನ್ನಿಯ ಗಂಗ ಎಂಬ ಅಧಿಕಾರಿಯ ಆಳ್ವಿಕೆಯಲ್ಲಿ ಕೆಸಲಿನಲಕೊಪ್ಪಯ ಕಾಳಗದಲ್ಲಿ- ಈ ಕೆಸಲಿನಕೊಪ್ಪ ಇಂದೂ ಬೆಚಾರಕ್‌ ಗ್ರಾಮವಾಗಿರಬಹುದು. ಈ ಗ್ರಾಮದ ಕಾಳಗದಲ್ಲಿ ಬೀರ ಎಂಬ ತುಕಡಿಯ (ಗುಂಪಿನ)ನಾಯಕ ಹೋರಾಡಿ ಮರಣ ಹೊಂದಿ ಸುರಲೋಕ ಪ್ರಾಪ್ತನಾದನು ಎಂದು ತಿಳಿಸುತ್ತದೆ.

ಬಲಿದಾನದ ಸ್ಮಾರಕ: ಇಲ್ಲಿ ಇಬ್ಬರು ಭಕ್ತರು ಕೈ ಮುಗಿದು ನಿಂತಿದ್ದು ಇವರ ಮೇಲ್ಭಾಗದಲ್ಲಿ ಪದ್ಮಗಳಿದ್ದು- ಇದರ ಮೇಲ್ಭಾಗದಲ್ಲಿ ಮೂಕೊಡೆ ರೀತಿಯಿದ್ದು ಇದನ್ನು ಜೈನ ಪರಂಪರೆಯ ಸ್ಮಾರಕವಿರಬಹುದು ಎನ್ನಬಹುದು. ಮೇಲಿನ ಎಲ್ಲಾ ವೀರಗಲ್ಲುಗಳನ್ನು ಬಲಿದಾನದ ಸ್ಮಾರಕಗಳನ್ನು ಲಿಪಿ ಹಾಗೂ ಶಿಲ್ಪಗಳ ಆಧಾರಗಳ ಮೇಲೆ ಹೊಯ್ಸಳರ ಕಾಲದ ಕ್ರಿ.ಶ. 12-13ನೇ ಶತಮಾನಗಳ ವೀರಗಲ್ಲು ಶಾಸನಗಳು ಎನ್ನಬಹುದು.

ಉಪಸಂಹಾರ: ತೇವರಚಟ್ಟಹಳ್ಳಿಯು ರಾಷ್ಟ್ರಕೂಟರ ಕಾಲದಿಂದ ಅಂದರೆ ಕ್ರಿ.ಶ. 9-10ನೇ ಶತಮಾನದಿಂದ ಕ್ರಿ.ಶ. 12-13ನೇ ಶತಮಾನದ ಹೊಯ್ಸಳರ ಆಡಳಿತದವರೆಗೂ ಇದ್ದಂತಹ ಗ್ರಾಮವಾಗಿದೆ ಎನ್ನಬಹುದು ಎಂದು ಶಿವಪ್ಪ ನಾಯಕ ಅರಮನೆ ಸಹಾಯಕ ನಿರ್ದೇಶಕ ಆರ್‌. ಶೇಜೇಶ್ವರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.