ಹುಮನಾಬಾದ್: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ವೀರಭದ್ರೇಶ್ವರ ಜಾತ್ರೆಯು ಕಳೆದ ವರ್ಷದಂತೆ ಕೋವಿಡ್ ನಿಯಮಗಳು ಅನುಸರಿಸಿಕೊಂಡು ವಿವಿಧ ಧಾರ್ಮಿಕ ಆಚರಣೆಗಳು ಆಚರಿಸಲಾಗುವುದು ಎಂದು ಶಾಸಕ ರಾಜಶೇಖರ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಶುಕ್ರವಾರ ರಾತ್ರಿ ಜಾತ್ರಾ ನಿಮಿತ್ಯ ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರ ಮಧ್ಯೆ ಆತಂಕ ಕೂಡ ಇದೆ. ಆದರೂ ಕೂಡ ಪರಂಪರೆಯಂತೆ ವಿವಿಧ ಧಾರ್ಮಿಕ ಆಚರಣೆಗಳು ಆಚರಿಸಬೇಕಾದ ನಿಯಮ ಕೂಡ ಇಲ್ಲಿದೆ. ಕಾರಣ ಅತಿ ಸರಳವಾಗಿ ಸರ್ಕಾರದ ಮಾರ್ಗಸೂಚುಗಳು ಅನುಸರಿಸಿಕೊಂಡು ವಿವಿಧ ಧಾರ್ಮಿಕ ಆಚರಣೆಗಳಿಗೆ ಜನರು ಸಹಕಾರ ನೀಡಬೇಕು ನೀಡಬೇಕು ಎಂದ ಅವರು, ವಿವಿಧ ಪಕ್ಷಗಳು ನಡೆಸುವ ಸಭೆ ಸಮಾರಂಭಗಳಿಗೆ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾಗುತ್ತಿಲ್ಲ ಆದರೆ, ಧಾರ್ಮಿಕ ಆಚರಣೆಗಳಿಗೆ ಮಾತ್ರ ಎಲ್ಲಾ ನಿಯಮಗಳು ಚಾಲನೆಗೆ ಬರುತ್ತಿವೆ ಇದು ಎಷ್ಟು ಸರಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಪ್ರಶ್ನಿಸಿದರು. ಧಾರ್ಮಿಕ ಆಚರಣೆಗಳಿಗೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಆಯುಕ್ತರಿಗೆ ತಿಳಿಸಿದರು.
ಬಸವಕಲ್ಯಾಣ ಸಹಾಯಕ ಆಯುಕ್ತ ಭುವನೇಶ್ ಪಾಟೀಲ್ ಮಾತನಾಡಿ, ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳು ಅನುಸರಿಸಲೇಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿ ಇದೆ. ಗಣನಿಯವಾಗಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಬೀದರ್ ಜಿಲ್ಲೆಯಲ್ಲಿ ಕೂಡ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರು ಜಾಗೃತಿ ವಹಿಸುವುದು ಅತಿ ಮುಖ್ಯವಾಗಿದೆ. ಪರಂಪರೆಯಂತೆ ವಿವಿಧ ಧಾರ್ಮಿಕ ಆಚರಣೆಗಳು ಅತಿ ಸರಳವಾಗಿ ಹಾಗೂ ನಿಯಮಗಳು ಉಲ್ಲಂಘನೆ ಆಗದಂತೆ ಆಚರಿಸಬೇಕಾಗಿದ್ದು, ಪಟ್ಟಣದ ನಿವಾಸಿಗಳು ಸೂಕ್ತ ಸಹಕಾರ ನೀಡಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಡಾ। ಚಂದ್ರಶೇಖರ್ ಪಾಟೀಲ್ ಮಾತನಾಡಿ, ಜಾತ್ರೆ-ಉತ್ಸವಗಳು ಪ್ರತಿವರ್ಷ ಬರುತ್ತವೆ. ಆದರೆ ಇದೀಗ ಬಂದಿರುವ ರೋಗದ ಭೀತಿ ಹೆಚ್ಚಾಗುತ್ತಿದೆ. ಕಳೆದ ಎರಡು ಅಲೆಗಳಲ್ಲಿ ಉಂಟಾದ ಸಮಸ್ಯೆಗಳು ನಮ್ಮೆಲ್ಲರಿಗೂ ಗೊತ್ತಿದೆ. ಜೀವ ಉಳಿದರೆ ಎಲ್ಲ ಎಂಬುದು ಪ್ರತಿಯೊಬ್ಬ ಭಕ್ತರು ತಿಳಿದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಅನುಸಾರ ಮಾತ್ರ ವಿವಿಧ ಕಾರ್ಯಗಳು ನಡೆಯಬೇಕು ಎಂದು ಸಲಹೆ ನೀಡಿದರು.
ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯರು, ನೂತನ ವಿಧಾನಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ತಹಸಿಲ್ದಾರ್ ಡಾ। ಪ್ರದೀಪ್ ಕುಮಾರ್, ಬಿಜೆಪಿ ಮುಖಂಡ ಸುಭಾಷ್ ಕಲ್ಲೂರ್, ಡಿವೈಎಸ್ಪಿ ಸೋಮಲಿಂಗ ಕುಂಬಾರ್, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್ಐ ರವಿಕುಮಾರ್ ನಾಯ್ಕೋಡಿ, ಸಂಚಾರಿ ಠಾಣೆ ಪಿಎಸ್ಐ ಬಸವರಾಜ್, ಮಾಜಿ ಜಿಪಂ ಸದಸ್ಯ ವೀರಣ್ಣಾ ಪಾಟೀಲ, ಬಸವರಾಜ ಆರ್ಯ, ಮಲ್ಲಿಕಾರ್ಜುನ ಮಾಶೆಟ್ಟಿ, ದತ್ತಕುಮಾರ ಚಿದ್ರಿ ಸೇರಿದಂತೆ ಅನೇಕ ಭಕ್ತರು ಇದ್ದರು.