ಬೀರೂರು: ಪಟ್ಟಣದ ಆರಾಧ್ಯ ದೈವ ವೀರಭದ್ರಸ್ವಾಮಿ ಮತ್ತು ಭದ್ರಕಾಳಿ ಅಮ್ಮನವರ ರಥೋತ್ಸವ ಸೋಮವಾರ ಸಾಯಂಕಾಲ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಸಂಪ್ರದಾಯದಂತೆ ಫಾಲ್ಗುಣ ಹುಣ್ಣಿಮೆಯಂದು ನಡೆಯುವ ರಥೋತ್ಸವಕ್ಕೆ ರಾಜ್ಯದ ವಿವಿಧೆಡೆ ನೆಲೆಸಿರುವ ಭಕ್ತರು ಆಗಮಿಸಿದ್ದರು. ಸಾಯಂಕಾಲ 5ಗಂಟೆಗೆ ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದು, ಮಂಗಳಾರತಿ ಸಮರ್ಪಿಸಿದ ಬಳಿಕ ಭಕ್ತರು ಜಯಘೋಷಗಳ ನಡುವೆ ರಥವನ್ನು ಎಳೆದು ಭಕ್ತಿಭಾವ ಮೆರೆದರು.
ಮಹಾನವಮಿ ಬಯಲಿನವರೆಗೆ ತೆರಳಿದ ರಥಕ್ಕೆ ಪಾಲಮ್ಮ ಶಾಲೆಯ ಬಳಿ, ವೀರಾಂಜನೇಯ ದೇವಾಲಯ, ಸಂಪಿಗೆ ಸಿದ್ದೇಶ್ವರ ಓಣಿ ಮತ್ತು ಮಹಾನವಮಿ ಬಯಲಿನಲ್ಲಿ ನೂರಾರು ಆಸ್ತಿಕರು ಹೂವು, ಹಣ್ಣು, ತೆಂಗಿನಕಾಯಿ, ಕರ್ಪೂರ ಅರ್ಪಿಸಿ ಮಂಗಳಾರತಿ ಮಾಡಿಸಿದರು. ನಂದಿಧ್ವಜ ಹೊತ್ತು ಕುಣಿಯುತ್ತಿದ್ದ ಯುವಕರು ಸಾಮರ್ಥ್ಯ ಪ್ರದರ್ಶಿಸುತ್ತಿದ್ದರೆ, ವೀರಗಾಸೆ, ನಾಸಿಕ್ ಬ್ಯಾಂಡ್ ಮತ್ತು ಜಾನಪದ ವಾದ್ಯಗಳ ಲಯಬದ್ಧ ವಾದನಕ್ಕೆ ನೂರಾರು ಯುವಕರು ಹುಮ್ಮಸ್ಸಿನಿಂದ ಕುಣಿದರು.
ಸಂಪಿಗೆ ಸಿದ್ದೇಶ್ವರ ದೇವಾಲಯ ಬಳಿ ಬಿಸಿಲಿನಲ್ಲಿ ಬಂದವರಿಗೆ ಸ್ಥಳೀಯರು ಪಾನಕ ವಿತರಿಸಿದರೆ, ರಥಬೀದಿಯಲ್ಲಿ ತುಂಬಿಹೋಗಿದ್ದ ಭಕ್ತರು ಚಲಿಸುತ್ತಿದ್ದ ರಥದ ಕಲಶಕ್ಕೆ ಬಾಳೆಹಣ್ಣು, ಕಿತ್ತಲೆ, ನಿಂಬೆಹಣ್ಣು ಭಕ್ತ ಭಾವದಿಂದ ಎಸೆಯುವುದರ ಮೂಲಕ, ವೀರಭದ್ರಸ್ವಾಮಿಗೆ ಜೈ ಭದ್ರಕಾಳಿ ಅಮ್ಮನವರಿಗೆ ಜೈ. ಎಂದು ಜಯಘೋಷಣೆಯದೊಂದಿಗೆ ಭಕ್ತಿ ಮೊಳಗಿಸಿದರು.
ದೇವಾಲಯದ ಬಳಿಗೆ ರಥ ವಾಪಸಾದ ನಂತರ ಮಹಾಮಂಗಳಾರತಿ ನೆರವೇರಿಸಿ ಉತ್ಸವ ಮೂರ್ತಿಗಳ ಗುಡಿ ತುಂಬಿಸಲಾಯಿತು. ನಂತರ ಹರಕೆ ಹೊತ್ತವರು ತಮ್ಮ ಮಕ್ಕಳನ್ನು ರಥದ ಸುತ್ತ ಉರುಳು ಸೇವೆ ಸಲ್ಲಿಸಿದರು. ಮಂಗಳವಾರ ಓಕಳಿಯಾಟದ ಬಳಿಕ ಸ್ವಾಮಿಯ ರಥೋತ್ಸವಕ್ಕೆ ತೆರೆ ಬೀಳಲಿದೆ.