Advertisement

ವೀರಭದ್ರಪ್ಪ ಹಾಲರವಿ,ಘೋಟ್ನೇಕರ್, ವಡಗೂರು ಹರೀಶ್‍ಗೌಡ ಜೆಡಿಎಸ್ ಸೇರ್ಪಡೆ

04:07 PM Feb 19, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆಯೇ ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಪ್ರಮುಖರ ಸೇರ್ಪಡೆ ಮುಂದುವರಿದಿದೆ.

Advertisement

ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ್ ಹಾಗೂ ಕೋಲಾರದ ಮಾಜಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮತ್ತು ಕೋಚಿಮುಲ್ ನಿರ್ದೇಶಕ ವಡಗೂರು ಹರೀಶ್‍ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ವೀರಭದ್ರಪ್ಪ ಹಾಲರವಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರೆ. ಎಸ್.ಎಲ್. ಘೋಟ್ನೇಕರ್ ಮತ್ತು ವಡಗೂರು ಹರೀಶ್‍ಗೌಡ ಅವರು ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸಿಎಂ ಇಬ್ರಾಹಿಂ ಅವರು ಈ ಮೂವರು ಮುಖಂಡರಿಗೆ ಪಕ್ಷದ ಧ್ವಜ ನೀಡಿ, ಜೆಡಿಎಸ್ ಶಾಲು ಹೊದಿಸಿ ಬರ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಈಗಾಗಲೇ ಎಪ್ಪತ್ತು ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲೂ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ನವಲಗುಂದ ಕ್ಷೇತ್ರದಲ್ಲಿ ಒಬ್ಬರು ನಮ್ಮ ಪಕ್ಷ ಬಿಟ್ಟು ಹೋಗಿದ್ದರು. ಅಲ್ಲೂ ಕೂಡ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದರು. ಎಲ್ಲೆಡೆ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದಾರೆ ಎಂದರು.

Advertisement

ಕೊನೆಯ ಹಂತದಲ್ಲಿ ಮೈಸೂರು-ಮಂಡ್ಯ ಅಥವಾ ಹಾಸನದ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ಮಾಡಲಿದ್ದೇವೆ. ಕನಿಷ್ಠ ಹತ್ತು ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಸೇರಲಿದ್ದಾರೆ‌ ಎಂದ ಮಾಜಿ ಮುಖ್ಯಮಂತ್ರಿ ಅವರು, ಹಲವಾರು ಭಾಗಗಳಿಂದ ಪ್ರಮುಖ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಕಾರವಾರ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಗಳನ್ನು ಗೆಲ್ಲುವ ಅವಕಾಶ ಇದೆ. 2023ಕ್ಕೆ ಘೊಟ್ನೇಕರ್ ಮತ್ತು ಹಾಲರವಿ ಆಯ್ಕೆ ಆಗಿ ವಿಧಾನಸಭೆಗೆ ಬರುತ್ತಾರೆ. ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲೂ ಸಹ ಹದಿನೆಂಟರಲ್ಲಿ ಆರೇಳು ಸ್ಥಾನ ಗೆಲ್ಲುವ ವಾತಾವರಣ ಇದೆ. ಜೆಡಿಎಸ್ ಅಚ್ಚರಿಯ ರೀತಿಯಲ್ಲಿ ಗೆದ್ದು ಬೀಗಲಿದೆ ಎಂದರು.

ಡಿಕೆಶಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ

ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತಾರೆ ಎಂದು ಹೇಳಿಕೊಂಡು ಕಾಂಗ್ರೆಸ್ ಅಧ್ಯಕ್ಷರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರಿಗೆ ಏನು ಹೇಳುವುದು? ಸಂಪೂರ್ಣ ಅಧಿಕಾರಕ್ಕೆ ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದೇನೆ. ಅದು ಕಾಂಗ್ರೆಸ್ ಅಧ್ಯಕ್ಷರಿಗೆ ಸರಿಯಾಗಿ ಅರ್ಥ ಆಗಿಲ್ಲ ಎಂದು ಡಿಕೆ ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಅವರು ಟಾಂಗ್ ನೀಡಿದರು.

ಕೆಲವರು ನಮ್ಮ ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಉತ್ತರ ಸಿಗಲಿದೆ. ಈ ಸಲ ರಾಷ್ಟ್ರೀಯ ಪಕ್ಷಗಳನ್ನು ಜನ ದೂರ ಇಡಲಿದ್ದಾರೆ. ಪಂಚರತ್ನ ಕಾರ್ಯಕ್ರಮ ಸುಮ್ನೆ ತೋರ್ಪಡಿಕೆಗೆ ಮಾಡ್ತಾ ಇರೋದಲ್ಲ. ರಾಜ್ಯದ ಮಹಿಳೆಯರ , ಬಡಜನರ ಅವಶ್ಯಕತೆ ಗೆ ಬೇಕಾದ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಕೆ ಎನ್ ತಿಪ್ಪೇಸ್ವಾಮಿ, ಇಂಚರ ನಾರಾಯಣಸ್ವಾಮಿ, ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಕೋಲಾರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಕಾಶ್, ಹುಬ್ಬಳ್ಳಿ ಧಾರವಾಡ, ಉತ್ತರ ಕನ್ನಡ ಜಿಲ್ಲೆಯ ಅನೇಕ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next