ಗಜೇಂದ್ರಗಡ: ಕಾಲಕಾಲೇಶ್ವರ ದೇಗುಲ ಬಳಿಯ ಐತಿಹಾಸಿಕ ಕಣವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪುಷ್ಪಾಲಂಕೃತ ಉಚ್ಚಾಯ ಸದ್ಭಕ್ತರ ಹರ್ಷೋದ್ಘಾರ ಮಧ್ಯೆ ಸಂಭ್ರಮದಿಂದ ನಡೆಯಿತು.
ಉಚ್ಚಾಯಕ್ಕೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತಸಮೂಹ ಹರಹರ ಮಹಾದೇವ ಎಂದು ಜಯಘೋಷ ಹಾಕುತ್ತಾ ಭಜನೆ, ಝಾಂಜಮೇಳ, ಡೊಳ್ಳು, ಸಂಗೀತ ವಾದ್ಯ ವೈಭವದಿಂದ ನಂದಿಕೊಲು, ಛತ್ರ ಚಾಮರಗಳೊಂದಿಗೆ ಭಕ್ತಿ ಭಾವದಿಂದ ಭಕ್ತರು ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.
ಉಚ್ಚಾಯ ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಭಕ್ತಾದಿಗಳು ಚಪ್ಪಾಳೆ ತಟ್ಟಿ ಭಕ್ತಿ ಬಾವ ಮರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ನೆರವೇರಿಸಿ ಕೃತಾರ್ಥರಾದರು.
ಇದನ್ನೂ ಓದಿ :ಮೌಂಟೆನ್ ಬೈಕ್ ಸೈಕ್ಲಿಂಗ್ ಗೆ ಸಿದ್ಧತೆ
ಇದಕ್ಕೂ ಮುನ್ನ ಬೆಳಗ್ಗೆ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ವೀರಭದ್ರೇಶ್ವರ, ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರಿಕ ಪೂಜೆ, ಅಗ್ನಿ ಪ್ರವೇಶ, ಧಾರ್ಮಿಕ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಗಜೇಂದ್ರಗಡ, ಬೈರಾಪುರ, ರಾಜೂರ, ದಿಂಡೂರ, ಕುಂಟೋಜಿ, ಮೂಗನೂರು, ವದೇಗೂಳ, ಹಿರೇಗೊಣ್ಣಾಗರ, ಹಾಬಲಕಟ್ಟಿ, ಕಲ್ಲೂರ, ನರಸಾಪುರ, ಮ್ಯಾಕಲ್ ಝರಿ, ಬೆಣಚಮಟ್ಟಿ, ತುಮರಿಕೊಪ್ಪ ಗ್ರಾಮಗಳ ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.