Advertisement

ಪ್ರೊ.ದೊಡ್ಡರಂಗೇಗೌಡ ಅವರು ಸಾಹಿತಿಯಲ್ಲ, ಲೇಖಕರು ಅಷ್ಟೇ : ಕುಂ.ವೀರಭದ್ರಪ್ಪ ಟೀಕೆ

11:38 AM Jan 26, 2021 | Team Udayavani |

ಬೆಂಗಳೂರು: “ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ ಸಾಹಿತಿಗಳಲ್ಲ, ಅವರೊಬ್ಬ ಲೇಖಕರು ಅಷ್ಟೇ. ಹಾಗೆ ನೋಡಿದರೆ, ನೋಂದಣಿ ಇಲಾಖೆಯಲ್ಲಿರುವವರು ಕೂಡ ಬರೆಯುತ್ತಾರೆ. ಅವರೂ ಲೇಖಕರೇ’ ಎಂದು ಕಾದಂಬರಿಕಾರ ಕುಂ.ವೀರಭದ್ರಪ್ಪ ಟೀಕಿಸಿದರು.

Advertisement

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಸೋಮವಾರ ಹಿರಿಯ ಸಂಶೋಧಕ ಹಂಪನಾ ಅವರನ್ನು ಮಂಡ್ಯ ಪೊಲೀಸರು ವಿಚಾರಣೆ ಮಾಡಿರುವುದನ್ನು ಖಂಡಿಸಿ ಹಮ್ಮಿಕೊಂಡಿದ್ದ “ಖಂಡನಾ ಸಭೆ’ಯಲ್ಲಿ ಮಾತನಾಡಿ, ಸಾಹಿತಿ ಅಲ್ಲದವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು 86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದು ದೂರಿದರು.

ನಾನು,ಯಾವುದೇ ಕಾರಣಕ್ಕೂ ದೊಡ್ಡರಂಗೇಗೌಡ ಅವರನ್ನು ಸಾಹಿತಿ ಎಂದು ಹೇಳುವುದಿಲ್ಲ.ಅವರು ಬರಹಗಾರರು ಅಷ್ಟೇ. ಬರಹಗಾರರಿಗೆ ಮತ್ತು ಸಾಹಿತಿಗಳಿಗೆ ಬಹಳಷ್ಟು ವ್ಯತ್ಯಾಸವಿದೆ ಎಂದರು.

ಇದನ್ನೂ ಓದಿ:ಟಿಕ್ ಟಾಕ್ ಸೇರಿ ಚೀನಾ ಮೂಲದ 59 ಅಪ್ಲಿಕೇಶನ್ ಗಳಿಗೆ ಶಾಶ್ವತ ನಿಷೇಧ

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ವಿಚಾರದಲ್ಲಿ ವಿರೋಧ ಪಕ್ಷದ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗಿತ್ತು.ಆದರೆ ಆ ಕೆಲಸವನ್ನು ಮಾಡುತ್ತಿಲ್ಲ. ಈ ಹಿಂದೆ ಕಲಬುರಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಸಂಸ್ಕೃತ ಭಾಷೆಯ ಬಗ್ಗೆ ಮಾತನಾಡಿದ್ದರು. ಈಗಿನ ನಿಯೋಜಿತ ಅಧ್ಯಕ್ಷರು ಹಿಂದಿ ಭಾಷೆ ಹೇರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಯಾವ ದಿಕ್ಕಿನಡೆಗೆ ಸಾಗುತ್ತಿದೆ ಎಂಬುವುದನ್ನು ಆಲೋಚಿಸಬೇಕಾಗಿದೆ ಎಂದರು.

Advertisement

ಕಿರುತೆರೆ ನಿರ್ದೇಶಕ ಬಿ.ಸುರೇಶ್‌ ಮಾತನಾಡಿ, ಆಳುವ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಹಂಪನಾ ಅವರನ್ನು ಬೆಂಗಳೂರಿನಿಂದ ಮಂಡ್ಯ ಪೊಲೀಸ್‌ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ ಕ್ರಮ ಸರಿಯಲ್ಲ. ಈ ಬಗ್ಗೆ ನಾಡಿನ
ಜನರು ಕೂಡ ವ್ಯವಸ್ಥೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಜನರಿಗೂ ಲೋಕ ತಂತ್ರದ ಬಗ್ಗೆ ತಿಳಿ ಹೇಳಬೇಕಾಗಿದೆ. ಬೇರೆ ವ್ಯಕ್ತಿ ಭಾವ ಚಿತ್ರ ತೋರಿಸಿ ವೋಟು ಕೇಳುವ ಸಂಸ್ಕೃತಿಯ ವಿರುದ್ಧವೂ ದ್ವನಿ ಎತ್ತಬೇಕಾಗಿದೆ. ಪ್ರಶ್ನೆ ಮಾಡುವುದನ್ನು ಹುಟ್ಟು ಹಾಕಬೇಕಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೇಖಕಿ ಬಿ.ಟಿ.ಲಲಿತಾ ನಾಯಕ್‌, ಹಿಂದುಳಿದ ವರ್ಗಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕನಾಥ್‌, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಪ್ರಗತಿ ಪರ ಚಿಂತಕರು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next