Advertisement

ಅನ್ನದಾತನ ಬಾಳು ಉಜ್ವಲವಾಗಲಿ : ಸ್ವಾಮೀಜಿ

07:51 PM Mar 28, 2021 | Team Udayavani |

ಬಾಳೆಹೊನ್ನೂರು: ಮನುಷ್ಯ ಬದುಕಿ ಬಾಳಲು ಅನ್ನ ಬೇಕು. ಹಣವಿಲ್ಲದೇ ಬದುಕಬಹುದು. ಆದರೆ ಅನ್ನ, ನೀರಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ರೈತನ ಬಾಳು ಉಜ್ವಲಗೊಳ್ಳಬೇಕೆಂದು ರಂಭಾಪುರಿ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ರೈತ ಮತ್ತು ಕೃಷಿ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರಸ್ತುತ ರೈತನ ಪರಿಸ್ಥಿತಿ ಸಂಕಷ್ಟಕ್ಕೊಳಗಾಗಿದೆ. ಸುಧಾರಿತ ಕೃಷಿ ಅಳವಡಿಸಿಕೊಳ್ಳುವ ಅಗತ್ಯ ಬಹಳಷ್ಟಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಭೂಮಿ ಬರಡಾಗುತ್ತಿದೆ. ಸತ್ವಹೀನಗೊಂಡು ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ.

ಸಾವಯವ ಕೃಷಿ ಮಾಡುವುದರ ಮೂಲಕ ಭೂಮಿಯಲ್ಲಿರುವ ಮಣ್ಣಿನ ಸತ್ವವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಉತ್ತಮ ಬೀಜ, ಸಾವಯವ ಗೊಬ್ಬರ ಬಳಕೆ, ನೀರಿನ ಸೌಕರ್ಯ, ಆಧುನಿಕ ಬೇಸಾಯದಿಂದ ರೈತ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಎಂದರು. “ಸಾಧನೆಯ ಸತ್ಪಥ ಭಾಗ-2′ ಕೃತಿ ಬಿಡುಗಡೆ ಮಾಡಿದ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್‌. ಜೀವರಾಜ್‌ ಮಾತನಾಡಿ, ಶ್ರೀ ರಂಭಾಪುರಿ ಪೀಠ ಯಾವಾಗಲೂ ಧರ್ಮ- ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬರುವ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಾ ಬಂದಿದೆ. ದೇಶ ಕಾಯುವ ಸೈನಿಕ, ಉತ್ತಮ ಸಾಹಿತ್ಯ ಸಂರಕ್ಷಣೆ ಮತ್ತು ಕೃಷಿ ಇವುಗಳತ್ತ ಎಲ್ಲರ ಒಲವು ಸಹಕಾರ ಬೇಕಾಗುತ್ತದೆ.

ಸಾಧನೆಯ ಸತ್ಪಥ ಕೃತಿ ಶ್ರೀ ರಂಭಾಪುರಿ ಜಗದ್ಗುರುಗಳ ಆದರ್ಶ ಚಿಂತನೆಗಳನ್ನು ಒಳಗೊಂಡಿದ್ದು ಮೌಲ್ಯಾಧಾರಿತ ಬದುಕಿಗೆ ಈ ಕೃತಿ ಸಾಕ್ಷಿಯಾಗಿದೆ ಎಂದರು. ವಿ.ಪ. ಸದಸ್ಯ ಎಸ್‌.ಎಲ್‌. ಭೋಜೇಗೌಡರು ಮಾತನಾಡಿ, ಕೃಷಿ ಲಾಭದಾಯಕವಾದುದು ಎಂದು ಇಂದಿನ ಪೀಳಿಗೆಗೆ ತಿಳಿಸಿ ಕೊಡುವ ಕೆಲಸವಾಗಬೇಕು. ರೈತನಿಗೆ ಬೇಕಾದ ಪೂರಕ ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿದೆ.

ರೈತರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ. ರೈತರಿಗೆ ಸೂಕ್ತ ನೀರಾವರಿ ಸೌಲಭ್ಯ ಒದಗಿಸಿಕೊಡುವಂತೆ ಸರ್ಕಾರಕ್ಕೆ ಮಠಾಧಿಧೀಶರು ಒತ್ತಡ ತರಬೇಕು ಎಂದರು. ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ-ಶಾಸಕ ಕಳಕಪ್ಪ ಬಂಡಿ, ಅ.ಭಾ. ವೀ. ಮಹಾಸಭಾ ಜಿಲ್ಲಾಧ್ಯಕ್ಷ ಎಚ್‌.ಎಂ. ಲೋಕೇಶ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್‌. ಚನ್ನಕೇಶವ, ಬೆಂಗಳೂರಿನ ಮಂಜುನಾಥ ಆರಾಧ್ಯ, ಚಿಕ್ಕಮಗಳೂರು ನಗರ ವೀರಶೈವ ಸಮಾಜದ ಕಾರ್ಯದರ್ಶಿ ಜಗದೀಶ ಮುಖ್ಯ ಅತಿಥಿಗಳಾಗಿದ್ದರು.

Advertisement

ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಯಣಪುರ “ನೈಸರ್ಗಿಕ ಕೃಷಿ’ ಕುರಿತು ಉಪನ್ಯಾಸ ನೀಡಿದರು. ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು ರೈತರ ಸಮಕಾಲೀನ ಸಮಸ್ಯೆ ಪರಿಹಾರ ಕುರಿತು ಮಾತನಾಡಿದರು. ಸೂಡಿ ಜುಕ್ತಿ ಹಿರೇಮಠದ ಡಾ| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ ಕೃಷಿ ಕ್ಷೇತ್ರದ ಹರವು ವಿಸ್ತಾರಗಳ ಕುರಿತು ಮಾಹಿತಿ ನೀಡಿದರು. ನೀಲಗಲ್ಲ ಹಿರೇಮಠದ ಪಂಚಾಕ್ಷರ ಶಿವಾಚಾರ್ಯರು, ತರೀಕೆರೆ ಹಿರೇಮಠದ ಜಗದೀಶ್ವರ ಶಿವಾಚಾರ್ಯರು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ| ಕೆ.ಎಸ್‌. ಕೃಷ್ಣಾರೆಡ್ಡಿ, ಬೆಂಗಳೂರಿನ ಶ್ರೀನಿವಾಸ ರೆಡ್ಡಿ, ಶಿವಮೊಗ್ಗದ ಹನಸವಾಡಿ ಕೇಶವಮೂರ್ತಿ, ಗ್ರಂಥ ದಾನಿ ಎಂ. ಕೊಟ್ರೇಶಪ್ಪ ಹರಪನಹಳ್ಳಿ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಶಿವಮೊಗ್ಗದ ಕುಮಾರಿ ಕೆ.ಆರ್‌. ಭೂಮಿಕಾ ಅವರಿಂದ ಭರತ ನಾಟ್ಯ ಪ್ರದರ್ಶನ ಜರುಗಿತು. ಗುರುಲಿಂಗಯ್ಯ ಹಿತ್ತಲಶಿರೂರ ಶಿವಮೊಗ್ಗದ ಶಾಂತಾ ಆನಂದ ಅವರಿಂದ ಭಕ್ತಿ ಗೀತೆಗಳು ಜರುಗಿದವು. ಗ್ರಾಪಂ ಸದಸ್ಯ ಬಿ. ಜಗದೀಶ್ಚಂದ್ರ ಸ್ವಾಗತಿಸಿದರು. ಡಾ| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next