Advertisement

ಮೆರೆದ ವೀರ ಬರ್ಭರೀಕ

07:03 PM Aug 22, 2019 | mahesh |

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ವೀರ ಬರ್ಭರೀಕ ಎನ್ನುವ ಯಕ್ಷಗಾನ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ಏಕಚಕ್ರ ನಗರದ ಅರಸ ಘಟೋತ್ಕಚನು ರಾಜಸೂಯ ಯಾಗಕ್ಕೆ ಹೋದ ಸಂದರ್ಭದಲ್ಲಿ, ಆತನ ಪತ್ನಿ ಕಾಮಕಟಂಕಟಿಯು ಬರ್ಭರೀಕನೆನ್ನುವ ಮಗುವಿಗೆ ಜನ್ಮ ನೀಡುತ್ತಾಳೆ.

Advertisement

ತಕ್ಷಣವೇ ಬೆಳೆದು ದೊಡ್ಡವನಾದ ಬರ್ಭರೀಕ ವನ ವಿಹಾರಕ್ಕೆಂದು ತೆರಳಿದಾಗ, ವನದಲ್ಲಿ ಸರ್ಪರಾಜನ ಮಗಳಾದ ವತ್ಸಲೆ ಈತನ ರೂಪಕ್ಕೆ ಮರುಳಾಗಿ ತನ್ನನ್ನು ವಿವಾಹವಾಗುವಂತೆ ಪರಿಪರಿಯಲ್ಲಿ ಬೇಡಿಕೊಂಡರೂ ಆತ ತಿರಸ್ಕರಿಸುತ್ತಾನೆ. ಕುಪಿತಳಾದ ವತ್ಸಲೆ ಶಾಪವನ್ನು ನೀಡುತ್ತಾಳೆ. ಯಾಗ ಮುಗಿಸಿ ಹಿಂದಿರುಗಿದ ಘಟೋತ್ಕಚನಿಗೆ ಪುತ್ರ ಜನಿಸಿರುವುದು ತಿಳಿದಾಗ ಸಂತೋಷಗೊಂಡು ಆತನ ಹುಡುಗಾಟದಲ್ಲಿ ತೊಡಗುತ್ತಾನೆ. ಇತ್ತ ತಂದೆಯಾದ ಭೀಮನು ರಕ್ಕಸನಾದ ಜಟಾಸುರನನ್ನು ಕೊಂದು, ಬಾಯಾರಿಕೆ ನೀಗಿಸಲು ಕೊಳದ ಬಳಿ ಬಂದಾಗ, ಕೊಳ ಕಾಯುತ್ತಿದ್ದ ಬರ್ಭರೀಕನಿಂದ ಮೂರ್ಚಿತನಾಗುತ್ತಾನೆ. ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಘಟೋತ್ಕಚನಿಗೆ ಈತನೇ ಮಗನೆಂದು ತಿಳಿಯುವುದರ ಜೊತೆಗೆ, ಮೂಛಿìತನಾಗಿರುವುದು ಅಜ್ಜ ಭೀಮಸೇನನೆಂದು ಮಗನಿಗೆ ಮನವರಿಕೆ ಮಾಡಿಸಿ ಬರ್ಭರೀಕ ಅವರಲ್ಲಿ ಕ್ಷಮೆ ಕೋರಿ ಮೂವರು ಒಂದಾಗುತ್ತಾರೆ. ಮುಂದೆ ಕುರುಕ್ಷೇತ್ರ ಯುದ್ಧ ಸಂದರ್ಭದಲ್ಲಿ ವೀರ ಬರ್ಭರೀಕ ದುರ್ಬಲರಾದ ಪಾಂಡವರ ಪರವಾಗಿ ನಿಂತು ಒಂದೇ ಬಾಣದಿಂದ ಹಾಗೂ ಚಂಡಿಕಾ ದೇವಿಯ ಶಕ್ತಿಯಿಂದ ಎಲ್ಲರನ್ನೂ ನಾಶ ಮಾಡುತ್ತೇನೆಂದಾಗ, ಶ್ರೀ ಕೃಷ್ಣನು ಈತನ ಅಹಂಕಾರದ ಮಾತು ಕೇಳಿ ತನ್ನ ಚಕ್ರದಿಂದ ಆತನ ಶಿರಛೆಧನ ಗೈಯುತ್ತಾನೆ. ಚಂಡಿಕಾದೇವಿ ಪ್ರತ್ಯಕ್ಷಳಾಗಿ, ಈತ ಹಿಂದೆ ಯಕ್ಷರಾಜನಾಗಿದ್ದು ಶಾಪದಿಂದಾಗಿ ಬರ್ಭರೀಕನಾಗಿ ಜನಿಸಿರುವ ವಿಚಾರವನ್ನು ತಿಳಿಸುತ್ತಾಳೆ. ಆತನ ಕೊನೆಯ ಇಚ್ಛೆಯನ್ನು ಪೂರೈಸಿದ ಕೃಷ್ಣನು ಮೋಕ್ಷವನ್ನೂ ಕರುಣಿಸುತ್ತಾನೆ ಎನ್ನುವಲ್ಲಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಪ್ರಸಂಗದ ಕೇಂದ್ರ ಬಿಂದುವಾದ ಬರ್ಭರೀಕನಾಗಿ ವಿಶ್ವನಾಥ ಪೂಜಾರಿ ಹೆನ್ನಾಬೈಲು ಅವರು ವತ್ಸಲೆಯನ್ನು ವಿವಾಹವಾಗಲು ತಿರಸ್ಕರಿಸುವ ಮತ್ತು ಕೃಷ್ಣನೊಡನೆ ತನ್ನ ಶೌರ್ಯವನ್ನು ಮಾತು ಹಾಗೂ ದಿಟ್ಟ ಅಭಿನಯದೊಂದಿಗೆ ಅನಾವರಣಗೊಳಿಸಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಯಿತು.

ವತ್ಸಲೆಯಾಗಿ ವಂಡಾರು ಗೋವಿಂದ ಮೊಗವೀರ ಅವರು ಬರ್ಭರೀಕನ ರೂಪಕ್ಕೆ ಮರುಳಾಗುವುದು ಮತ್ತು ಆತನಿಂದ ತಿರಸ್ಕಾರಗೊಳ್ಳುವ ಸನ್ನಿವೇಶವನ್ನು ಮನಮುಟ್ಟುವಂತೆ ಅಭಿನಯಿಸಿದರು. ಕೃಷ್ಣನಾಗಿ ಗುಂಡಿಬೈಲು ಗಣಪತಿ ಭಟ್‌ ಅವರ ಲವಲವಿಕೆಯ ಹೆಜ್ಜೆ, ಘಟೋತ್ಕಚನಾಗಿ ರಘು ಮಡಿವಾಳ ಮಂದಾರ್ತಿ, ಭೀಮನಾಗಿ ನರಸಿಂಹ ಗಾಂವ್ಕರ್‌ ಅವರು ಗಮನ ಸೆಳೆದರೆ, ಕಾಮಕಟಂಕಟಿಯಾಗಿ ಆನಂದ ರಾವ್‌ ಉಪ್ಪಿನಕೋಟೆ, ವಿಜಯ ಮುನಿಯಾಗಿ ನರಸಿಂಹ ಗಾಂವ್ಕರ್‌, ಕಪಟ ಮುನಿಯಾಗಿ ಪ್ರಭಾಕರ ಆಚಾರ್ಯ ಮಟಪಾಡಿ, ದೇವಿಯಾಗಿ ಸತೀಶ್‌ ಬೀಜಾಡಿ, ಧರ್ಮರಾಯನಾಗಿ ರಾಜು ದೇವಾಡಿಗ, ಅರ್ಜುನನಾಗಿ ಸುಧಾಕರ ನಾಯ್ಕ ಕೂಡ್ಲಿ, ನಕುಲ ಮತ್ತು ಸಹದೇವರಾಗಿ ವಿಭವನ ಹಾಗೂ ಸಚಿನ್‌ ಆಚಾರ್ಯ ಇವರುಗಳು ತಮ್ಮ ಪಾತ್ರಗಳಿಗೆ ಉತ್ತಮ ನಟನೆಯ ಮೂಲಕ ನ್ಯಾಯ ಒದಗಿಸಿದರು. ಭಾಗವತರಾಗಿ ಉದಯ ಕುಮಾರ್‌ ಹೊಸಾಳರ ಸೊಗಸಾದ ಕಂಠಸಿರಿಗೆ ಮದ್ದಲೆಯಲ್ಲಿ ಶ್ರೀಧರ ಭಂಡಾರಿ ಮತ್ತು ಚೆಂಡೆಯಲ್ಲಿ ಶಿವಾನಂದ ಕೋಟ ಸಹಕರಿಸಿದ್ದರು. ವೇಷ ಭೂಷಣ ಗಣೇಶ್‌ ಜನ್ನಾಡಿಯವರದ್ದಾಗಿತ್ತು.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next