ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾವರ್ಕರ್ ಅವರನ್ನು ಅವಮಾನಿಸಿದ್ದು ಇದೇ ಮೊದಲಲ್ಲ, ಈ ಹಿಂದೆಯೂ ಸಾವರ್ಕರ್ ಅವರನ್ನು ಅವಮಾನಿಸಿದ್ದು, ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
“ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದೆ. ವೀರ್ ಸಾವರ್ಕರ್ ಅವರನ್ನು ಅವಮಾನಿಸುವ ಅಜೆಂಡಾವನ್ನು ಅದಕ್ಕಾಗಿ ಬಳಸುತ್ತಿದೆ,” ಎಂದು ರಂಜಿತ್ ಸಾರ್ವರ್ಕರ್ ಕೂಡ ಹೇಳಿದರು.
ಮಂಗಳವಾರ ಮುಂಜಾನೆ ರಾಹುಲ್ ಗಾಂಧಿ ಜಂಜಾಟಿಯ ಗೌರವ್ ದಿವಸ್ ಸಂದರ್ಭದಲ್ಲಿ ಹಿಂಗೋಲಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಬುಡಕಟ್ಟು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಭೂಕಂಪನ: ರಿಕ್ಟರ್ ಮಾಪನದಲ್ಲಿ 4.1 ತೀವ್ರತೆ ದಾಖಲು
“ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಪತ್ರ ಬರೆದು ತಮ್ಮನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಿಗೆ ಕೇಳಿದ್ದರು. ವೀರ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರು. ಜೈಲಿನಿಂದ ಹೊರಬಂದ ನಂತರ ಅವರು ಬ್ರಿಟಿಷರ ಪ್ರಸ್ತಾಪವನ್ನು ಒಪ್ಪಿಕೊಂಡು ಅವರ ಬಲಕ್ಕೆ ಸೇರಿಕೊಂಡಿದ್ದರು” ಎಂದು ಅವರು ಹೇಳಿದರು.