Advertisement

ವೇದವ್ಯಾಸ ಕಾಮತ್‌ ನಾಮಪತ್ರ ಸಲ್ಲಿಕೆ

01:04 PM Apr 24, 2018 | Harsha Rao |

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್‌ ಅಪಾರ ಜನಸ್ತೋಮದೊಂದಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಿಂದ ಪಾದಯಾತ್ರೆಯಲ್ಲಿ ತೆರಳಿ ಸೋಮವಾರ ನಾಮಪತ್ರ ಸಲ್ಲಿಸಿದರು.

Advertisement

ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡು 16 ವರ್ಷಗಳಿಂದ ಬಡವರಿಗೆ, ಅಶಕ್ತರಿಗೆ ನೆರವಾಗುತ್ತಾ ಸಾಮಾಜಿಕ ಸೇವೆಯಲ್ಲಿ ವೇದವ್ಯಾಸ ತೊಡಗಿಕೊಂಡಿದ್ದರು.

ಬೆಳಗ್ಗೆ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೇವರ ದರುಶನ, ಗೋಪೂಜೆ ನೆರವೇರಿಸಿ, ಚುನಾವಣಾ ಯಶಸ್ಸಿಗೆ ಪ್ರಾರ್ಥಿಸಿದ ವೇದ ವ್ಯಾಸ ಕಾಮತ್‌ ಬಳಿಕ ಶ್ರೀ ಮಹಾಮಾಯಿ ದೇವಾಲಯಕ್ಕೆ ಭೇಟಿ ನೀಡಿದರು.

ಅಲ್ಲಿಂದ ಕುದ್ರೋಳಿ ಶ್ರೀ ಗೋಕರ್ಣ ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಶ್ರೀ ನಾರಾಯಣ ಗುರು ಮಂದಿರದಲ್ಲಿ ಪ್ರಾರ್ಥಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಸಾಯಿರಾಮ್‌, ಬಿಜೆಪಿ ಮುಖಂಡ ಸುರೇಶ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕುದ್ರೋಳಿ ದೇವಾಲಯ ಮುಂಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳಿಂದ ಸ್ವಾಗತ ಸ್ವೀಕರಿಸಿದ ಕಾಮತ್‌ ಎಲ್ಲರಿಗೂ ವಂದಿಸಿ ಪಾದಯಾತ್ರೆಯಲ್ಲಿ ಮಹಾನಗರಪಾಲಿಕೆಗೆ ತೆರಳಿದರು.

Advertisement

ಮಧ್ಯಾಹ್ನ 12.33ಕ್ಕೆ ಸರಿಯಾಗಿ ನಗರಪಾಲಿಕೆಯಲ್ಲಿ ಚುನಾವಣಾಧಿ ಕಾರಿಯವರಿಗೆ ನಾಮಪತ್ರ ಸಲ್ಲಿಸಿದರು. 
ಸಂಸದ ನಳಿನ್‌ ಕುಮಾರ್‌ ಕಟೀಲು, ಜಿಲ್ಲಾ ಚುನಾವಣಾ ಸಂಚಾಲಕ ಸುರೇಂದ್ರನ್‌ ಕಾಸರಗೋಡು, ಮಾಜಿ ಶಾಸಕರಾದ ಎನ್‌. ಯೋಗೀಶ್‌ ಭಟ್‌, ಮೋನಪ್ಪ ಭಂಡಾರಿ, ರುಕ್ಮಯ್ಯ ಪೂಜಾರಿ, ರವಿಶಂಕರ್‌ ಮಿಜಾರು, ಕ್ಯಾಪ್ಟನ್‌ ಬೃಜೇಶ್‌ ಚೌಟ,  ಸುಧಾಕರ್‌ ಜೋಶಿ, ರವೀಂದ್ರ ಕುಮಾರ್‌, ನಿತಿನ್‌ ಕುಮಾರ್‌, ಪ್ರಭಾಮಾಲಿನಿ,  ಭಾಸ್ಕರ ಚಂದ್ರ ಶೆಟ್ಟಿ, ರಮೇಶ್‌ ಕಂಡೇಟು, ಮಹಾನಗರ ಪಾಲಿಕೆ ಸದಸ್ಯರಾದ  ಪ್ರೇಮಾನಂದ  ಶೆಟ್ಟಿ, ಸುಧೀರ್‌ ಶೆಟ್ಟಿ ಕಣೂರ್‌,  ರೂಪಾ ಡಿ. ಬಂಗೇರಾ, ವಿಜಯ್‌ ಕುಮಾರ್‌, ಮೀರಾ ಕರ್ಕೇರ, ಜಯಂತಿ ಆಚಾರ್‌, ಸುರೇಂದ್ರ,   ರಾಜೇಂದ್ರ, ದಿವಾಕರ್‌ ಪಾಂಡೇಶ್ವರ, ನವೀನಚಂದ್ರ, ಪೂರ್ಣಿಮಾ, ಪ್ರಮುಖ ರಾದ  ಜಗದೀಶ  ಶೇಣವ, ಶರಣ್‌ ಪಂಪವೆಲ್‌, ವಸಂತ್‌ ಪೂಜಾರಿ,  ರಾಜಗೋಪಾಲ್‌ ರೈ, ವಿನಯನೇತ್ರಾ, ಗ್ಲಾಡ್ವಿನ್‌ ಡಿ’ಸೋಜಾ, ಪೂರ್ಣಿಮಾ ರಾವ್‌   ಉಪಸ್ಥಿತರಿದ್ದರು.

ಹೊಸ ಮುಖಕ್ಕೆ  ಕಾರ್ಯಕರ್ತರ ಬೆಂಬಲ
ಅತ್ಯಧಿಕ ಪ್ರಮಾಣದಲ್ಲಿ ಸೇರಿದ್ದ ಯುವಜನರು, ಮಹಿಳಾ ಕಾರ್ಯಕರ್ತರು ಪಾದಯಾತ್ರೆಯಲ್ಲಿ ವೇದವ್ಯಾಸ ಕಾಮತ್‌ ಅವರಿಗೆ ಸಾಥ್‌ ನೀಡಿದ್ದಲ್ಲದೇ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ನಾಯಕ ಯಡಿಯೂರಪ್ಪ, ಬಿಜೆಪಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದ್ದು ಕಾಮತ್‌ರಿಗೂ ಹೊಸ ಹುರುಪು ತುಂಬಿತ್ತು.

“ಕಳೆದ ಐದು ವರ್ಷಗಳಲ್ಲಿ ಈಗಿನ ಶಾಸಕರು ಏನು ಕೆಲಸ ಮಾಡಿದ್ದಾರೆ ಹೇಳಲಿ. ಯೋಗೀಶ್‌ ಭಟ್‌ಅವರು ರೂಪಿಸಿದ, ಆರಂಭಿಸಿದ ಕೆಲಸಗಳನ್ನು ಮುಂದುವರಿಸಿ ಅದನ್ನೇ ತಮ್ಮ ಸಾಧನೆ ಎಂದು ಹೇಳಿಕೊಂಡಿದ್ದಾರೆ. ನಿಜವಾದ ಕ್ರೆಡಿಟ್‌ ಬಿಜೆಪಿಯದ್ದು. ಪಾಲಿಕೆ ಅಧಿಕಾರಿಯಾಗಿದ್ದು ಎಲ್ಲ ಸಮಸ್ಯೆ ಅರಿತಿದ್ದ ಜೆ.ಆರ್‌. ಲೋಬೋ ಅವರಿಗೆ ಶಾಸಕರಾಗಿ 5 ವರ್ಷಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಬಿಜೆಪಿ ಈ ಬಾರಿ ಯುವ ನಾಯಕನನ್ನು  ನಿಲ್ಲಿಸಿದೆ. ಅವರು ಕೆಲಸ ಮಾಡಿ ತೋರಿಸುತ್ತಾರೆ.  ಜನರು ಕೂಡಾ  ಬದಲಾವಣೆ ಬಯಸಿದ್ದಾರೆ’ ಎಂದು ಸಂಸದ ನಳಿನ್‌ ಕುಮಾರ್‌ ಹೇಳಿದರು.

ಉದ್ಯಮಿ ಸುಧೀರ್‌ ಕುಮಾರ್‌ ಅಭಿಪ್ರಾಯ ಹಂಚಿಕೊಂಡು,  ಮಂಗಳೂರು ನಗರ ಸ್ಮಾರ್ಟ್‌  ನಗರವಾಗಬೇಕಾದರೆ ಸ್ಮಾರ್ಟ್‌ ಅಗಿ ಕೆಲಸ ಮಾಡುವವರು ಬೇಕು. ಯುವ ಜನತೆಯಿಂದ ಆ ಕೆಲಸ ಸಾಧ್ಯ. ವೇದವ್ಯಾಸ ಕಾಮತ್‌  ಉತ್ತಮ ಸಂಘಟಕರಾಗಿದ್ದು, ಮಂಗಳೂರಿಗೆ ಒಳ್ಳೆಯದಾಗುತ್ತದೆ ಎಂದರು.

ಈ ಬಾರಿ ಬಿಜೆಪಿ ಹೊಸಮುಖಕ್ಕೆ ಅವಕಾಶ ನೀಡಿದೆ ಎಂದು ಬಿಜೆಪಿ ನಿರ್ಧಾರವನ್ನು ಸ್ವಾಗತಿಸಿದ ಉರ್ವದ ರಿಕ್ಷಾ ಚಾಲಕ ದಯಾನಂದ ಕರ್ಕೇರ, ಹಾಗಾಗಿ ನಾವು ಕೂಡ ಈ ಬಾರಿ ಹೊಸಬರ ಆಯ್ಕೆ ಬಯಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next