Advertisement
ಈ ನಡುವೆ ಬಿಜೆಪಿಯವರ ಮಂಗಳೂರು ಚಲೋದ ಪರಿಣಾಮ ನಗರದ ಹೃದಯ ಭಾಗವಾಗಿರುವ ಜ್ಯೋತಿ ವೃತ್ತವು ಬೆಳಗ್ಗೆ ಸುಮಾರು 8 ಗಂಟೆಯಿಂದ ಅಪರಾಹ್ನ 2 ಗಂಟೆ ವರೆಗೆ ಸ್ತಬ್ಧಗೊಂಡು ನಗರ ಜನಜೀವನ ಕೂಡ ಕೊಂಚ ಮಟ್ಟಿಗೆ ಅಸ್ತವ್ಯಸ್ತಗೊಂಡಿತ್ತು. ಬಹುತೇಕ ಖಾಸಗಿ ಹಾಗೂ ಸರಕಾರಿ ಬಸ್‌ಗಳು ಜ್ಯೋತಿ ಜಂಕ್ಷನ್ ಮೂಲಕ ಹಾದು ಹೋಗುವ ಕಾರಣ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರಿಗೆ ಪ್ರತಿಭಟನೆಯ ಬಿಸಿ ತಟ್ಟಿತ್ತು.
Related Articles
Advertisement
ಹೋರಾಟ ಮುಸ್ಲಿಮರ ವಿರುದ್ಧ ಅಲ್ಲ: ಯಡಿಯೂರಪ್ಪ ನಮ್ಮ ಹೋರಾಟ ಮುಸ್ಲಿಮರ ವಿರುದ್ಧ ಅಲ್ಲ; ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳ ವಿರುದ್ಧ ಮಾತ್ರ. ರಾಜ್ಯದಲ್ಲಿ ನಡೆದ ಅನೇಕ ಮಂದಿ ಹಿಂದೂಗಳ ಕೊಲೆ ಕೃತ್ಯದಲ್ಲಿ ಈ ಸಂಘಟನೆಗಳು ಭಾಗಿಯಾಗಿರುವುದು ಸಾಬೀತಾಗಿದೆ. ಆದ್ದರಿಂದ ಮೊದಲು ಈ ಸಂಘಟನೆಗಳನ್ನು ನಿಷೇಧಿಸಿ ಎಂದು ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು. ವೇಣುಗೋಪಾಲ್ ಕೇರಳದಲ್ಲಿ ಕೊಲೆಗಡುಕರಾಗಿದ್ದಾರೆ. ಅವರು ಕರ್ನಾಟಕಕ್ಕೆ ಬಂದು ಇಲ್ಲಿ ಕೋಮು ದಳ್ಳುರಿ ಹುಟ್ಟು ಹಾಕಲು ಯತ್ನಿಸಿದ್ದಾರೆ. ಇದೊಂದು ಷಡ್ಯಂತ್ರ ಎಂದು ಅವರು ಟೀಕಿಸಿದರು. ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ: ಶೆಟ್ಟರ್
ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಕೊನೆಯ ಮುಖ್ಯ ಮಂತ್ರಿ. ಅವರ ವಿರುದ್ಧ ಪ್ರತಿ ತಾಲೂಕು ಮಟ್ಟದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವುದರಿಂದ ಸಿಬಿಐ ತನಿಖೆ ಮುಗಿಯುವ ತನಕ ಸಚಿವ ಕೆ. ಜಾರ್ಜ್ ಅವರು ರಾಜೀನಾಮೆ ಕೊಟ್ಟು ಹೊರ ಹೋಗಬೇಕು ಎಂದು ಒತ್ತಾಯಿಸಿದ ವಿಧಾನಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ಮೇಲೆ ಆರೋಪ ಹೊರಿಸಿರುವುದು ಬಾಲಿಶ ಹಾಗೂ ಬೇಜವಾಬ್ದಾರಿಯ ಹೇಳಿಕೆಯಾಗಿದೆ ಎಂದು ಟೀಕಿಸಿದರು. ಶಿವಮೊಗ್ಗದಲ್ಲಿ ಕೆಎಫ್‌ಡಿ ಕಾರ್ಯಕರ್ತರು ಕೇರಳದಿಂದ ಬಂದು ಪಾಕಿಸ್ಥಾನ್ ಜಿಂದಾಬಾದ್ ಕೂಗಿದ್ದಾರೆ. ಬೇಕಾದರೆ ವೀಡಿಯೋ ತೆರೆದು ನೋಡಿ. ಒಂದೊಮ್ಮೆ ಅದರಲ್ಲಿ ಹಾಗೆ ಇಲ್ಲದಿದ್ದರೆ ನಾನು ರಾಜಕೀಯ ಜೀವನದಿಂದ ನಿವೃತ್ತನಾಗುತ್ತೇನೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದರು. ದ.ಕ. ಜಿಲ್ಲೆಯಲ್ಲಿ ಹಿಂದೂಗಳ ಕಗ್ಗೊಲೆ ಆಗಲು ಇಲ್ಲಿನ ಉಸ್ತುವಾರಿ ಸಚಿವರೇ ಕಾರಣ. ಈ ಸಚಿವರ ಹೆಸರನ್ನು ಬಾಯಲ್ಲಿ ಹೇಳಲು ಇಷ್ಟ ಪಡುವುದಿಲ್ಲ ಎಂದರು. ಮನೆಯೊಂದು, ಮೂರು ಬಾಗಿಲು: ಆರ್. ಅಶೋಕ್
ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಗೃಹ ಸಚಿವರಿಲ್ಲ. ಮನೆಯೊಂದು, ಮೂರು ಬಾಗಿಲಿನ ಸರಕಾರ ಇದು. ಸಿದ್ದರಾಮಯ್ಯ, ಕೆಂಪಯ್ಯ ಮತ್ತು ರಾಮಲಿಂಗ ರೆಡ್ಡಿ ಅವರೇ ಈ ಮೂರು ಬಾಗಿಲುಗಳು ಎಂದು ಮಾಜಿ ಸಚಿವ ಆರ್. ಅಶೋಕ್ ಲೇವಡಿ ಮಾಡಿದರು. ಬಿದ್ದ ರಾಮಯ್ಯ ಎದ್ದೇಳು !
ನಮ್ಮ ಹೋರಾಟ ಪೊಲೀಸರ ವಿರುದ್ಧ ಅಲ್ಲ; ಕೆಂಪಯ್ಯ ಮತ್ತು ಸಿದ್ದರಾಮಯ್ಯ ವಿರುದ್ಧ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾರಿಗೂ ರಕ್ಷಣೆ ಇಲ್ಲವಾಗಿದೆ. “ಬಿದ್ದರಾಮಯ್ಯ, ಎದ್ದೇಳು; ರಾಜ್ಯದ ಜನರು ಕೇಳುತ್ತಿದ್ದಾರೆ’ ಎಂದು ಆರ್. ಅಶೋಕ್ ಹೇಳಿದರು. ರಮಾನಾಥ ರೈ ಅವರ ರಾಜೀನಾಮೆಯನ್ನು ನಾವು ಕೇಳುವುದಿಲ್ಲ; ಬದಲಾಗಿ ಅವರನ್ನು ವಜಾ ಮಾಡಿ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಆಗ್ರಹಿಸುತ್ತೇವೆ ಎಂದು ಅರವಿಂದ ಲಿಂಬಾವಳಿ ಹೇಳಿದರು. ಕರಾವಳಿ ನಮ್ಮ ಕೈತಪ್ಪಿ ಹೋಗಿದೆ. ಅದನ್ನು ಮತ್ತೆ ನಮ್ಮ ಕೈವಶ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಸ್ತಾವನೆಗೈದ ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ , ಸಂಸದ ಪ್ರತಾಪ ಸಿಂಹ ಹೇಳಿದರು. ಒಂದು ಕಾಲದಲ್ಲಿ ಕರಾವಳಿ ಎಂದರೆ ಅಬ್ಬಕ್ಕ ರಾಣಿಯ ಹೆಸರು ನೆನಪಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಇಲ್ಲಿ ಯಾಸಿನ್ ಭಟ್ಕಳ್ ಮತ್ತು ರಿಯಾಜ್ ಭಟ್ಕಳ್ ಹೆಸರು ಕೇಳಿ ಬರುತ್ತಿತ್ತು. ಈಗ ಕೆಎಫ್‌ಡಿ, ಪಿಎಫ್‌ಐ, ಎಸ್‌ಡಿಪಿಐ ಹೆಸರು ಕೇಳಿ ಬರುತ್ತಿದೆ. ಈ ಸಂಘಟನೆಗಳು ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಆದ್ದರಿಂದ ಅವುಗಳನ್ನು ನಿಷೇಧಿಸ ಬೇಕೆಂಬುದು ನಮ್ಮ ಆಗ್ರಹ ಎಂದು ಹೇಳಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಸ್ವಾಗತಿಸಿದರು. ಸಮಾನ ನ್ಯಾಯ ಸಿಕ್ಕಿಲ್ಲ: ನಳಿನ್
ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎಲ್ಲರಿಗೂ ಸಮಾನ ನ್ಯಾಯ ದೊರೆಯ ಬೇಕಿತ್ತು. ಅದು ದೊರಕುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಪ್ರಶಾಂತ್ ಪೂಜಾರಿಯಿಂದ ಶರತ್ ಮಡಿವಾಳ ಹತ್ಯೆ ತನಕ ಒಟ್ಟು 11 ಮಂದಿ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆದರೆ ನೈಜ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳನ್ನು ಬಂಧಿಸುವ ಬದಲು ಸಚಿವ ರಮಾನಾಥ ರೈ ಅವರು ರಾಷ್ಟ್ರಭಕ್ತ ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರನ್ನು ಬಂಧಿಸಲು ಸೂಚನೆ ನೀಡುವ ಮೂಲಕ ರಾಷ್ಟ್ರದ್ರೋಹ ಎಸಗಿದ್ದಾರೆ. ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿರಲು ನಾಲಾಯಕ್ಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದರು. ಸಿದ್ದರಾಮಯ್ಯ ಸರಕಾರ ಬೀಳುವ ತನಕ ಹಾಗೂ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದರು. ಕಾರ್ಯಕ್ರಮ ಯಶಸ್ವಿ: ಬಿಎಸ್‌ವೈ
ಪ್ರಮುಖ ಮೂರು ಬೇಡಿಕೆಗಳನ್ನಿಟ್ಟುಕೊಂಡು ನಡೆದ ಮಂಗಳೂರು ಚಲೋ ರ್ಯಾಲಿ ರಾಜ್ಯ ಸರಕಾರದ ವಿರೋಧದ ಮಧ್ಯೆಯೂ ಯಶಸ್ವಿಯಾಗಿದ್ದು, ರಾಜ್ಯ ಸರಕಾರದ ಆಡಳಿತ ವೈಫಲ್ಯ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಕಾರ್ಯಕ್ರಮದ ಬಳಿಕ ನೆಹರೂ ಮೈದಾನದಲ್ಲಿ ಬಿ.ಎಸ್. ಯಡಿಯೂರಪ್ಪ ಪತ್ರಕರ್ತರಿಗೆ ತಿಳಿಸಿದರು.ರಾಜ್ಯದ ಮೂಲೆ ಮೂಲೆಗಳಿಂದ ರ್ಯಾಲಿಗೆ ಬರುತ್ತಿದ್ದ ಕಾರ್ಯಕರ್ತರನ್ನು ಬಂಧಿಸಿ ಪ್ರತಿಭಟನೆ ವಿಫಲಗೊಳಿಸಲು ರಾಜ್ಯ ಸರಕಾರ ಪ್ರಯತ್ನ ಮಾಡಿದೆ. ಆದರೂ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಈ ಹೋರಾಟ ಇಲ್ಲಿಗೆ ನಿಲ್ಲವುದಿಲ್ಲ, ಪಕ್ಷದ ಮುಖಂಡರೆಲ್ಲ ಒಟ್ಟಿಗೆ ಕುಳಿತು ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ವಿವರಿಸಿದರು. ಪಿಎಫ್‌ಐ ಮತ್ತು ಎಸ್‌ಡಿಪಿಐ ದೇಶದ್ರೋಹಿ ಸಂಘಟನೆಗಳಾ ಗಿದ್ದು, ಅವುಗಳನ್ನು ನಿಷೇಧಿಸಬೇಕು, ರಮಾನಾಥ ರೈ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಹಾಗೂ ಹಿಂದೂ ಕಾರ್ಯ ಕರ್ತರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬುದು ನಮ್ಮ ಮುಖ್ಯ ಮೂರು ಬೇಡಿಕೆಗಳಾಗಿವೆ ಎಂದರು. 850 ಮಂದಿ ವಶ, ಬಿಡುಗಡೆ
ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನ ಸಭೆ ನಡೆಸಿ ಬೈಕ್ ರ್ಯಾಲಿ ಮತ್ತು ಮೆರವಣಿಗೆ ನಡೆಸಲು ಯತ್ನಿಸಿದ ಆರೋಪದ ಮೇಲೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸೇರಿದಂತೆ ಒಟ್ಟು 850 ಮಂದಿಯನ್ನು ಕರ್ನಾಟಕ ಪೊಲೀಸ್ ಕಾಯ್ದೆಯಡಿ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜ್ಯೋತಿ ವೃತ್ತಕ್ಕೆ ಸಂಪರ್ಕಿಸುವ ನಾಲ್ಕೂ ರಸ್ತೆಗಳಲ್ಲಿ ಬೆಳಗ್ಗೆ 9.30ರಿಂದ ಬಸ್ ಸಂಚಾರವನ್ನು ತಡೆಹಿಡಿಯಲಾಗಿತ್ತು. ಆದರೆ ಇತರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಮತ್ತು ಇತರ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಆಗಲಿಲ್ಲ. ಬೆಳಗ್ಗೆ 9 ಗಂಟೆಯ ವೇಳೆಗೆ ಜ್ಯೋತಿ ಜಂಕ್ಷನ್ ಬಳಿ ಕಾರ್ಯಕರ್ತರು ಜಮಾಯಿಸಲು ಆರಂಭಿಸಿದ್ದರು. ಜ್ಯೋತಿ ಟಾಕೀಸ್ ಎದುರು ಟ್ರಕ್‌ನಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಅದರ ಮೇಲೇರಿ ಬಿಜೆಪಿ ನಾಯಕರು ಘೋಷಣೆ, ಪ್ರಕಟನೆಯನ್ನು ಹೊರಡಿಸಿದರು ಹಾಗೂ ಅಗತ್ಯ ಸೂಚನೆಯನ್ನು ನೀಡಿದರು. ಬಳಿಕ ನಡೆದ ಪ್ರತಿಭಟನ ಸಭೆಯಲ್ಲಿ ನಾಯಕರು ಈ ವೇದಿಕೆಯಿಂದಲೇ ಮಾತನಾಡಿದರು. ಐದು ಸಾವಿರಕ್ಕೂ ಮಿಕ್ಕಿದ ಜನ
ಬಿಜೆಪಿಯವರ ಮಂಗಳೂರು ಚಲೋದಲ್ಲಿ 5,000ಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ದ.ಕ., ಉಡುಪಿ ಜಿಲ್ಲೆ ಹೊರತಾಗಿ ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಉತ್ತರ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಸಹಿತ ಹಲವು ಜಿಲ್ಲೆಗಳಿಂದ ಚಲೋಗೆ ಆಗಮಿಸಿದ್ದರು. ನಮ್ಮ ಹೋರಾಟ ಮುಸ್ಲಿಮರ ವಿರುದ್ಧ ಅಲ್ಲ; ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳ ವಿರುದ್ಧ ಮಾತ್ರ. ರಾಜ್ಯ ದಲ್ಲಿ ನಡೆದ ಅನೇಕ ಹಿಂದೂಗಳ ಕೊಲೆ ಕೃತ್ಯದಲ್ಲಿ ಈ ಸಂಘಟನೆಗಳು ಭಾಗಿಯಾಗಿರುವುದು ಸಾಬೀತಾ ಗಿದೆ. ಮೊದಲು ಈ ಸಂಘಟನೆಗಳನ್ನು ನಿಷೇಧಿಸಿ.
ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಅವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ತನಿಖೆ ಮುಗಿಯುವ ತನಕ ಸಚಿವ ಕೆ. ಜಾರ್ಜ್ ರಾಜೀನಾಮೆ ಕೊಡಲಿ.
ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಒಂದು ಬೈಕ್ ರ್ಯಾಲಿಗೆ ಸರಕಾರ ಇಷ್ಟೊಂದು ಹೆದರಿದೆ. ನಮ್ಮಲ್ಲಿ ಹೋರಾಟದ ಅಸ್ತ್ರಗಳು ಇನ್ನೂ ಸಾಕಷ್ಟಿವೆ. ಸಿದ್ದರಾಮಯ್ಯ ಸರಕಾರದ ಆಯುಷ್ಯ ಇನ್ನು ನಾಲ್ಕೇ ತಿಂಗಳು. ಚುನಾವಣೆ ಘೋಷಣೆ ಆಗುವ ತನಕ ಹೋರಾಟ ಮುಂದುವರಿಯಬೇಕು.
ಶೋಭಾ ಕರಂದ್ಲಾಜೆ, ಸಂಸದೆ ಪ್ರಶಾಂತ್ ಪೂಜಾರಿಯಿಂದ ಶರತ್ ಮಡಿವಾಳ ತನಕ ಒಟ್ಟು 11 ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆರೋಪಿಗಳ ಬಂಧನವಾಗಿಲ್ಲ. ಸಿದ್ದರಾಮಯ್ಯ ಸರಕಾರ ಬೀಳುವ ತನಕ ಹಾಗೂ ಪಿಎಫ್‌ಐ ನಿಷೇಧಿಸುವ ತನಕ ಹೋರಾಡುತ್ತೇವೆ.
ನಳಿನ್ ಕುಮಾರ್ ಕಟೀಲು, ಸಂಸದ ಚಿತ್ರ: ಸತೀಶ್ ಇರಾ