Advertisement

ವಿ.ಬಿ. ಅರ್ತಿಕಜೆ ಅವರಿಗೆ ಸರಸ್ವತಿ ಪುರಸ್ಕಾರ ಪ್ರದಾನ

02:24 PM Dec 08, 2017 | |

ನಗರ: ಎಳವೆಯಿಂದಲೇ ಸಂಸ್ಕೃತಿಯ ಸಾರವನ್ನು ಅರಿತುಕೊಳ್ಳುವ ಶಿಕ್ಷಣ ನೀಡುವುದರಿಂದ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ. ಅಂತಹ ಶಿಕ್ಷಣ ನೀಡುತ್ತಿರುವ ಸರಸ್ವತಿ ವಿದ್ಯಾಮಂದಿರ ಮಾದರಿ ಸಂಸ್ಥೆಯಾಗಿದೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

ಕೊಡಂಕಿರಿ ಫೌಂಡೇಶನ್‌ ಪ್ರವರ್ತಿತ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್ಲರನ್ನು ಪ್ರೀತಿಸುವ, ಗೌರವಿಸುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು. ಅಂತಹ ಕಾರ್ಯ ಮನೆಯಿಂದ ಆರಂಭಗೊಂಡು, ಶಾಲೆಯಲ್ಲಿ ಗಟ್ಟಿಯಾಗಬೇಕು. ಸಂಸ್ಕೃತಿಯನ್ನು ಪರಿಚಯಿಸುವ, ಅದರಲ್ಲಿಯೇ ಬದುಕುವ ಶಿಕ್ಷಣದಿಂದ ಆ ಕಾರ್ಯ ಸಾಧ್ಯ ಎಂದರು.

ಸಕಾರಾತ್ಮಕ ಸಂಗತಿ ತಿಳಿಸಿ
ಮಕ್ಕಳ ಮುಂದೆ ಯಾವುದೇ ವ್ಯವಸ್ಥೆಯನ್ನು, ವ್ಯಕ್ತಿಗಳನ್ನು ನಿಂದಿಸಬಾರದು. ಅದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಸಕಾರಾತ್ಮಕ ಸಂಗತಿ ಗಳನ್ನು ತಿಳಿಸುವ ಪ್ರಯತ್ನ ಆಗಬೇಕು ಎಂದು ಅವರು ನುಡಿದರು.

ಪ್ರಶಂಸನೀಯ
ಸರ್ವೆ ಎಸ್‌ಜಿಎಂ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ ಎಚ್‌.ಬಿ. ಮಾತನಾಡಿ, ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಗೂ ಒತ್ತು ನೀಡಿದಾಗ ವಿದ್ಯಾರ್ಥಿಯ ಸರ್ವತೋಮುಖ ಬೆಳ ವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಸರಸ್ವತಿ ವಿದ್ಯಾ ಮಂದಿರ ಮುಂದಡಿಯಿಟ್ಟಿರುವುದು ಪ್ರಶಂಸನೀಯ ಎಂದರು. ಸಂಸ್ಥೆಯ ಸಂಚಾಲಕ ಅವಿನಾಶ ಕೊಡಂಕಿರಿ ಮಾತನಾಡಿ, ಸುಮಾರು 250 ಮಕ್ಕಳು ಇರುವ ಈ ವಿದ್ಯಾಸಂಸ್ಥೆಯಲ್ಲಿ ಕನ್ನಡ, ಇಂಗ್ಲಿಷ್‌, ತುಳು, ಸಂಸ್ಕೃತ, ಹಿಂದಿ ಭಾಷೆಗಳನ್ನು ಕಲಿಸಲಾಗುತ್ತಿದೆ.

Advertisement

ಕರಾಟೆ, ಭರತನಾಟ್ಯ, ಸಂಗೀತ ಮೊದಲಾದ ಪಠ್ಯೇತರ ಚಟುವಟಿಕೆಗಳು ಇವೆ. ಹೆತ್ತವರ ಸಹಕಾರದಿಂದಲೇ ಸಂಸ್ಥೆಯ ಪ್ರಗತಿ ಸಾಧ್ಯವಾಗಿದೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಶುಭಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪಾವನಿ, ವೀಕ್ಷಾ, ಆರ್ಯ, ದೀಕ್ಷಾ, ಪ್ರೀತಿಕಾ, ಅನುಶ್ರೀ, ಭವಿಷ್ಯ ಅವರು ಪ್ರಾರ್ಥನೆ, ನುಡಿಮುತ್ತು, ದಿನ ಭವಿಷ್ಯವನ್ನು ವಾಚಿಸಿದರು. ಸಂಸ್ಥೆಯ ಮುಖ್ಯಗುರು ರಾಜಾರಾಮ ವರ್ಮ ಸ್ವಾಗತಿಸಿ, ಶಿಕ್ಷಕಿ ವೇದಾವತಿ ವಂದಿಸಿದರು. ರಾಣಿ, ಇಂಚರಾ, ಜಾಸೀಫ್‌, ಆರಾಧ್ಯ, ರಿಧಿ, ಸಾಕ್ಷಿ, ಶ್ರೀಲಕ್ಷ್ಮೀ, ಅಜಂಕ್ಯಾ ನಿರೂಪಿಸಿದರು. ಶಿಕ್ಷಕಿ ಶರಣ್ಯಾ ಸಹಕರಿಸಿದರು.

ಭ್ರಮೆ ತುಂಬಬೇಡಿ
ನಾಲ್ಕನೇ ವರ್ಷದ ಸರಸ್ವತಿ ಪುರಸ್ಕಾರ ಸ್ವೀಕರಿಸಿ, ವಿಶ್ರಾಂತ ಉಪನ್ಯಾಸಕ ವಿ.ಬಿ. ಅರ್ತಿಕಜೆ ಮಾತನಾಡಿದರು. ಮಕ್ಕಳು ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳುವ ಮೊದಲು, ತಂದೆ ತಾಯಿ ತಮ್ಮ ನುಡಿ, ನಡೆ, ಗುಣಗಳನ್ನು ತಿದ್ದಿಕೊಳ್ಳಬೇಕು. ಶಿಕ್ಷಣ ಅಂದರೆ ಕೇವಲ ಅಂಕ ಗಳಿಕೆ ಎಂಬ ಭ್ರಮೆಯನ್ನು ಮಕ್ಕಳ ಮನಸ್ಸಿನಲ್ಲಿ ತುಂಬಬಾರದು. ಮಗುವಿನ ಆಸಕ್ತಿಯನ್ನು ಹೆತ್ತವರು ಅರಿತುಕೊಳ್ಳಬೇಕು. ಅದಕ್ಕೆ ತಕ್ಕಂತೆ ಪ್ರೋತ್ಸಾಹ ಕೊಡಬೇಕು ಎಂದು ಅವರು ವಿವರಿಸಿದರು.

ವರ್ಧಂತ್ಯುತ್ಸವ
ಇದೇ ಸಂದರ್ಭ ಸಂಸ್ಥೆಯ ನೂತನ ಗಣಕ ಯಂತ್ರ ಕೊಠಡಿಯನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸಿದರು. ಸಂಜೆ ಸರಸ್ವತಿವಂದನಾ, ಸಾಂಸ್ಕೃತಿಕ ಕಾರ್ಯಕ್ರಮ ವರ್ಧಂತ್ಯುತ್ಸವ ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳಿಂದ ಸರಸ್ವತಿ ವಂದನಾ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಕರಾಟೆ ಮತ್ತು ತಾಲೀಮು ಪ್ರದರ್ಶನ, ಒನಕೆ ಓಬವ್ವ ರೂಪಕ, ಭಕ್ತ ಕನಕದಾಸ ನಾಟಕ, ಭಾಸ ಕರಿ ವಿರಚಿತ ಮಧ್ಯಮ ವ್ಯಾಯೋಗ ನಾಟಕ, ಇಂಗ್ಲಿಷ್‌ ಡ್ರಾಮಾ, ನೃತ್ಯ ವೈವಿಧ್ಯ ಪ್ರದರ್ಶನಗೊಂಡವು.

Advertisement

Udayavani is now on Telegram. Click here to join our channel and stay updated with the latest news.

Next