Advertisement

Udupi;ಪ್ರೌಢಶಾಲೆ, ಪದವಿಪೂರ್ವ ವಿದ್ಯಾರ್ಥಿನಿಯರಿಗೆ “ವಾತ್ಸಲ್ಯ’

11:35 PM Jan 17, 2024 | Team Udayavani |

ಉಡುಪಿ: ರಾಜ್ಯದಲ್ಲೇ ಮೊದಲು ಎಂಬಂತೆ ಉಡುಪಿ ಸರಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಜಿಲ್ಲಾಡಳಿತ, ಜಿ.ಪಂ. ಹಾಗೂ ತಾ.ಪಂ. ಸಹಯೋಗದಲ್ಲಿ “ವಾತ್ಸಲ್ಯ’ ಯೋಜನೆ ರೂಪಿಸಲಾಗಿದೆ.

Advertisement

ವಿದ್ಯಾರ್ಥಿನಿಯರು ಹೆಚ್ಚು ಸಂಖ್ಯೆಯಲ್ಲಿರುವ ಸರಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರೌಢಶಾಲೆ ಅಥವಾ ಪದವಿಪೂರ್ವ ಕಾಲೇಜಿನಲ್ಲಿ ಈಗಾಗಲೇ ಇರುವ ಒಂದು ಕೊಠಡಿಯನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿ, ಋತುಸ್ರಾವದ ಸಂದರ್ಭ ಬಳಕೆಗೆ ಪೂರಕವಾಗಿ ಪುನರ್‌ ನವೀಕರಿಸಲಾಗುತ್ತಿದೆ. ಜ. 25ಕ್ಕೆ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉದ್ಘಾಟಿಸುವ ಸಾಧ್ಯತೆಯೂ ಇದೆ.

25 ಶಾಲಾ ಕಾಲೇಜು
ಮೊದಲ ಹಂತದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ತಾ.ಪಂ. ಸೇರಿಕೊಂಡು 25 ಪ್ರೌಢಶಾಲೆ ಅಥವಾ ಪಿಯು ಕಾಲೇಜುಗಳಲ್ಲಿ ತಲಾ ಒಂದು ಕೊಠಡಿಯನ್ನು ಸಿದ್ಧಪಡಿಸಲಾಗುತ್ತದೆ. ಅಲ್ಲಿ ವಿದ್ಯಾರ್ಥಿನಿಯರ ವಿಶ್ರಾಂತಿಗೆ 2 ಕಾಟ್‌, ಅಟ್ಯಾಚ್‌ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ನ್ಯಾಪ್‌ಕಿನ್‌, ಸ್ಯಾನಿಟರಿ ಪ್ಯಾಡ್‌ ಹಾಗೂ ಅದನ್ನು ಪ್ಯಾಡ್‌ ಬರ್ನ್ ಮಾಡುವ ಯಂತ್ರವನ್ನೂ ಇರಿಸಲಾಗುತ್ತಿದೆ. ಕೊಠಡಿಯನ್ನು ಸಂಪೂರ್ಣವಾಗಿ ಹೈಜನಿಕ್‌ ಮಾದರಿಯಲ್ಲಿ ಸುಸಜ್ಜಿತಗೊಳಿಸಲಾಗುತ್ತದೆ.

3 ಲಕ್ಷ ರೂ. ಅನುದಾನ
ಪ್ರತೀ ಶಾಲೆಯ ಒಂದು ಕೊಠಡಿಯನ್ನು 3 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸ ಲಾಗುತ್ತದೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಸಹಕಾರದೊಂದಿಗೆ ಇದನ್ನು ಜಾರಿಗೆ ತರುತ್ತಿದ್ದೇವೆ. ಮುಂದಿನ ಹಂತದಲ್ಲಿ ಎಲ್ಲ ಶಾಲೆಗಳಿಗೂ ಸಿಎಸ್‌ಆರ್‌ ನಿಧಿಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಿಕ್ಷಕರಿಗೆ ತರಬೇತಿ
ಸುಸಜ್ಜಿತ ಕೊಠಡಿ ನಿರ್ಮಾಣದ ಅನಂತರದಲ್ಲಿ ಅದರ ನಿರ್ವಹಣೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ಆಯಾ ಶಾಲೆಯ ಶಿಕ್ಷಕಿಯರಲ್ಲಿ ಒಬ್ಬರಿಗೆ ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೆ ಮೇಲ್ವಿಚಾರಣೆಯ ಉಸ್ತುವಾರಿ ನೀಡಲಿದ್ದೇವೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತರಬೇತಿ ಕೊಡಲಿದ್ದೇವೆ ಎಂದು ಜಿ.ಪಂ. ನಿರ್ಗಮಿತ ಸಿಇಒ ಪ್ರಸನ್ನ ಎಚ್‌. “ಉದಯವಾಣಿ’ಗೆ ವಿವರ ನೀಡಿದರು.

Advertisement

ರಾಜ್ಯದಲ್ಲೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಶಾಲೆಯ ಕೊಠಡಿಯೊಂದನ್ನು ಸುಸಜ್ಜಿತಗೊಳಿಸಿ, ಅಲ್ಲಿ ಎಲ್ಲ ವ್ಯವಸ್ಥೆ ಇರುವಂತೆ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಇದು ಖಂಡಿತವಾಗಿಯೂ ಅನುಕೂಲವಾಗಲಿದೆ.
– ಡಾ| ಕೆ. ವಿದ್ಯಾಕುಮಾರಿ,
ಜಿಲ್ಲಾಧಿಕಾರಿ, ಉಡುಪಿ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next