Advertisement

ಚಟಪಟ ಮಾತೇ ಪ್ಲಸ್ಸು ವಟವಟ ಮಾತು ಮೈನಸ್ಸು: ರಾಧಿಕಾ ರಾವ್‌ ಸ್ಪೀಕಿಂಗ್‌

03:50 AM Mar 22, 2017 | |

ಮಂಗ್ಳೂರು ಹುಡುಗಿ, ಹುಬ್ಳಿ ಹುಡ್ಗ ಧಾರಾವಾಹಿಯಿಂದ ಪರಿಚಿತವಾದ ಪ್ರತಿಭೆ ರಾಧಿಕಾ ರಾವ್‌. ಮುಂದೊಂದು ದಿನ ಸಿನಿಮಾ ಕ್ಷೇತ್ರದಲ್ಲಿ ಈಕೆ ಯಶಸ್ವೀ ನಟಿಯಾಗುತ್ತಾರೆ ಎಂದು ಸಿನಿಮಾ ಮಂದಿಯೇ ಭವಿಷ್ಯ ನುಡಿದಿದ್ದಾರೆ. ನೋಡಲು ಮುದ್ದಾಗಿ ಮನೆ ಹುಡುಗಿಯಂತೆ ಕಾಣುವ ರಾಧಿಕಾ ಇಲ್ಲಿ ತಮ್ಮ ಅಂತರಂಗ ತೆರೆದಿಟ್ಟಿದ್ದಾರೆ.

Advertisement

ನಟಿ ಆಗುವ ಸಲುವಾಗಿ ಶಿಕ್ಷಣಕ್ಕೆ ಟಾಟಾ ಹೇಳಿದಿರಾ?
ಇಲ್ಲ. ಸ್ಟಡೀಸ್‌ ನಿಲ್ಲಿಸಿಲ್ಲ. ಜೀವನದಲ್ಲಿ ಯಾವುದು ಶಾಶ್ವತವಾಗಿ ಇರತ್ತೆ ಅಂತ ಹೇಳಲು ಆಗುವುದಿಲ್ಲ. ನಟನೆಯೇ ಜೀವನಪರ್ಯಂತ ಕೈ ಹಿಡಿಯುತ್ತದೆ ಎಂದು ಈಗಲೇ ಹೇಗೆ ನಿರ್ಧರಿಸುವುದು? ಆದ್ದರಿಂದ ನನ್ನ ಪ್ರಕಾರ ಶಿಕ್ಷಣ ಕೂಡ ತುಂಬಾ ಮುಖ್ಯ. ಜೀವನದ ಯಾವುದೋ ಒಂದು ಸಮಯದಲ್ಲಿ ಅದೂ ಕೂಡ ನೆರವಿಗೆ ಬರಬಹುದು.

ನೀವು ತಯಾರಿಸಿದ ಆಹಾರದಲ್ಲಿ ನಿಮ್ಮ ಮನೆಯವರು ಇಷ್ಟಪಟ್ಟು ತಿಂದ ಆಹಾರ ಯಾವುದು?
ಇಷ್ಟ ಪಟ್ಟು ತಿಂದಿದ್ದು ಪೀಜಾ, ಕಷ್ಟ ಪಟ್ಟು ತಿಂದದ್ದು ರೋಟಿ ಕರಿ. ರೋಟಿ ಚನ್ನಾಗಿ ಬೆಂದಿರಲಿಲ್ಲ. ಆದರೂ ತುಂಬಾ ಚನ್ನಾಗಿ ಮಾಡಿದ್ದೀಯ ಮಗಳೇ ಎಂದು ಹೇಳಿ ತಿಂದಿದ್ದರು.

ಮತ್ತೆ, ನಿಮಗೆ ನೀವು ಏನಾಗಬೇಕು ಅಂತ ಆಸೆ ಇತ್ತು?
ಡೆಂಟಿಸ್ಟ್‌ ಆಗಬೇಕು ಅಂತ ತುಂಬಾ ಆಸೆ ಇತ್ತು. ಕಾಲೇಜೊಂದರಲ್ಲಿ ಸೀಟು ಕೂಡ ಸಿಕ್ಕಿತ್ತು. ತುಂಬಾ ದೂರ ಅಂತ ಮನೆಯಲ್ಲಿ ಕಳಿಸಲಿಲ್ಲ. ಮೊದಲಿನಿಂದಲೂ ನನಗೆ ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಆಸಕ್ತಿ ಇತ್ತು. ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಬಿಎಸ್‌ಸಿ ಫ್ಯಾಷನ್‌ ಡಿಸೈನಿಂಗ್‌ ಪದವಿಗೆ ಸೇರಿಕೊಂಡೆ. 

ಧಾರಾವಾಹಿಯಲ್ಲಿ ನೀವು ಮಂಗಳೂರಿನವರು, ನಿಜದಲ್ಲಿ  ನಿಮ್ಮ ಊರು ಯಾವುದು?
ಸದ್ಯಕ್ಕೆ ಮಂಗಳೂರೇ ನನ್ನ ಊರು. ನಾನು 10ನೇ ತರಗತಿಯವರೆಗೂ ಬೆಂಗಳೂರಿನಲ್ಲೇ ಇದ್ದದ್ದು.  5 ವರ್ಷಗಳ ಹಿಂದೆ ನಮ್ಮ ಕುಟುಂಬ ಮಂಗಳೂರಿಗೆ ಸ್ಥಳಾಂತರವಾಯಿತು.

Advertisement

ಚಿಕ್ಕಂದಿನಿಂದ ನಟಿಯಾಗಬೇಕು ಅಂತ ಕನಸು ಕಂಡಿದ್ದಿರಾ?
ಇಲ್ಲಪ್ಪ. ನಾನೊಂದು ದಿನ ನಟಿ ಆಗುತ್ತೇನೆ ಅಂತ ಕನಸು ಮನಸಲ್ಲೂ ಊಹಿಸಿರಲಿಲ್ಲ. ನಟನೆಗೆ ಅವಕಾಶ ಬಂದಾಗ ಇಷ್ಟ ಇಲ್ಲ ಎಂದು ತಿರಸ್ಕರಿಸಿದ್ದೆ. ಈಗ ನಾನೊಬ್ಬಳು ನಟಿಯಾಗಿರುವುದನ್ನು ನನಗೇ ನಂಬಲು ಸಾಧ್ಯ ಆಗುತ್ತಿಲ್ಲ.

ನಟನಾ ವೃತ್ತಿ ಹೇಗೆ ಆರಂಭವಾಯಿತು?
ನನ್ನ ಫ್ರೆಂಡ್‌ ಮೂಲಕ ತುಳು ಚಿತ್ರಗಳ ಆಫ‌ರ್‌ ಬಂತು. ಆಗಲೂ ಆಸಕ್ತಿ ಇರಲಿಲ್ಲ. ಆದರೆ ಅಮ್ಮ ಬಹಳ ಒತ್ತಾಯ ಮಾಡಿದರು. ಜೊತೆಗೆ ಫ್ರೆಂಡ್ಸ್‌ ಕೂಡ ಒಪ್ಪಿಕೊಳ್ಳುವಂತೆ ಪ್ರೇರೇಪಿಸಿದರು. ಬಳಿಕ “ಎಸಾ’ ಮತ್ತು “ಪುದರೊYಂಜಿ ಬೊಡೆಡಿ’ ಎಂಬ 2 ತುಳು ಚಿತ್ರಗಳಲ್ಲಿ ನಟಿಸಿದೆ.

ಧಾರಾವಾಹಿಗೆ ಹೇಗೆ ಆಯ್ಕೆ ಆದಿರಿ?
ಇದೂ ಒಂಥರಾ ಬಯಸದೇ ಬಂದ ಭಾಗ್ಯ. ರಾಧಿಕಾ ಮಿಂಚು ಎಂಬ ಧಾರಾವಾಹಿ ನಟಿ ಫೇಸ್‌ಬುಕ್‌ನಲ್ಲಿ ನನ್ನ ಫೋಟೊಗಳನ್ನು ನೋಡಿ ಆಫ‌ರ್‌ ನೀಡಿದರು. ನನಗೆ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸಲು ಸ್ವಲ್ಪವೂ ಧೈರ್ಯ ಇರಲಿಲ್ಲ. ಆಗಲೂ ಅಮ್ಮನೇ ಧೈರ್ಯ ತುಂಬಿದರು. ಒಳ್ಳೆಯ ಅವಕಾಶ, ಉತ್ತಮ ಪ್ರೊಡಕ್ಷನ್‌ ಇಂಥ ಅವಕಾಶ ಬಿಡಬೇಡ ಎಂದು ಹೇಳಿದರು. ನೀನು ಧೈರ್ಯ ಕೊಡ್ತಿದೀಯಾ ಅಂತ ಒಪ್ಪಿಕೊಳ್ತಾ ಇದ್ದೀನಿ ಅಂತ ಅಮ್ಮನಿಗೆ ಹೇಳಿ ಈ ಧಾರಾವಾಹಿ ಒಪ್ಪಿಕೊಂಡೆ. ತುಂಬಾ ಒಳ್ಳೆಯ ನಿರ್ಧಾರ ತೆಗೆದುಕೊಂಡೆ ಅಂತ ಈಗ ಅನಿಸುತ್ತಿದೆ. 

ಮೊದಲ ಸಲ ಕ್ಯಾಮರಾ ಎದುರಿಸಿದಾಗ ಆತಂಕ ಇತ್ತಾ?
ನನಗೆ ಕ್ಯಾಮರಾ ಎದುರಿಸಲು ಯಾವಾಗಲೂ ಭಯವಾಗಿಲ್ಲ. ನಾನು ಶಾಲಾ ದಿನಗಳಿಂದಲೇ ಮಾಡೆಲಿಂಗ್‌ ಮಾಡುತ್ತಿದ್ದೆ. ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದೆ. ನನ್ನದು ಫೋಟೊಜನಿಕ್‌ ಫೇಸ್‌ ಹಾಗಾಗಿ ಕ್ಯಾಮರಾದಲ್ಲಿ ಚನ್ನಾಗಿ ಕಾಣುತ್ತೇನೆ ಎಂಬ ವಿಶ್ವಾಸ ಇತ್ತು. ಹಾಗಾಗಿ ಭಯ ಇರಲಿಲ್ಲ.

ಹಾಗಾದರೆ ನಟನೆ ಕೂಡ ಕಷ್ಟವಾಗಲಿಲ್ಲವೇ?
ನಾನು ಅಳುಬುರುಕಿ ಅಲ್ಲವೇ ಅಲ್ಲ. ಧಾರಾವಾಹಿಗಾಗಿ ಅಳುವ ದೃಶ್ಯವಿದ್ದರೆ ಈಗಲೂ ಕಷ್ಟವಾಗುತ್ತದೆ. ಅಳುವಿನ ಮೇಲೆ ಗಮನ ಹರಿಸಿದರೆ, ಆಂಗಿಕ ಅಭಿನಯ ಕೈಕೊಡುತ್ತದೆ. ನನ್ನ ಸಹ ಕಲಾವಿದರು ತುಂಬಾ ಒಳ್ಳೆಯವರು. ಅವರು ಸದಾ ನನ್ನನ್ನು ತಿದ್ದುತ್ತಾರೆ. ಕೆಲವೊಮ್ಮೆ ಅವರೇ ಅಭಿನಯಿಸಿ ತೋರಿಸುತ್ತಾರೆ. ಮೊದಮೊದಲಿಗೆ ಮಂಗಳೂರು ಭಾಷೆ ಮಾತನಾಡಲು ಕಷ್ಟವಾಗುತ್ತಿತ್ತು. 

ನಟನಾ ಜೀವನ ಆರಂಭವಾದ ಬಳಿಕ ನಿಮ್ಮ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ?
ವೈಯಕ್ತಿಕ ಬದುಕಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಮೊದಲು ಹೇಗಿದ್ದೆನೋ ಈಗಲೂ ಹಾಗೇ ಇದ್ದೇನೆ. ನಾನು ವಾಸವಿರುವುದು ಜೆಪಿ ನಗರದಲ್ಲಿ. ಇಲ್ಲಿ ತುಂಬ ಜನ ನನ್ನ ಧಾರಾವಾಹಿ ನೋಡುತ್ತಾರೆ ಅನಿಸುತ್ತದೆ. ನಾನು ಆಚೆ ಹೋದರೆ ಒಬ್ಬಿಬ್ಬರಾದರೂ ನನ್ನನ್ನು ಗುರುತಿಸಿ ಮಾತನಾಡಿಸುತ್ತಾರೆ. 

ಈಗಾಗಲೇ ನಿಮಗೆ ದೊಡ್ಡ ಅಭಿಮಾನಿ ಬಳಗ ಇರಬೇಕಲ್ವಾ?
ಎಲ್ಲರೂ ಧಾರಾವಾಹಿಗಳನ್ನು ಮಹಿಳೆಯರು, ಅದರಲ್ಲೂ ಗೃಹಿಣಿಯರು ಹೆಚ್ಚಾಗಿ ನೋಡುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ ನನಗೆ ಅತಿ ಹೆಚ್ಚು ಫೋನ್‌ ಕರೆಗಳು ಬರುವುದು ಟೀನ್‌ ಏಜ್‌ ಹುಡುಗರಿಂದಲೇ. ನಮ್ಮ ಧಾರಾವಾಹಿಯನ್ನು ಹುಡುಗರು ಮತ್ತು ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ  ನೋಡುತ್ತಾರೆ ಎಂಬುದೇ ನಟಿಸಲು ಆರಂಭಿಸಿದಾಗಿನಿಂದ ಸಿಕ್ಕ ದೊಡ್ಡ ಖುಷಿ.

ಹೊರಗಡೆ ಯಾರಾದರೂ ನಿಮ್ಮನ್ನು ಗುರುತಿಸಿ ಮಾತನಾಡಿದರೆ ಹೇಗೆ ಪ್ರತಿಕ್ರಿಯೆ ನೀಡುತ್ತೀರ? 
ತುಂಬಾ ಖುಷಿ ಆಗುತ್ತದೆ. ನಾನು ಯಾರೊಂದಿಗೂ ಮಾತನಾಡಲು ಹಿಂಜರಿಯುವವಳಲ್ಲ. ಎಲ್ಲರೊಂದಿಗೆ ಬೆರೆತು ಮಾತನಾಡುತ್ತೇನೆ. 

ಧಾರಾವಾಹಿಯಲ್ಲಿ ಟ್ರೆಡಿಷನಲ್‌ ಹುಡುಗಿಯಾಗಿ ಕಾಣಿಸಿಕೊಳ್ಳುತ್ತೀರಿ. ನಿಜವಾಗಲೂ ನೀವು ಹಾಗೆ ಇರುವುದಾ?
ಖಂಡಿತಾ ಇಲ್ಲ. ನನಗೆ ಮಾಡರ್ನ್ ಉಡುಗೆಗಳೇ ತುಂಬಾ ಇಷ್ಟ. ಅಪರೂಪಕ್ಕೆ ಸಾಂಪ್ರದಾಯಿಕ ಉಡುಗೆ ತೊಡುತ್ತೇನೆ ಅಷ್ಟೇ. ಆದರೆ ಧಾರಾವಾಹಿಯಲ್ಲಿ ಅನಿವಾರ್ಯ, ಇಡೀ ದಿನ ಸೆಲ್ವಾರ್‌ನಲ್ಲೇ ಇರಲು ತುಂಬಾ ಕಷ್ಟ ಆಗುತ್ತದೆ. 

ಇತ್ತೀಚೆಗೆ  ನೀವು ಮಾಡ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಿರಿ. ಆದರೆ ಯಾರಿಗೂ ಗುರುತೇ ಆಗಲಿಲ್ಲವಂತೆ?
ನಿರ್ದೇಶಕ ಪವನ್‌ ಕುಮಾರ್‌ ಜೊತೆ  ಎಫೆಕ್ಟ್ ಆಫ್ ಸೋಷಿಯಲ್‌ ಮೀಡಿಯಾ ಕಿರುಚಿತ್ರದಲ್ಲಿ ನಟಿಸಿದ್ದೆ. ಮಾಡರ್ನ್ ಡ್ರೆಸ್‌ ತೊಟ್ಟು ಮಾಡ್‌ ಆಗಿ ಕಾಣಿಸಿಕೊಂಡಿದ್ದೆ. ಎಷ್ಟೋ ಜನಕ್ಕೆ ಆ ಕಿರುಚಿತ್ರದಲ್ಲಿ ಇರುವುದು ನಾನೇ ಎಂದು ಗೊತ್ತಾಗಲೇ ಇಲ್ಲ. 

ಸಿನಿಮಾ ಕ್ಷೇತ್ರಕ್ಕೆ ಜಿಗಿಯುವ ಯೋಚನೆ ಇದೆಯೇ?
ಇದೆ. ಈಗಾಗಲೇ ಸಾಕಷ್ಟು ಆಫ‌ರ್‌ಗಳು ಬರುತ್ತಿವೆ. ಆದರೆ ಧಾರಾವಾಹಿ ಮುಗಿಯುವವರೆಗೂ ಸಿನಿಮಾಕ್ಕೆ ಹೋಗುವುದಿಲ್ಲ. ಮುಗಿದ ಮೇಲೆ ಖಂಡಿತಾ ಹೋಗುತ್ತೇನೆ.

ಸೆಟ್‌ನಲ್ಲಿ ತುಂಬಾ ಮಾತಾಡ್ತೀರಂತೆ?
ಸೆಟ್‌ನಲ್ಲಿ ಮಾತ್ರವಲ್ಲ, ಮನೆಯಲ್ಲೂ ತುಂಬಾ ಮಾತಾಡುತ್ತೇನೆ. ನಾನು ಮನೆಯಲ್ಲಿ ಇಲ್ಲದೇ ಇರುವುದರಿಂದ ನನ್ನ ಅಪ್ಪ, ಅಮ್ಮ, ಅಣ್ಣನಿಗೆ ತುಂಬಾ ಬೇಸರವಾಗಿದೆ.  ನಾನು ಮಂಗಳೂರು ಬಿಟ್ಟು ಬೆಂಗಳೂರಿಗೆ ಬಂದ ಹೊಸತರಲ್ಲಿ ನನ್ನ ಆಪ್ತ ಸ್ನೇಹಿತೆಯರು ನೀನಿಲ್ಲದೇ ಬೋರ್‌ ಆಗ್ತಿದೆ ವಾಪಸ್ಸು ಬಂದುಬಿಡು ಎಂದು ಅತ್ತಿದ್ದೂ ಇದೆ. ನಾನು ಸದಾ ಮಾತಾಡುತ್ತಾ ತಮಾಷೆ ಮಾಡುತ್ತಾ ಎಲ್ಲರನ್ನು ನಗಿಸುತ್ತಾ ಇರುತ್ತೇನೆ. 

ಬಿಡುವಿನ ಸಮಯದಲ್ಲಿ ಏನು ಮಾಡುತ್ತೀರ?
ಮೊಬೈಲ್‌ನಲ್ಲೇ ಕಳೆದು ಹೋಗುತ್ತೇನೆ. ಹಿಂದಿ ಧಾರಾವಾಹಿಗಳನ್ನು ಹೆಚ್ಚಾಗಿ ನೋಡುತ್ತೇನೆ. ಕಲಾವಿದರ ನಟನೆಯನ್ನು ಏಕಾಗ್ರತೆಯಿಂದ ಗಮನಿಸುತ್ತೇನೆ. ವಿಶೇಷವಾಗಿ ಅಳುವುದನ್ನು ಮತ್ತು ವಿಚಿತ್ರ ಹಾವಾಭಾವಗಳನ್ನು ಗಮನಿಸುತ್ತೇನೆ. 

ನಿಮ್ಮ ದಿನಚರಿ ಹೇಗೆ ಆರಂಭವಾಗುತ್ತದೆ?
ಎದ್ದ ತಕ್ಷಣ ಮೊದಲು ನೋಡುವುದೇ ಮೊಬೈಲನ್ನು. ವಾಟ್ಸ್‌ಆ್ಯಪ್‌ನಲ್ಲಿ ಎಲ್ಲರಿಗೂ ಗುಡ್‌ ಮಾರ್ನಿಂಗ್‌ ಮೆಸೇಜ್‌ ಮಾಡುತ್ತೇನೆ. ನಂತರ ರೆಡಿಯಾಗಿ ಶೂಟಿಂಗ್‌ಗೆ ಹೊರಡುತ್ತೇನೆ. ದಾರಿಯಲ್ಲಿ ಕಾರಿನಲ್ಲಿ ಕೂತು ಅಮ್ಮನ ಜೊತೆ ಮಾತನಾಡುತ್ತೇನೆ. ನನ್ನ ಮನೆಯಿಂದ ಮಾತನಾಡಲು ಆರಂಭಿಸಿದರೆ ನಿಲ್ಲಿಸುವುದು ಸೆಟ್‌ ತಲುಪಿದ ಬಳಿಕವೇ. ಪಾಪ ಬೆಳಗ್ಗೆ  ಅಮ್ಮನಿಗೆ ಮನೆಯಲ್ಲಿ ಕೆಲಸಗಳಿರುತ್ತವೆ. ಆದರೂ ಸಮಯ ಹೊಂದಿಸಿಕೊಂಡು ನನ್ನ ಜೊತೆ ಮಾತನಾಡುತ್ತಾರೆ. 

ನಟಿಯಾದ ಬಳಿಕ ಏನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೀರ?
ಬೆಳಗಿನ ಸುಖ ನಿದ್ರೆ. ಕಾಲೇಜಿಗೆ ಹೋಗುವಾಗ ದಿನಾ 8ಕ್ಕೆ ಏಳುತ್ತಿದ್ದೆ. ಈಗ 5 ಗಂಟೆಗೇ ಏಳಬೇಕು.

ನಿಮ್ಮ ದೌರ್ಬಲ್ಯ ಮತ್ತು ಸಾಮರ್ಥ್ಯ?
ಮಾತು, ಮಾತು, ಮಾತು…

ಡಯೆಟ್ಟು ಗಿಯೆಟ್ಟು
ನಿಮ್ಮ ಡಯಟ್‌ ಬಗ್ಗೆ ಸ್ವಲ್ಪ ಹೇಳಿ?

ಶೂಟಿಂಗ್‌ ಇದ್ದಾಗ ಬೆಳಗ್ಗೆ ಸೆಟ್‌ನಲ್ಲಿ ಉಪಹಾರಕ್ಕೆ ಇಡ್ಲಿ ಅಥವಾ ರೈಸ್‌ ತಿನ್ನುತ್ತೇನೆ. 11 ಗಂಟೆಗೆ ಒಮ್ಮೆ ಗ್ರೀನ್‌ ಟೀ, ಮಧ್ಯಾಹ್ನ 2 ಚಪಾತಿ ಅಥವಾ 1 ಮುದ್ದೆ, 4 ಗಂಟೆಗೆ ಮತ್ತೆ ಗ್ರೀನ್‌ ಟೀ, ರಾತ್ರಿ ಮಲಗುವಾಗ ತರಕಾರಿ ಅಥವಾ ಹಣ್ಣುಗಳ ಸಲಾಡ್‌. 

ಡಯೆಟ್‌ ಬಗ್ಗೆ ನಿಮ್ಮ ವ್ಯಾಖ್ಯಾನ?
ಡಯೆಟ್‌ ಎಂದರೆ ಊಟ ಬಿಡುವುದಲ್ಲ. ಒಂದೇ ಸರಿ ಹೊಟ್ಟೆ ತುಂಬಾ ತಿನ್ನುವುದರ ಬದಲು 5 ಹೊತ್ತು ತಿನ್ನಬೇಕು. ಹೊಟ್ಟೆ ತುಂಬುವಷ್ಟು ತಿನ್ನಬೇಕು ಆದರೆ ಹೆಚ್ಚಾಗುವಷ್ಟು ತಿನ್ನಬಾರದು.

ಇಷ್ಟದ ಡ್ರೆಸ್‌? 
ಜೀನ್ಸ್‌, ಟಾಪ್‌. ತಮಾಷೆ ಗೊತ್ತಾ? ನಾನು ಚಿಕ್ಕವಳಿದ್ದಾಗ ಅಮ್ಮ ಪ್ಯಾಂಟ್‌ ಶರ್ಟ್‌ ಹಾಕಿಕೊ ಅಂತ ಒತ್ತಾಯ ಮಾಡುತ್ತಿದ್ದರು ಆದರೆ ನಾನು ಹಾಕಿಕೊಳ್ಳುವುದಿಲ್ಲ ಅಂತ ಹಠ ಮಾಡುತ್ತಿದ್ದೆ. ಈಗ ಎಲ್ಲಾ ಉಲ್ಟಾ ಆಗಿದೆ. ಅಮ್ಮ ಸೆಲ್ವಾರ್‌, ಗಾಗ್ರಾ ಚೋಲಿ ಹಾಕು ಅಂತ ಹೇಳ್ತಿರ್ತಾರೆ ನಾನು ಮಾತ್ರ ಪ್ಯಾಂಟ್‌ ಶರ್ಟ್‌ ಬಿಟ್ಟು ಬೇರೇನು ಹಾಕಿಕೊಳ್ಳಲ್ಲ ಅಂತ ಹಠ ಮಾಡ್ತೀನಿ. 

ಚರ್ಮದ ಆರೈಕೆಗಾಗಿ ಏನು ಮಾಡುತ್ತೀರಿ?
ಶೂಟಿಂಗ್‌ ಮುಗಿದ ಬಳಿಕ ಜಾನ್‌ಸನ್‌ ಬೇಬಿ ಆಯಿಲ್‌ನಿಂದ ಮೇಕಪ್‌ ತೆಗೆಯುತ್ತೇನೆ. ಬಳಿಕ ಟೊಮಾಟೊ ರಸವನ್ನು ಹಚ್ಚಿಕೊಳ್ಳುತ್ತೇನೆ. ಬಿಡುವಿದ್ದಾಗ ಮುಲ್ತಾನಿ ಮಿಟ್ಟಿ ಹಚ್ಚಿಕೊಳ್ಳುತ್ತೇನೆ. ಆದರೆ ಲಿಪ್‌ಸ್ಟಿಕ್‌ ಮತ್ತು ಐಲೈನರ್‌ ಇಲ್ಲದೇ ನಾನು ಮನೆಯಿಂದ ಹೊರಗೆ ಕಾಲಿಡುವುದಿಲ್ಲ.

ಕಿಚನ್‌ ಸಮಾಜಾರ್‌
ಅಮ್ಮನ ಊಟ ಮಿಸ್‌ ಮಾಡಿಕೊಳ್ಳುವುದಿಲ್ಲವೇ?
ಮಾಡ್ಕೊತೀನಿ. ಇಲ್ಲಿ ಇಡ್ಲಿ, ವಡೆ,ದೋಸೆ ತಿಂದು ತಿಂದು ಬೇಜಾರಾಗಿರತ್ತೆ. ಶೂಟಿಂಗ್‌ ಸೆಟ್‌ನಲ್ಲೂ ಅದನ್ನೇ ಹೆಚ್ಚಾಗಿ ತಿನ್ನುತ್ತೇನೆ. ನಾನು ಮನೆಗೆ ಹೋದಾಗ ಅಮ್ಮ ಆ ತಿಂಡಿಗಳನ್ನು ಮಾಡಿದರೆ ಕೋಪ ಬರುತ್ತದೆ. ಮಂಗಳೂರು ಸ್ಪಷಲ್‌ ಅಡುಗೆಗಳು ಅದರಲ್ಲೂ ಪತ್ರೊಡೆ ಮಾಡಿಸಿಕೊಂಡು ತಿನ್ನುತ್ತೇನೆ. 

ತುಂಬಾ ಇಷ್ಟದ ಖಾದ್ಯ ಯಾವುದು?
ಪಾನಿಪೂರಿ. ಬೇಜಾರಾದಾಗಲೆಲ್ಲಾ ಆಚೆ ಹೋಗಿ ಪಾನಿಪೂರಿ ತಿನ್ನುತ್ತೇನೆ. ಮನೆಯಲ್ಲಿ ಒಬ್ಬಳೇ ಇದ್ದಾಗ ನಾನೇ ತಯಾರಿಸಿ ತಿನ್ನುತ್ತೇನೆ. ನಾನೇ ತಯಾರಿಸಿ ತಿನ್ನುವುದರಲ್ಲಿ ಹೆಚ್ಚಿನ ಮಜಾ ಸಿಗುತ್ತದೆ. ಪುಳಿಯೊಗರೆ ಪಾಯಿಂಟ್‌ನಲ್ಲಿ ಸಿಗುವ ಪುಳಿಯೊಗರೆ ಎಂದರೆ ತುಂಬಾ ಇಷ್ಟ. ಮನೆಯಲ್ಲಿ ಅಮ್ಮ ಪುಳಿಯೊಗರೆ ಮಾಡಿದರೆ ಜಗಳ ಮಾಡುತ್ತಿದ್ದೆ. ಆದರೆ ಪುಳಿಯೊಗರೆ ಪಾಯಿಂಟ್‌ನ ಪುಳಿಯೊಗರೆ ತಿಂದಮೇಲೆ ನಾನು ಪುಳಿಯೊಗರೆ ಫ್ಯಾನ್‌ ಆಗಿದ್ದೇನೆ.

ಪಾನಿಪೂರಿ ಬಿಟ್ಟು ಬೇರೆ ಯಾವೆಲ್ಲಾ ಅಡುಗೆ ತಯಾರಿಸುತ್ತೀರಿ?
ನನಗೆ ಅಡುಗೆಯಲ್ಲಿ ತುಂಬಾ ಆಸಕ್ತಿ ಇದೆ. ಅದು ನನ್ನ ಫೇವರೆಟ್‌ ಹವ್ಯಾಸ. ಗೂಗಲ್‌ ನೋಡಿಕೊಂಡು ತುಂಬಾ ಥರದ ಖಾದ್ಯಗಳನ್ನು ತಯಾರಿಸುತ್ತೇನೆ. ಆದರೆ ಒಮ್ಮೆ ಮಾಡಿದ ಖಾದ್ಯ ಮತ್ತೂಮ್ಮೆ ಮಾಡಿದ್ದು ಬಹಳ ಕಡಿಮೆ. ಮನೆಯಲ್ಲಿದ್ದಾಗ ತುಂಬಾ ಬಗೆಯ ಆಹಾರ ತಯಾರಿಸುತ್ತೇನೆ, ಬೇಕಾದ ಪದಾರ್ಥಗಳನ್ನು ಅಣ್ಣ ತಂದು ಕೊಡುತ್ತಾನೆ.

ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡೋದಾದರೆ ಯಾವ ರೆಸ್ಟೊರೆಂಟ್‌ಗೆ ಹೋಗಲು ಇಷ್ಟ ಪಡುತ್ತೀರ?
ಬೆಂಗಳೂರಿಗೆ ಬಂದ ಮೇಲೆ ಬ್ಯುಸಿ ಆಗಿದ್ದೇನೆ. ಪಾರ್ಟಿ ಮಾಡುವ ಅವಕಾಶ ಸಿಗುವುದೇ ಕಡಿಮೆಯಾಗಿದೆ. ಮಂಗಳೂರಿನಲ್ಲಿದ್ದಾಗ ಫ್ರಂಡ್ಸ್‌ ಎಲ್ಲಾ ಸೇರಿ ಓಷನ್‌ ಪರ್ಲ್ ಮತ್ತು ವಿಲೇಜ್‌ಗೆ ಹೆಚ್ಚಾಗಿ ಹೋಗುತ್ತಿದ್ದೆವು. 

ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next