Advertisement

ರೈಲು ನಿಲ್ದಾಣದ ಮುಂದೆ ಮಲಗಿದ ವಾಟಾಳ್‌

11:29 AM Nov 10, 2017 | |

ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಾಸಕ ವಾಟಾಳ್‌ ನಾಗರಾಜ್‌, ಮೈಸೂರು ವಿದ್ಯಾರ್ಥಿ ಒಕ್ಕೂಟ ಹಾಗೂ ಕರ್ನಾಟಕ ದಲಿತ ವೇದಿಕೆ ವೇದಿಕೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

Advertisement

ಚಾಪೆ ಹಾಸಿ ಮಲಗಿದರು: ರಾಜ್ಯ-ಕೇಂದ್ರ ಸರ್ಕಾರಗಳು ಮಹದಾಯಿ ಮತ್ತು ಕಳಸಾ ಬಂಡೂರಿ ವಿಷಯದಲ್ಲಿ ಆಗಿರುವ ಅನ್ಯಾಯ ಬಗೆಹರಿಸುವಲ್ಲಿ ವಿಫ‌ಲವಾಗಿವೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನಗರದ ರೈಲ್ವೆ ನಿಲ್ದಾಣದ ಎದುರು ಚಾಪೆ ಹಾಸಿಕೊಂಡು ಮಲಗುವ ಮೂಲಕ ಪ್ರತಿಭಟಿಸಿದರು.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಜನರು ನೀರಿಗಾಗಿ ಪರದಾಡುತ್ತಿದ್ದು ಸರ್ಕಾರಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ. ಇನ್ನೂ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಲೋಕಸಭೆಯಲ್ಲಿ ಚಕಾರವೆತ್ತದೆ ಮೌನಕ್ಕೆ ಶರಣಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 

ಕನ್ನಡ ಧ್ವಜ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, ಕನ್ನಡ ಬಾವುಟವನ್ನು ಸ್ವಲ್ಪವೂ ಬದಲಿಸಬಾರದು. ಇನ್ನು, ಮುಂದಿನ 2018ರ ವಿಧಾನಸಭೆ ಚುನಾವಣೆಗೆ ತಾವು ಚಾಮರಾಜನಗರದಿಂದ ಸ್ಪರ್ಧಿಸಲಿದ್ದೇನೆಂದರು. ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮತ್ತಿತರರಿದ್ದರು. 

ವಿದ್ಯಾರ್ಥಿಗಳಿಗೆ ಅನ್ಯಾಯ: ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ ವಿಷಯದ ಪ್ರಶ್ನೆ ಪ್ರತಿಕೆಯಲ್ಲಿ ಹಳೆ ಪ್ರಶ್ನೆ ಪ್ರತಿಕೆಯನ್ನು ನಕಲು ಮಾಡಿ, ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿ ಮೈಸೂರು ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಮೈಸೂರು ವಿವಿ ಕ್ರಾಪರ್ಡ್‌ ಭವನದ ಎದುರು ಪ್ರತಿಭಟನೆ ನಡೆಸಿದರು.

Advertisement

ವ್ಯವಸ್ಥಿತವಾಗಿ ಪ್ರಶ್ನೆಪ್ರತಿಕೆ ರೂಪಿಸಲು ವಿಫ‌ಲವಾಗಿರುವ ಮೈಸೂರು ವಿವಿ, 2013ರ ಪಿಎಚ್‌ಡಿ ಪ್ರವೇಶಕ್ಕಾಗಿ ರಾಜ್ಯ ಶಾಸ್ತ್ರ ವಿಷಯದಲ್ಲಿ ನಡೆದ ಪ್ರಶ್ನೆ ಪ್ರತಿಕೆಯ 18 ಪ್ರಶ್ನೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಹಳೆ ಪ್ರಶ್ನೆಪತ್ರಿಕೆ ಬಳಸಲಾಗಿದೆ.

ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯಶಾಸ್ತ್ರ ವಿಷಯದಲ್ಲಿ ಮರು ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕೆಂದು ಒತ್ತಾಯಿಸಿ ಮೈಸೂರು ವಿವಿ ಕುಲಸಚಿವೆ ಡಿ.ಭಾರತಿ ಅವರಿಗೆ ಮನವಿ ಸಲ್ಲಿಸಿದರು. ಒಕ್ಕೂಟದ ಅಧ್ಯಕ್ಷ ಎಂ.ಪವನ್‌ಕುಮಾರ್‌, ಕವಿರಾಜ್‌, ಪ್ರಸಾದ್‌, ಮಾದೇಶ್‌, ಚಂದನ್‌ ಮತ್ತಿತರರಿದ್ದರು.

ಸರ್ಕಾರದ ಬೊಕ್ಕಸಕ್ಕೆ ನಷ್ಟ: ಚಾಮುಂಡಿಬೆಟ್ಟ ಗ್ರಾಪಂ ಅಧಿಕಾರಿಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಚಾಮುಂಡಿಬೆಟ್ಟಕ್ಕೆ ಆಗಮಿಸುವ ವಾಹನಗಳಿಂದ ಟೋಲ್‌ ಸಂಗ್ರಹಕ್ಕಾಗಿ ಟೆಂಡರ್‌ ತೆಗದುಕೊಂಡು ಬಿಡ್ಡುದಾರರು ಸರ್ಕಾರಕ್ಕೆ ಪಾವತಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿದರು.

ಇದಲ್ಲದೆ ಚಾಮುಂಡಿಬೆಟ್ಟದ ಸಾಗುವಳಿ ಜಮೀನಿನಲ್ಲಿ ವಾಣಿಜ್ಯ ಮಳಿಗೆಗಳನ್ನು ಅನಧಿಕೃತವಾಗಿ ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಜಿಲ್ಲಾಡಳಿತ ಪಂಚಾಯ್ತಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಟೆಂಡರ್‌ದಾರರ ವಿರುದ್ಧ ಕೇಸು ದಾಖಲಿಸಿ ಕ್ರಮವಹಿಸಬೇಕೆಂದರು.

ರಾಜಾಧ್ಯಕ್ಷ ಡಿ.ಎಸ್‌.ಸಿದ್ದಲಿಂಗಮೂರ್ತಿ, ರಾಜ್ಯ ಉಪಾಧ್ಯಕ್ಷ ಈಶ್ವರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ್‌, ವಿಭಾಗೀಯ ಅಧ್ಯಕ್ಷ ಎಂ.ರೇವಣ್ಣ, ಹಿನಕಲ್‌ ಸೋಮು, ಧನಂಜಯ ಮತ್ತಿತರರಿದ್ದರು.
 
ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಜತೆಗೆ ಸಂಸತ್‌ ಭವನದ ಎದುರು ಮಹಾವೀರ ಮತ್ತು ಟಿಪ್ಪುಸುಲ್ತಾನ್‌ ಪ್ರತಿಮೆ ನಿರ್ಮಿಸಬೇಕೆಂಬುದು ನಮ್ಮ ಆಶಯ. ಈ ಕುರಿತು ಟಿಪ್ಪು ಜಯಂತಿಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ.
-ವಾಟಾಳ್‌ ನಾಗರಾಜ್‌, ವಾಟಾಳ್‌ ಕನ್ನಡ ಪಕ್ಷದ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next