ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜು ಜಲಾಶಯದ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದ ವಾಟಾಳ್, ಜಲಾಶಯದ ಕೆಳಗಿನ ಕಾವೇರಿ ಪ್ರತಿಮೆಗೆ ನಮನ ಸಲ್ಲಿಸಿದ ಬಳಿಕ, ಅಣೆಕಟ್ಟೆಯ ಮುಖ್ಯದ್ವಾರದ ಮುಂದೆ ರಸ್ತೆಯಲ್ಲಿ ಮಲಗಿ ರಾಜ್ಯ ಹಾಗೂ ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಕಾವೇರಿ ಜಲನಿರ್ವಹಣಾ ಮಂಡಳಿಗೆ ಆಗ್ರಹಿಸಿದ ಅವರು, ಕಾವೇರಿ ಪ್ರಾಧಿಕಾರ ರಚನೆ ರಾಜ್ಯಕ್ಕೆ ಮರಣ ಶಾಸನ ಇದ್ದಂತೆ ಎಂದು ವಾಟಾಳ್ ನಾಗರಾಜು ಆಕ್ರೋಶ ವ್ಯಕ್ತಪಡಿಸಿ, ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕಡೆಗಣನೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರವನ್ನು ವಿರೋಧಿಸುವುದಾಗಿ ರಾಜ್ಯ ಬಿಜೆಪಿ ನಾಯಕರು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಈಗ ಅಧಿಕಾರಿಗಳನ್ನೇ ಪ್ರಾಧಿಕಾರದ ಸಭೆಗೆ ಕಳುಹಿಸುವ ಮೂಲಕ ಅಧಿಕಾರಕ್ಕೆ ಬಂದ ನಂತರ ಕಾವೇರಿ ಪ್ರಾಧಿಕಾರವನ್ನು ಒಪ್ಪಿಕೊಂಡಂತಿದೆ. ಕೇಂದ್ರ ಸರ್ಕಾರ ತಮಿಳುನಾಡಿನ ಕೈಗೊಂಬೆಯಾಗಿದೆ. ತಮಿಳುನಾಡಿನ ಹಿತಕ್ಕಾಗಿ ಕರ್ನಾಟಕ ರಾಜ್ಯವನ್ನು ಕಡೆಗಣಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ರೈತರಿಗೆ ಅನ್ಯಾಯ: ಕಾವೇರಿ ಅಣೆಕಟ್ಟೆ ಸುತ್ತಲಿನ ಪ್ರದೇಶ ಅಣೆಕಟ್ಟೆಯಲ್ಲಿ ನೀರಿಲ್ಲದೆ ಕ್ರೀಡಾ ಮೈದಾನದಂತೆ ಕಾಣುತ್ತಿದೆ. ರಾಜ್ಯದ ಅನೇಕ ಕೆರೆ, ಕಟ್ಟೆಗಳಲ್ಲೂ ನೀರಿಲ್ಲ, ಜನ- ಜಾನು ವಾರುಗಳಿಗೆ ಕುಡಿಯುವ ನೀರಿಲ್ಲದೆ ತೊಂದರೆ ಪಡುತ್ತಿದ್ದಾರೆ. ಈಗಿದ್ದರೂ ಪ್ರಾಧಿಕಾರ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡುವಂತೆ ಸೂಚಿಸುವ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಣೆಕಟ್ಟೆಯಿಂದ ನೀರು ಬಿಡುತ್ತಿರುವುದೇ ಅಕ್ಷಮ್ಯ ಅಪರಾಧ. ಪ್ರಾಧಿಕಾರದ ಆದೇಶವನ್ನು ರಾಜ್ಯ ಸರ್ಕಾರ ಒಪ್ಪಬಾರದು. ಯಾವುದೇ ಕಾರಣಕ್ಕೂ ತಮಿಳು ನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆ ಆರಂಭಿಸಿ: ರಾಜ್ಯ ಸರ್ಕಾರ ಕೂಡಲೇ ಮೇಕೆದಾಟು ಯೋಜನೆ ಆರಂಭಿಸಬೇಕು. ಮೇಕೆದಾಟು ಯೋಜನೆಗೂ ತಮಿಳುನಾಡಿಗೂ ಯಾವುದೇ ಸಂಬಂಧ ಇಲ್ಲ. ಯೋಜನೆ ಆರಂಭಕ್ಕೆ ರಾಜ್ಯ ಸರ್ಕಾರಕ್ಕೆ ಇನ್ನು ಒಂದು ವಾರದ ಗಡುವು ನೀಡುತ್ತೇವೆ. ವಾರದೊಳಗೆ ಯೋಜನೆ ಆರಂಭಿಸಿದಿದ್ದರೆ ನಾವೇ ಶಂಕುಸ್ಥಾಪನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಟಿಪ್ಪು ಜಯಂತಿ ರದ್ಧಿಗೆ ಖಂಡನೆ: ಟಿಪ್ಪು ದೇಶ ಕಂಡ ಅಪ್ರತಿಮ ವೀರ, ವಿಧಾನಸೌಧದ ಎದುರು ಟಿಪ್ಪು ಪ್ರತಿಮೆ ರಚಿಸಬೇಕು. ಟಿಪ್ಪು ಜಯಂತಿ ರದ್ದುಪಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೆಆರ್ ಎಸ್ ಮುಖ್ಯ ದ್ವಾರದ ಬಳಿ ಮಲಗಿ ಧರಣಿ ನಡೆಸುತ್ತಿದ್ದ ವಾಟಾಳ್ ನಾಗರಾಜು ಅವರನ್ನು ಪೊಲೀಸರು ಎತ್ತಿಕೊಂಡು ಬಂದು ದ್ವಾರದ ಹೊರಗೆ ಬಿಟ್ಟು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಪಾರ್ಥಸಾರಥಿ, ಮುನಾವರ್ ಪಾಷಾ, ವಿಶ್ವನಾಥ್ ಗೌಡ, ಸಚ್ಚಿನ್ ಸೇರಿದಂತೆ ವಾಟಾಳ್ ನಾಗರಾಜು ಅಭಿಮಾನಿಗಳು ಹಾಜರಿದ್ದರು.