ಬೆಂಗಳೂರು: ಮಾಜಿ ಶಾಸಕ ಕನ್ನಡ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರಿಗೆ ಇಂದು ಪತ್ನಿ ವಿಯೋಗವಾಗಿದೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ (60ವರ್ಷ) ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಚಿಕಿತ್ಸೆಗಾಗಿ ಜ್ಞಾನಾಂಬಿಕೆ ಅವರನ್ನು ಶೇಷಾದ್ರಿಪುರಂನ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಇಂದು ರಾತ್ರಿ 7.30ರ ಸುಮಾರಿಗೆ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪಾರ್ಥಿವ ಶರೀರವನ್ನು ಡಾಲರ್ಸ್ ಕಾಲನಿಯಲ್ಲಿರುವ ವಾಟಾಳ್ ಅವರ ಮನೆಗೆ ಕೊಂಡೊಯ್ಯಲಾಗಿದೆ.
ಇಲ್ಲಿಂದ ಮೃತದೇಹವನ್ನು ಬುಧವಾರ ಬೆಳಗ್ಗೆ 9-00 ಗಂಟೆಗೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಜಮೀನಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.